ಚಿಕ್ಕಮಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ (KS Eshwarappa) ಅವರ ವಿರುದ್ಧ 40% ಲಂಚ ಆರೋಪ ಮಾಡಿ ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Suicide Case) ಅದಕ್ಕೂ ಮುನ್ನ ಚಿಕ್ಕಮಗಳೂರಿನ ಪ್ರವಾಸ ಮಾಡಿದ್ದ ವಿವರ ಬಹಿರಂಗವಾಗಿದೆ.
ಉಡುಪಿಗೆ ಇಬ್ಬರು ಸ್ನೇಹಿತರ ಜತೆಗೆ ಸಂತೋಷ್ ತೆರಳಿದ್ದರು. ಏಪ್ರಿಲ್ 12ರ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಉಡುಪಿ ಪ್ರವಾಸದಲ್ಲಿದ್ದರು. ಅದೇ ದಿನ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ವಿಷಯ ರಾಜ್ಯಾದ್ಯಂತ ಪಸರಿಸಿ, ಬಿಜೆಪಿ ಪಕ್ಷಕ್ಕೆ ಭಾರೀ ಮುಜುಗರ ಉಂಟುಮಾಡಿತು. ನಂತರ ಸಂತೋಷ್ ಶವವನ್ನು ಬೆಳಗಾವಿಯ ಹುಟ್ಟೂರಿಗೆ ಕೊಂಡೊಯ್ದು ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಆತ್ಮಹತ್ಯೆಗೂ ಮುನ್ನ ವಿವಿಧ ಮಾಧ್ಯಮ ಪ್ರತಿನಿಧಿಗಳಿಗೆ ವಾಟ್ಸಾಪ್ ಮೂಲಕ ಸಂದೇಶ ಕಳಿಸಿದ್ದ ಸಂತೋಷ್, ತನ್ನ ಸಾವಿಗೆ ಕೆ.ಎಸ್. ಈಶ್ವರಪ್ಪ ಅವರೇ ಕಾರಣ ಎಂದು ತಿಳಿಸಿದ್ದರು. ಈ ಸಂದೇಶದ ಆಧಾರದಲ್ಲಿ ಉಡುಪಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಈಶ್ವರಪ್ಪ ಅವರನ್ನೇ ಮೊದಲ ಆರೋಪಿಯಾಗಿಸಿದ್ದಾರೆ. ಜತೆಗೆ ಈಶ್ವರಪ್ಪ ಅವರ ಇಬ್ಬರು ಆಪ್ತರನ್ನು ಆರೋಪಿ ಮಾಡಲಾಗಿದೆ.
ಇದೀಗ ತನಿಖೆ ಆರಂಭಿಸಿರುವ ಉಡುಪಿ ಪೊಲೀಸರು ಸಂತೋಷ್ ಜಾಡು ಹಿಡಿದು ಚಿಕ್ಕಮಗಳೂರು ತಲುಪಿದ್ದಾರೆ. ಉಡುಪಿಗೆ ಆಗಮಿಸುವುದಕ್ಕೂ ಮುನ್ನ ಸಂತೋಷ್ ಚಿಕ್ಕಮಗಳೂರಿನಲ್ಲಿ ಮೂರು ದಿನ ತಂಗಿದ್ದ ವಿಚಾರ ತಿಳಿದುಬಂದಿದೆ. ಕೈಮರ ಸಮೀಪದ ಬಾನ್ ಆಫ್ ಬೆರ‍್ರಿ ಹೋಮ್ ಸ್ಟೇಯಲ್ಲಿ ಇಬ್ಬರು ಸ್ನೇಹಿತರ ಜತೆಗೆ ತಂಗಿದ್ದರು.
ಏಪ್ರಿಲ್ 8-9 ಹಾಗೂ 10 ಎಂದು ಇಲ್ಲಿಯೇ ತಂಗಿದ್ದ ಸಂತೋಷ್ ಅತ್ಯಂತ ಆನಂದವಾಗಿದ್ದರು. ಸ್ನೇಹಿತರ ಜತೆಗೆ ಡ್ಯಾನ್ಸ್ ಮಾಡಿಕೊಂಡು ಸಂತೋಷದಿಂದ ಇದ್ದವರು ಉಡುಪಿಗೆ ಪ್ರಯಾಣ ಬೆಳೆಸಿದ್ದರು. ಹೋಮ್ ಸ್ಟೇಯಿಂದ ತೆರಳುವಾಗ, ಅಲ್ಲಿದ್ದ ನಾಯಿಗಳಿಗೆ ಬಿಸ್ಕೆಟ್ ತಂದು ಹಾಕಿ ತೆರಳಿದ್ದರು ಎಂಬುದೂ ಸೇರಿ ಅನೇಕ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.
ಹೆಚ್ಚಿನ ಓದಿಗಾಗಿ | ಕೊನೆಗೂ ರಾಜೀನಾಮೆ ನೀಡಿದ ಈಶ್ವರಪ್ಪ: ರಾಜಕೀಯ ಜೀವನದ ಅಂತ್ಯ?
ಹೋಮ್ ಸ್ಟೇ ಸಿಬ್ಬಂದಿಯಿಂದ ಮೌಖಿಕ ಮಾಹಿತಿ ಪಡೆಯುವುದರ ಜತೆಗೆ ಅಲ್ಲಿ ಅಳವಡಿಸಿರುವ ಸಿಸಿಟಿವಿಯ ಡಿವಿಆರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವಾಸಕ್ಕೆ ಹೊರಡುವ ವೇಳೆಯೇ ಆತ್ಮಹತ್ಯೆಯ ನಿರ್ಧಾರ ಮಾಡಿದ್ದರೆ? ಅಥವಾ ಮತ್ತೇನಾದರೂ ಘಟನೆ ನಡೆದಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ವಿಚಾರಣೆ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸರು ಹೇಳಿದ್ದಾರೆ.