ಸಾಗರ: ಕಾಗೋಡು ಚಳವಳಿಯ ಮೂಲಕ ಗಮನ ಸೆಳೆದಿದ್ದ ಸಾಗರ ವಿಧಾನಸಭಾ ಕ್ಷೇತ್ರ ಹಿಂದೊಮ್ಮೆ ಸಮಾಜವಾದಿಗಳ, ಸಮಾಜವಾದಿ ತತ್ವವನ್ನು ಬೆಂಬಲಿಸುವ ಕಾಂಗ್ರೆಸ್ಸಿಗರ ಗಟ್ಟಿ ನೆಲೆಯಾಗಿತ್ತು. ಆದರೆ, ವರ್ಷ ಕಳೆದಂತೆ ಬಿಜೆಪಿಯೂ ಇಲ್ಲಿ ನೆಲೆಯನ್ನು ಸ್ಥಾಪಿಸಿಕೊಂಡಿತ್ತು. ಈ ಬಾರಿ ಭಾರಿ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ (Sagar Election Results) ಕಾಂಗ್ರೆಸ್ ಪಕ್ಷದ ಬೇಳೂರು ಗೋಪಾಲಕೃಷ್ಣ ಅವರು ಜಯಗಳಿಸಿದ್ದಾರೆ.
ಸ್ವಪಕ್ಷೀಯರ ವಿರೋಧದಿಂದ ಸೋಲು ಕಂಡ ಹಾಲಪ್ಪ
ತೀವ್ರ ವಿರೋಧದ ನಡುವೆಯೂ ಹಾಲಿ ಶಾಸಕರಾಗಿದ್ದ ಹರತಾಳು ಹಾಲಪ್ಪ ಅವರು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಮಧ್ಯೆ ಸ್ವಪಕ್ಷೀಯರ ಅಸಮಾಧಾನವು ಹೆಚ್ಚಿದ್ದೇ ಇವರ ಸೋಲಿಗೆ ಕಾರಣವಾಗಿದೆ. ಇನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಬಿಜೆಪಿ ಸೇರ್ಪಡೆಗೊಂಡರೂ ಯಾವುದೇ ಪರಿಣಾಮ ಬೀರಲೇ ಇಲ್ಲ.
ಮತ್ತೆ ಬಂದ ಬೇಳೂರು ಗೋಪಾಲಕೃಷ್ಣ
ಇತ್ತ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಆರಂಭದಿಂದಲೂ ಸಂಚಲವನ್ನು ಉಂಟು ಮಾಡಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿಜಯಕ್ಕೆ ಕಾಗೋಡು ತಿಮ್ಮಪ್ಪ ಅವರ ಶ್ರೀರಕ್ಷೆಯೇ ಕಾರಣ ಎನ್ನಲಾಗಿದೆ. ಅದಲ್ಲದೆ, ಶಾಸಕರಾಗಿದ್ದ ಹರತಾಳು ಹಾಲಪ್ಪ ಅವರ ವಿರೋಧಿ ಅಲೆಯು ಇವರಿಗೆ ಪ್ಲಸ್ ಆಗಿದೆ. ಹೀಗಾಗಿ ಜಯದ ನಗೆ ಬೀರಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿಯಾಗಿದ್ದ ಸೈಯದ್ ಜಾಕೀರ್ ಕಣದಿಂದ ಹಿಂದೆ ಸರಿದು ಇವರಿಗೆ ಬೆಂಬಲ ಸೂಚಿಸಿದ್ದು ಸಹ ಗೆಲುವಿಗೆ ಮತ್ತೊಂದು ಕಾರಣವಾಗಿದೆ.
ದಿವಾಕರ್ ನೀರಸ ಪ್ರದರ್ಶನ
ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿರುವ ಕೆ. ದಿವಾಕರ್ ಅವರು ಅಲ್ಪ ಮಟ್ಟಿನ ಮತಗಳನ್ನು ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ.
ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ
ಕಳೆದ ಬಾರಿಯ ಫಲಿತಾಂಶ ಏನು?
ಎಚ್. ಹಾಲಪ್ಪ ಹರತಾಳು (ಬಿಜೆಪಿ): 78,475 | ಕಾಗೋಡು ತಿಮ್ಮಪ್ಪ (ಕಾಂಗ್ರೆಸ್): 70,436 | ಗೆಲುವಿನ ಅಂತರ: 8,045
ಈ ಬಾರಿ ಚುನಾವಣಾ ಫಲಿತಾಂಶ ಇಂತಿದೆ
ಬೇಳೂರು ಗೋಪಾಲಕೃಷ್ಣ (ಕಾಂಗ್ರೆಸ್) 88179 | ಹರತಾಳು ಹಾಲಪ್ಪ (ಬಿಜೆಪಿ) 72263 | ಗೆಲುವಿನ ಅಂತರ: 15916