Site icon Vistara News

Rudresh Murder : ರುದ್ರೇಶ್‌ ಕೊಲೆ ಆರೋಪಿ ಮಹಮ್ಮದ್‌ ಗೌಸ್‌ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಎನ್‌ಐಎ

NIA Rudresh Murder mohammad ghouse

#image_title

ಬೆಂಗಳೂರು: 2016ರ ಅಕ್ಟೋಬರ್‌ 16ರಂದು ನಗರದ ಶಿವಾಜಿ ನಗರದ ಕಾಮರಾಜ ರಸ್ತೆಯಲ್ಲಿ ನಡೆದ ಆರ್‌ಎಸ್‌ಎಸ್‌ ಮುಖಂಡ ರುದ್ರೇಶ್‌ ಹತ್ಯೆ (Rudresh Murder) ಪ್ರಕರಣದಲ್ಲಿ ಆರೋಪಿಯಾಗಿದ್ದು ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿಯೊಬ್ಬನ ಸುಳಿವು ನೀಡಿದರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ರಾಷ್ಟ್ರೀಯ ಭದ್ರತಾ ದಳ (NIA search) ಘೋಷಿಸಿದೆ.

ಬೆಂಗಳೂರಿನ ಆರ್‌ಟಿ ನಗರ ಎರಡನೇ ಬ್ಲಾಕ್‌ ನಿವಾಸಿಯಾಗಿರುವ ನಯಾಜ್‌ ಅಹಮದ್‌ ಅವರ ಪುತ್ರ 41 ವರ್ಷದ ಮೊಹಮ್ಮದ್‌ ಗೌಸ್‌ ನಯಾಜಿ ಅಲಿಯಾಸ್‌ ಗೌಸ್‌ ಭಾಯ್‌ ರುದ್ರೇಶ್‌ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಆತನ ಸುಳಿವು ನೀಡಿದವರಿಗೆ 5 ಲಕ್ಷ ರೂ. ನೀಡುವುದಾಗಿ ಎನ್‌ಐಎ ಹೇಳಿದೆ. ಈತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಸಕ್ರಿಯ ಕಾರ್ಯಕರ್ತನೂ ಆಗಿದ್ದ ಎಂದು ಎನ್‌ಐಎ ಹೇಳಿದೆ.

2016ರ ಅ. 16ರಂದು ಬೆಳಗ್ಗೆ 9 ಗಂಟೆಯ ಹೊತ್ತಿಗೆ ರುದ್ರೇಶ್‌ ಅವರು ಶಿವಾಜಿ ನಗರದ ಕಾಮರಾಜ ರಸ್ತೆಯಲ್ಲಿರುವ ಶ್ರೀನಿವಾಸ ಮೆಡಿಕಲ್ಸ್‌ ಎದುರು ಗೆಳೆಯರೊಂದಿಗೆ ನಿಂತಿದ್ದಾಗ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿ ಆಕ್ರೋಶ ವ್ಯಕ್ತವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಕೆಲವೇ ದಿನಗಳಲ್ಲಿ ಆಸಿಮ್‌ ಷರೀಫ್‌, ಇರ್ಫಾನ್‌ ಪಾಷಾ, ವಸೀಂ ಅಹಮದ್‌, ಮಹಮ್ಮದ್‌ ಸಾದಿಕ್‌, ಮಹಮ್ಮದ್‌ ಮುಜೀಬುಲ್ಲಾನನ್ನು ಬಂಧಿಸಲಾಗಿತ್ತು. ಅಂದು ಆರೋಪಿಗಳು ಕೊಲೆ ಮಾಡಿ ಕಮರ್ಷಿಯಲ್ ಸ್ಟ್ರೀಟ್ ಮೂಲಕ ಪರಾರಿಯಾಗಿದ್ದರು. ಎರಡು ದಿನಗಳ ನಂತರ ಇಬ್ಬರು ಪ್ರತ್ಯೇಕವಾಗಿ ಬೈಕ್ ಪಾರ್ಕಿಂಗ್ ಮಾಡಿ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಹೇಗಿದೆ ಎಂದು ನೋಡಲು ಬಂದಿದ್ದರು. ಇದಾದ ನಂತರ ಮುಜಿಬುಲ್ಲಾ ಎಂದಿನಂತೆ ತನ್ನ ನಿತ್ಯ ಕೆಲಸದಲ್ಲಿ ತೊಡಗಿಕೊಂಡಿದ್ದ.

ಈ ನಡುವೆ, ಪೊಲೀಸರು ಸ್ಥಳೀಯರು ನೀಡಿದ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಸ್ಕೆಚ್ ಬಿಡುಗಡೆ ಮಾಡಿದ್ದರು. ಆರೋಪಿ ಶಂಕಿತ ರೇಖಾ ಚಿತ್ರದ ಆಧಾರದ ಮೇಲೆ, ಪೊಲೀಸರು ಮುಜಿಬುಲ್ಲಾ ನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ನಂತರ ಆತನನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯವನ್ನು ಬಹಿರಂಗಪಡಿಸಿದ್ದ. ಜತೆಗೆ ಉಳಿದ ಜತೆಗಾರರ ವಿವರವನ್ನೂ ನೀಡಿದ ಹಿನ್ನೆಲೆಯಲ್ಲಿ ಒಟ್ಟಾಗಿ ಐವರನ್ನು ಬಂಧಿಸಲಾಗಿತ್ತು.

ಕೊಲೆಗೆ ಮೂಲ ಕಾರಣ ಏನು?

ರುದ್ರೇಶ್‌ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡನಾಗಿದ್ದದ್ದು ಪರಿಸರದ ಕೆಲವರ ಕಣ್ಣುಕುಕ್ಕಿತ್ತು. ಅದರಲ್ಲೂ ಮುಖ್ಯವಾಗಿ ಆರೋಪಿಗಳಲ್ಲಿ ಒಬ್ಬನಾದ ಮಜರ್‌ ಜತೆಗೆ ರುದ್ರೇಶ್‌ಗೆ ಸಣ್ಣ ಪುಟ್ಟ ಜಗಳಗಳು ಆಗಿದ್ದವು. ಮಜರ್‌ ರುದ್ರೇಶ್‌ನ ಮನೆಯ ಪಕ್ಕ ಮೆಕ್ಯಾನಿಕ್‌ ಶಾಪ್‌ ಇಟ್ಟುಕೊಂಡಿದ್ದ. ಕೆಲವು ವರ್ಷದ ಹಿಂದೆ ರುದ್ರೇಶ್‌ ಮಜರ್‌ ಮೇಲೆ ಹಲ್ಲೆ ನಡೆಸಿದ್ದು, ಗೋಕಳ್ಳ ಸಾಗಣೆ ಮಾಡುವವರನ್ನು ಹಿಡಿದುಕೊಟ್ಟಿದ್ದು ಎಲ್ಲವೂ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದರು.

ಈಗ ಕೊಲೆಗಾರರೆಲ್ಲರೂ ಜೈಲಿನಲ್ಲಿದ್ದಾರೆ. ಮೊಹಮ್ಮದ್‌ ಗೌಸ್‌ ಇನ್ನೂ ತಲೆಮರೆಸಿಕೊಂಡಿದ್ದಾನೆ. ಪಿಎಫ್‌ಐ ಜತೆ ಗುರುತಿಸಿಕೊಂಡಿದ್ದ ಆತ ಇನ್ನಷ್ಟು ಅಪಾಯಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಶಯವಿದೆ ಎನ್ನುವ ನೆಲೆಯಲ್ಲಿ ಆತನನ್ನು ಹಿಡಿಯಲು ಎನ್‌ಐಎ ಪ್ರಯತ್ನಗಳನ್ನು ನಡೆಸುತ್ತಿದೆ.

ಇದನ್ನೂ ಓದಿ : PFI In Karnataka: ನಿಷೇಧದ ಬಳಿಕವೂ ಕರ್ನಾಟಕದಲ್ಲಿ ಪಿಎಫ್‌ಐ ಹಾವಳಿ; ಎಸ್‌ಡಿಪಿಐ ಮೂಲಕ ವಿವಿಧ ಚಟುವಟಿಕೆ

Exit mobile version