Site icon Vistara News

Santosh Suicide: ಅಂತ್ಯಕ್ರಿಯೆ ಬೇಡವೆಂದ ಕಾಂಗ್ರೆಸಿಗರನ್ನು ತಡೆದ ಗ್ರಾಮಸ್ಥರು

santosh santosh

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ (Eshwarappa) ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಆತ್ಮಹತ್ಯೆ (Santosh Patil Suicide) ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಅಂತ್ಯಕ್ರಿಯೆ ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಗುರುವಾರ ನೆರವೇರಿತು.

ಮಂಗಳವಾರ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಹಾಗೂ ಇಬ್ಬರು ಆಪ್ತರು ಕಾರಣ ಎಂದು ಆತ್ಮಹತ್ಯೆಗೂ ಮುನ್ನ ಅನೇಕ ಮಾಧ್ಯಮ ಪ್ರತಿನಿಧಿಗಳಿಗೆ ಸಂತೋಷ್‌ ವಾಟ್ಸ್‌ಅಪ್‌ ಸಂದೇಶ ಕಳಿಸಿದ್ದರು. ಈ ಸಂಬಂಧ ಉಡುಪಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸಚಿವ ಈಶ್ವರಪ್ಪ ಅವರನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ. ಸಂತೋಷ್‌ ಸಾವಿಗೆ ಕಾರಣರಾದ ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ಪೋಸ್ಟ್‌ಮಾರ್ಟಮ್‌ಗೆ ಅವಕಾಶ ನೀಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದರು.

ನಂತರ ಕುಟುಂಬದವರ ಮನವೊಲಿಸಿ ಪೋಸ್ಟ್‌ಮಾರ್ಟಮ್‌ ಮಾಡಲಾಯಿತು. ಶವವನ್ನು ಗುರುವಾರ ಬೆಳಗಾವಿಯ ಬಡಾಸ್‌ ಗ್ರಾಮಕ್ಕೆ ತರಲಾಯಿತು. ಇದೇ ದಿನ ಗ್ರಾಮದಲ್ಲಿ ಮೂರು ಮದುವೆಗಳು ನಡೆಯುವುದಿದ್ದವು. ಗ್ರಾಮದಲ್ಲಿ ಹೆಣವನ್ನು ಇಟ್ಟುಕೊಂಡು ಯಾವುದೇ ಶುಭ ಕಾರ್ಯಗಳು ನಡೆಯುವಂತಿಲ್ಲ. ದೇವಸ್ಥಾನದ ಬಾಗಿಲನ್ನೂ ತೆರೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಆದಷ್ಟೂ ಬೇಗನೆ ಅಂತಿಮ ಸಂಸ್ಕಾರ ನೆರವೇರಿಸುವಂತೆ ಸಂತೋಷ್‌ ಕುಟುಂಬದವರಿಗೆ ಗ್ರಾಮಸ್ಥರು ವಿನಂತಿಸಿದರು. ಆದರೆ ಕಾಂಗ್ರೆಸ್‌ ನಾಯಕರು ಇದಕ್ಕೆ ಅವಕಾಶ ನೀಡಲಿಲ್ಲ.

ಹೆಚ್ಚಿನ ಓದಿಗಾಗಿ: Santosh Suicide: ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದ ಈಶ್ವರಪ್ಪ: ಸಂಪುಟ ವಿಸ್ತರಣೆ ವೇಳೆ ಕೊಕ್‌?

ಕಾಂಗ್ರಸಿಗರನ್ನು ಸುಮ್ಮನಾಗಿಸಿದ ಗ್ರಾಮಸ್ಥರು

ಸಂತೋಷ್‌ ಅವರ ಬಡಸ್‌ ಗ್ರಾಂವು ಕಾಂಗ್ರೆಸ್‌ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಶವವನ್ನು ಗ್ರಾಮಕ್ಕೆ ತರುವ ವೇಳೆಗೆ ಗ್ರಾಮಕ್ಕೆ ಆಗಮಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಆಪ್ತ ಅಡಿವೇಶ ಇಟಗಿ, ಅಂತಿಮ ಸಂಸ್ಕಾರ ಮಾಡದಂತೆ ಒತ್ತಾಯಿಸಿದರು. ಅಡಿವೇಶ್‌ ಇಟಗಿ ಸ್ಥಳದಲ್ಲೇ ಭಾಷಣ ಮಾಡಿದರು. ಎಲ್ಲ ಹೆಂಗಸೂ ಮನೆಗೆ ತೆರಳಿ. ಸಂತೋಷ್‌ ಸಾವಿಗೆ ನ್ಯಾಯ ಸಿಗಬೇಕು ಹಾಗೂ ಪರಿಹಾರವನ್ನು ನೀಡಬೇಕು. ಸಂತೋಷ್ ಎಂದಿಗೂ ಕಾಂಗ್ರೆಸ್‌ ಸೇರ್ಪಡೆ ಆಗಿರಲಿಲ್ಲ. ಅವರು ಬಿಜೆಪಿ ಕಾರ್ಯಕರ್ತೆಆಗಿದ್ದರು. ಇಂದು ಜಿಲ್ಲೆಯಲ್ಲೇ ಇರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಕೆಲ ಗ್ರಾಮಸ್ಥರೂ ಇದಕ್ಕೆ ಬೆಂಬಲ ನೀಡಿದರು.

ಈ ವೇಳೆ ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳ್ಕರ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ನ್ಯಾಯಕ್ಕಾಗಿ ನಾವೆಲ್ಲರೂ ಹೋರಾಟ ಮಾಡೋಣ. ಆದರೆ ಈಗ ಅಂತಿಮ ಸಂಸ್ಕಾರ ನೆರವೇರಿಸಲು ಬಿಡಿ ಎಂದು ಒತ್ತಾಯಿಸಿದ್ದಾರೆ. ಬೇರೆ ವಿಧಿಯಿಲ್ಲದೆ ಅಂತಿಮ ಸಂಸ್ಕಾರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವಕಾಶ ಮಾಡಿಕೊಟ್ಟಿದ್ದಾರೆ. ಮೆರವಣಿಗೆ ಮೂಲಕ ಶವವನ್ನು ಸಂತೋಷ್‌ ಅವರ ಜಮೀನಿಗೆ ತಂದು, ವೀರಶೈವ ಲಿಂಗಾಯತ ವಿಧಿವಿಧಾನದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಗ್ರಾಮಸ್ಥರು ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಇತ್ತ ಬೆಂಗಳೂರಿನಲ್ಲಿ ಈಶ್ವರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಯಿತು. ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ, ಬಂಧಿಸಬೇಕು ಎಂದು ಒತ್ತಾಯಿಸಲಾಯಿತು. ಈಶ್ವರಪ್ಪ ನಿವಾಸದತ್ತ ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬೇರೆಡೆಗೆ ಕರೆದೊಯ್ದರು.

Exit mobile version