ವಿಧಾನಸಭೆ: ರಾಜ್ಯ ಪೊಲೀಸ್ ಇಲಾಖೆಗೆ ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿಯಲ್ಲಿ ನಡೆದಿರುವ ಹಗರಣದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆ ಗದ್ದಲವಾಗಿ ಮಾರ್ಪಟ್ಟು, ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವೈಯಕ್ತಿಕ ಆರೋಪಗಳಿಗೂ ಕಾರಣವಾಯಿತು.
ನಿಯಮ 69 ರ ಅಡಿಯಲ್ಲಿ ಈ ಚರ್ಚೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಘೊಷಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸದನವನ್ನು ಬುಧವಾರಕ್ಕೆ ಮುಂದೂಡಿದರು.
ಪ್ರಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಗರಣದ ಆರಂಭದಿಂದಲೂ ನಡೆದುಬಂದ ದಾರಿಯನ್ನು ವಿವರಿಸಿದರು. ಒಂದು ಹಂತದಲ್ಲಿ ಮಾತನಾಡುತ್ತ, ಅನೇಕ ಬಾರಿ ಸದನದಲ್ಲಿ ಪ್ರಶ್ನೆ ಕೇಳಿದಾಗಲೂ, ಹಗರಣ ನಡೆದಿಲ್ಲ ಎಂದು ಸರ್ಕಾರ ಉತ್ತರ ನೀಡಿತ್ತು. ಸರ್ಕಾರ ಈ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿತು ಎಂದರು.
ಇದಕ್ಕೆ ಎದ್ದುನಿಂತ ಸಿಎಂ ಬೊಮ್ಮಾಯಿ, ಆರ್‌ಡಿ ಪಾಟೀಲ್ ಸ್ಟೇಟ್‌ಮೆಂಟ್ ಕೊಡುವಾಗ, ನಾನು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ನಿಂದ ಗ್ರಾಪಂ ಸದಸ್ಯನಾಗಿ, ಅಧ್ಯಕ್ಷನಾಗಿ ಆಯ್ಕೆಗಾಇದ್ದೇನೆ. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಪರಿಚಿತರು ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದರು.
ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಆರೋಪಪಟ್ಟಿಯನ್ನು ಸದನದಲ್ಲಿ ಮಂಡಿಸಿ. ಅವರ ಸ್ಟೇಟ್‌ಮೆಂಟ್ ಎಂದು ಬರೆದುಕೊಂಡು ಬಂದು ಹೇಳಿದರೆ ಸಾಲುವುದಿಲ್ಲ ಎಂದರು.
ಹಾಗಾದರೆ ನೀವು ಹೇಳಿದರೆ ಸತ್ಯ, ನಾವು ಹೇಳಿದ್ದು ಅಸತ್ಯವೇ? ಎಂದು ಹೇಳಿದರು. ಈ ಸಮಯದಲ್ಲಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಮಹಾಂತೇಶ್ ಪಾಟೀಲ್ ಕಾಂಗ್ರೆಸ್ ಬ್ಲಾಕ್ ಪ್ರೆಸಿಡೆಂಟ್ ಆಗಿದ್ದರು. ಆದರೆ ಆರ್‌ಡಿ ಪಾಟೀಲ್ ಕಾಂಗ್ರೆಸ್ ಪಕ್ಷದಲ್ಲಿರಲಿಲ್ಲ. ದಿವ್ಯಾ ಹಾಗರಿಯನ್ನು ದಿಶಾ ಸಮಿತಿ ಸೇರಿ ವಿವಿಧೆಡೆ ಶಿಫಾರಸು ಮಾಡಿದ್ದು ಬಿಜೆಪಿ ಎಂದು ಕೋಪಗೊಂಡರು.
ನಂತರ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಶಾಸಕ ಬಸವರಾಜ ದಡೇಸೂಗೂರು ಆಡಿಯೊ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ, ನಿವೃತ್ತ ಪೊಲೀಸ್ ಕಾನ್ಸ್‌ಟೇಬಲ್ ಪರಸಪ್ಪ ಆಡಿಯೊದಲ್ಲಿ ಹೇಳಿದ್ದಾರೆ. ಕೆಲಸ ಕೊಡಿಸಲು 15 ಲಕ್ಷ ರೂ. ಪಡೆದಿದ್ದಾರೆ ಎಂದು ಹೇಳಿದ್ದಾರೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಸವರಾಜ ದಡೇಸೂಗೂರು, ಪರಸಪ್ಪನ ಮಗ ಫಿಸಿಕಲ್ಲೇ ಪಾಸಾಗಿಲ್ಲ ಎಂದ ಮೇಲೆ ನಾನು ಹಣ ಹೇಗೆ ಪಡೆಯಲಿ? ಇದು ಬರೀ ಆರೋಪ ಎಂದು ಹೇಳಿದರು. ಈ ಸಮಯದಲ್ಲಿ ಸಿಟ್ಟಿಗೆದ್ದ ದಡೇಸೂಗೂರು, ಸ್ಕ್ಯಾಮ್ ರಾಮಯ್ಯ ಎಂದು ಭಿತ್ತಿಪತ್ರ ಪ್ರದರ್ಶನ ಮಾಡಿದರು. ಕೆಲಸಕ್ಕೆ ಬಾರದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಂತರ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ಮಾಡಿದ್ದಕ್ಕೆ ಮೂರು ನೋಟಿಸ್ ನೀಡಿದರು ಎಂದು ಆರೋಪಿಸಿದರು. ಈ ಸಮಯದಲ್ಲಿ ಕೆಲಕಾಲ ಸಿಎಂ. ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ಹರಿಹಾಯ್ದರು. ಹಗರಣ ನಡೆಸುವುದು ತಪ್ಪಲ್ಲ, ಹಗರಣ ನಡೆದಿದೆ ಎಂದು ಹೇಳುವುದು ತಪ್ಪೇ? ಎಂದು ಪ್ರಶ್ನಿಸಿದರು. ಸಿಎಂ ಬೊಮ್ಮಾಯಿ ಮಾತನಾಡಿ, ಇದು ದೊಡ್ಡ ಹಗರಣ ಎಂದಿದ್ದರು, ಸಾಕ್ಷಿ ಇದ್ದರೆ ಕೊಡಿ ಎಂದು ಸಮನ್ಸ್ ನೀಡಲಾಗಿದೆ ಅಷ್ಟೆ ಎಂದರು.
ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಿದ ಸರ್ಕಾರ ದಡೇಸೂಗೂರು ಅವರಿಗೆ ನೋಟಿಸ್ ನೀಡಲಿಲ್ಲ. ಮಾಜಿ ಮುಖ್ಯಮಂತ್ರಿ ಮಗ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಅವರಿಗೆ ನೋಟಿಸ್ ನೀಡಲಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಇಷ್ಟೆಲ್ಲದರ ನಂತರವೂ ಪರಸಪ್ಪ ಸೇರಿ ಎಲ್ಲ ವಿಚಾರಗಳನ್ನೂ ತನಿಖೆ ನಡೆಸಲಾಗುತ್ತದೆ ಎಂದರು.
ಅನೇಕ ಹೊತ್ತು ಮಾತನಾಡಿದ ಪ್ರಿಯಾಂಕ್ ಖರ್ಗೆ, ತಾವು ಪ್ರಕರಣದ ಕುರಿತು ಸಾಕ್ಷಿ ಇದೆ ಎಂದು ಹೇಳಿಲ್ಲ. ನಾನೇನಾದರೂ ಸುದ್ದಿಗೋಷ್ಠಿಯಲ್ಲಿ ಹಾಗೆ ಹೇಳಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ ಸರ್ಕಾರ ಕ್ಷಮೆ ಕೇಳಲಿ. ಈ ಹಿಂದೆ ಸರ್ಕಾರ ಹಗರಣ ನಡೆದೇ ಇಲ್ಲ ಎಂದು ಸರ್ಕಾರ ಹೇಳಿತ್ತು ಎಂದು ಆರೋಪಿಸಿದರು. ನಾನೊಬ್ಬ ಜವಾಬ್ದಾರಿಯುತ ಶಾಸಕನಾಗಿ, ನನಗೆ ಲಭಿಸಿದ ಸಮನ್ಸ್‌ಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡಿದ್ದೇನೆ ಎಂದರು.
ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ನಿಮ್ಮ ಬಳಿ ಆಡಿಯೋ ಇತ್ತು ಎಂದು ಅನೇಕ ಪತ್ರಿಕೆಗಳಲ್ಲಿ ವರದಿಯಾಗಿದೆ. ನಿಮ್ಮ ಬಳಿ ಸಾಕ್ಷ್ಯ ಇದ್ದಿದ್ದರಿಂದಲೇ ಕರೆದಿದ್ದಾರೆ. ಅದೆಲ್ಲವನ್ನೂ ನೀಡದೆ, ನಾನು ಹಾಗೆ ಹೇಳೇ ಇಲ್ಲ ಎಂದು ಸುಳ್ಳೂ ಹೇಳುತ್ತಿದ್ದಾರೆ. ನೀವು ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಹಾಗಾಗಿ ಹೀಗೆ ಹೇಳುತ್ತಿದ್ದೀರ ಎಂದು ಆರೋಪಿಸಿದರು.
ಈ ವೇಳೆ ತಾಳ್ಮೆ ಕಳೆದುಕೊಂಡ ಪ್ರಿಯಾಂಕ್ ಖರ್ಗೆ, ನಿಮ್ಮ ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿದ್ದರೆ ನಾನೇನು ಮಾಡಲು ಆಗುತ್ತದೆ? ನನ್ನನ್ನು ಬಂಧನ ಮಾಡಿ ಹಾಗಾದರೆ ಎಂದು ಹೇಳಿದರು. ಮತ್ತೆ ಮತ್ತೆ ಅನೇಕ ಬಾರಿ ಮಾತನಾಡುತ್ತ ಸರ್ಕಾರಕ್ಕೆ ನಾಚಿಕೆ ಆಗಬೇಕು, ತಾಕತ್ತಿದ್ದರೆ ಬಂಧಿಸಿ ಎಂದು ತಾಳ್ಮೆ ಕಳೆದುಕೊಂಡು ಅರಚಾಡಿದರು. ಮರುಪರೀಕ್ಷೆ ಯಾವಾಗ ಆಗುತ್ತದೆ? ಕೆಪಿಎಸ್‌ಸಿಯಲ್ಲಿ ಇಪ್ಪತ್ತು ಲಕ್ಷ ಜನ ಪರೀಕ್ಷೆ ಬರೆದಿದ್ದಾರೆ ಅದರ ಭವಿಷ್ಯ ಏನು ಎಂದು ಗೊತ್ತಾಗಬೇಕು, ನ್ಯಾಯಾಂಗ ತನಿಖೆ ನಡೆಯಬೇಕು ಎಂದರು.
ಪಾಯಿಂಟ್ ಆಫ್ ಆರ್ಡರ್
ಈ ಸಮಯದಲ್ಲಿ ಪಾಯಿಂಟ್ ಆಫ್ ಆರ್ಡರ್ ಪ್ರಶ್ನೆ ಎತ್ತಿದ ಕುಡಚಿ ಶಾಸಕ ಪಿ. ರಾಜೀವ್, ಪೊಲೀಸರು ಎರಡು ಕಾನೂನಿನ ಅಡಿಯಲ್ಲಿ ಸಮನ್ಸ್ ನೀಡಿದ್ದಾರೆ. ಮೊದಲನೆಯದು, ಅವರ ಬಳಿಯಿರುವ ಭೌತಿಕ ಸಾಕ್ಷಿಗಳನ್ನು ನೀಡಬೇಕು. ಎರಡನೆಯದು, ತಮಗೆ ಗೊತ್ತಿರುವ ಎಲ್ಲ ಮಾಹಿತಿಯನ್ನೂ ತನಿಖಾಧಿಕಾರಿಯ ಮುಂದೆ ಹೇಳಬೇಕು ಎಂದರು.
ಈ ಸಮಯದಲ್ಲಿ ಅನೇಕ ಹೊತ್ತು ಗಲಾಟೆ, ಗದ್ದಲ ನಡೆಯಿತು. ಪದೇಪದೆ ಸರ್ಕಾರದ ಸದಸ್ಯರು ಅಡ್ಡಿಪಡಿಸುವುದು ಸರಿಯಲ್ಲ ಎಂದು ಆಕ್ಷೆಪಿಸಿದ ಸಿದ್ದರಾಮಯ್ಯ, ಸಭಾಧ್ಯಕ್ಷರ ಪೀಠದೆದುರು ಜಮಾಯಿಸಿ ಪ್ರತಿಭಟಿಸಿದರು.ಎಲ್ಲ ಸದಸ್ಯರೂ ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.
ಗದ್ದಲದ ನಡುವೆಯೇ ಉತ್ತರ ನೀಡಿದ ಆರಗ ಜ್ಞಾನೇಂದ್ರ, ಸಂಪೂರ್ಣ ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತಿದೆ. ಯಾವ ಪ್ರತಿಪಕ್ಷಗಳನ್ನೂ ಗುರಿ ಮಾಡಲಾಗಿಲ್ಲ. ಅನೇಕರನ್ನು ಬಂಧಿಸಲಾಗಿದೆ. ಅನೇಕ ಸಾಕ್ಷಿಗಳನ್ನು ಸೀಜ್ ಮಾಡಲಾಗಿದೆ. ಆರೋಪಿಗಳ ಹೆಸರಿನಲ್ಲಿರುವ ಬ್ಯಾಂಕ್ ಲಾಕರ್‌ಗಳನ್ನೂ ಒಳಪಡಿಸಿಕೊಳ್ಳಲಾಗಿದೆ. ಪ್ರಿಯಾಂಕ್ ಖರ್ಗೆ ಅವರು ಸುಖಾ ಸುಮ್ಮನೆ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಉತ್ತರಿಸಿದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರು. ಗೃಹಸಚಿವರು ಸಮರ್ಥರಿದ್ದದ್ದರಿಂದಲೇ ಇಷ್ಟು ಉನ್ನತ ಅಧಿಕಾರಿಗಳನ್ನೂ ಬಂಧಿಸಲಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಈ ಹಗರಣವನ್ನು ಹೊರಕ್ಕೇ ಬರಲು ಬಿಡುತ್ತಿರಲಿಲ್ಲ ಎಂದರು. ನಂತರ ಗೋವಿಂದ ಕಾರಜೋಳ ಅವರೂ ತಮ್ಮ ಅಭಿಪ್ರಾಯ ಮಂಡಿಸಿದರು. ನಿಯಮ 69ರ ಅಡಿಯಲ್ಲಿ ಈ ವಿಚಾರದಲ್ಲಿ ಚರ್ಚೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದ ಸ್ಪೀಕರ್ ಕಾಗೇರಿ, ಸದನವನ್ನು ಬುಧವಾರಕ್ಕೆ ಮುಂದೂಡಿದರು.
ಕೊನೆ ಚುನಾವಣೆ ಎಂದೇ ಅನೇಕರನ್ನು ಕಳಿಸಿದಿರಿ !
ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಲು ಸಿಎಂ ಬೊಮ್ಮಾಯಿ ಎದ್ದುನನಿಲ್ಲುತ್ತಿದ್ದದ್ದನ್ನು ಕಂಡ ಸಿದ್ದರಾಮಯ್ಯ, ನಾವೇನೋ ಕೊನೆಗೆ ಬಂದಿದ್ದೇವೆ, ನೀವು ಇನ್ನೂ ಸಾಕಷ್ಟು ವರ್ಷ ರಾಜಕಾರಣ ಮಾಡಬೇಕು ಎಂದರು. ಸಿಎಂ ಬೊಮ್ಮಾಯಿ ಎದ್ದುನಿಂತರು. ಸಿದ್ದರಾಮಯ್ಯ ಅವರ ಮೆಮೊರಿ ಪವರ್ ತುಂಬಾ ಚೆನ್ನಾಗಿದೆ. ಹೀಗೆಯೇ, ನನ್ನದು ಕೊನೆಯ ಚುನಾವಣೆ ಎನ್ನುತ್ತಲೇ ಬಹಳಷ್ಟು ಜನಗಳನ್ನು ಕಳಿಸಿದರು. ಇದಕ್ಕೆ ಮಾತನಾಡಿದ ಸಿದ್ದರಾಮಯ್ಯ, ಎಸ್.ಆರ್. ಬೊಮ್ಮಾಯಿ, ರಾಮಕೃಷ್ಣ ಹೆಗಡೆ ಅವರನ್ನು ಕಳಿಸಿದೆನಾ? ಎಂದರು. ರಾಜಕಾರಣದಲ್ಲಿ, ಇದು ನನ್ನ ಕೊನೆಯ ಚುನಾವಣೆ ಎಂದರು. ನಂತರ ಮತ್ತೆ ಸ್ಪರ್ಧಿಸಿ ಬಿಜೆಪಿಯನ್ನು ಸೋಲಿಸಲು ನಿಂತೆ ಎಂದರು. ಇವರಿಂದಾಗಿ ಅನೇಕ ಜನರು ಅಲ್ಲಲ್ಲೇ ಇದ್ದಾರೆ ಎಂದರು.
ಇದನ್ನೂ ಓದಿ | PSI Scam | ಕಾನೂನು ಸಚಿವರ Law ಪಾಯಿಂಟ್‌ಗೆ ತಲೆಯಾಡಿಸಿ ಸುಮ್ಮನಾದ ಲಾಯರ್ ಸಿದ್ದರಾಮಯ್ಯ !