ಬೆಂಗಳೂರು/ಕೇಪ್‌ಟೌನ್: 2016ರಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯ (RSS Worker Rudresh Murder Case) ಪ್ರಕರಣವನ್ನು ಭೇದಿಸುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ರುದ್ರೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕುಖ್ಯಾತ ಗ್ಯಾಂಗ್‌ಸ್ಟರ್ ಮೊಹಮ್ಮದ್ ಗೌಸ್ ನಿಯಾಜಿಯನ್ನು (Mohammed Gaus Niyazi) ಎನ್‌ಐಎ ಅಧಿಕಾರಿಗಳು ದಕ್ಷಿಣ ಆಫ್ರಿಕಾದಲ್ಲಿ (South Africa) ಬಂಧಿಸಿದ್ದಾರೆ. ಇದು ಪ್ರಕರಣದಲ್ಲಿ ಎನ್‌ಐಎಗೆ ಸಿಕ್ಕ ಮಹತ್ವದ ಮುನ್ನಡೆ ಎಂದೇ ಹೇಳಲಾಗುತ್ತಿದೆ.
2014ರ ಮುಂಬೈ ಗಲಭೆಯ ಪ್ರಮುಖ ಆರೋಪಿಯಾಗಿರುವ ಮೊಹಮ್ಮದ್ ಗೌಸ್ ನಿಯಾಜಿಯು ರುದ್ರೇಶ್ ಹತ್ಯೆ ಬಳಿಕ ದೇಶ ಬಿಟ್ಟು ಪರಾರಿಯಾಗಿದ್ದ. ಆದರೆ, ಈತನ ಪತ್ತೆಗೆ ಗುಜರಾತ್ ಭಯೋತ್ಪಾದನೆ ನಿಗ್ರಹ ದಳವು (Gujarat ATC) ನಿರಂತರವಾಗಿ ಪ್ರಯತ್ನಿಸಿತ್ತು. ಎಟಿಎಸ್ ಸತತ ಪ್ರಯತ್ನದ ಫಲವಾಗಿ ಮೊಹಮ್ಮದ್ ಗೌಸ್ ನಿಯಾಜಿಯು ದಕ್ಷಿಣ ಆಫ್ರಿಕಾದಲ್ಲಿದ್ದಾನೆ ಎಂಬುದನ್ನು ಪತ್ತೆಹಚ್ಚಿತ್ತು.
ಮೊಹಮ್ಮದ್ ಗೌಸ್ ನಿಯಾಜಿಯನ್ನು ಪತ್ತೆಹಚ್ಚಿದ್ದ ಎಟಿಎಸ್, ಈ ಕುರಿತು ಎನ್‌ಐಎಗೆ ಮಹತ್ವದ ಸುಳಿವು ನೀಡಿತ್ತು. ಇದಾದ ಬಳಿಕ, ಎನ್‌ಐಎ ಅಧಿಕಾರಿಗಳು ದಕ್ಷಿಣ ಆಫ್ರಿಕಾ ಅಧಿಕಾರಿಗಳಿಗೆ ಮೊಹಮ್ಮದ್ ಗೌಸ್ ನಿಯಾಜಿಯ ಕುರಿತು ಮಾಹಿತಿ ಒದಗಿಸಿತ್ತು. ಈಗ ದಕ್ಷಿಣ ಆಫ್ರಿಕಾ ಅಧಿಕಾರಿಗಳ ನೆರವಿನಿಂದ ಎನ್‌ಐಎ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಈತನ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು.
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಪ್ರಮುಖ ನಾಯಕನಾಗಿರುವ ಮೊಹಮ್ಮದ್ ಗೌಸ್ ನಿಯಾಜಿಯು ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಕೂಡ ಎನಿಸಿದ್ದಾನೆ. ಈತನನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರುವ ಪ್ರಕ್ರಿಯೆಗೆ ಎನ್‌ಐಎ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ಮೊದಲು ಈತನನ್ನು ಮುಂಬೈಗೆ ಕರೆದುಕೊಂಡು ಬಂದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮೊಹಮ್ಮದ್ ಗೌಸ್ ನಿಯಾಜಿಯು ಪಿಎಫ್‌ಐನ ದಕ್ಷಿಣ ಭಾರತದ ಮುಖ್ಯಸ್ಥನಾಗಿದ್ದ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Sedition case: ಪಾಕ್ ಪರ ಘೋಷಣೆ ವಿವಾದ; ಬೀದಿಗಿಳಿದ ಜೆಡಿಎಸ್; ಬಂಧನಕ್ಕೆ ಪಟ್ಟು
ಏನಿದು ಪ್ರಕರಣ?
ಆರ್‌ಎಸ್‌ಎಸ್ ಮುಖಂಡ ಆರ್. ರುದ್ರೇಶ್ ಅವರನ್ನು 2016ರ ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇಬ್ಬರು ದುಷ್ಕರ್ಮಿಗಳು ಶಿವಾಜಿ ನಗರದ ಕಾಮರಾಜ ರಸ್ತೆಯಲ್ಲಿ ರುದ್ರೇಶ್ ಮೇಲೆ ದಾಳಿ ನಡೆಸಿ, ಹತ್ಯೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2016ರಲ್ಲಿಯೇ ಪಾಶಾ, ಅಹ್ಮದ್, ಸಾದಿಕ್, ಮುಜೀಬ್ ಉಲ್ಲಾ, ಷರೀಫ್ ಸೇರಿ ಪಿಎಫ್‌ಐನ ಹಲವು ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣವು ರಾಜ್ಯಾದ್ಯಂತ ಸುದ್ದಿಯಾದ ಬಳಿಕ ಎನ್‌ಐಎ ತನಿಖೆಗೆ ವಹಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ