Site icon Vistara News

Santro Ravi case | ಲುಕ್‌ ಔಟ್‌ ನೋಟಿಸ್‌ ಜಾರಿ, ರವಿ ಬ್ಯಾಂಕ್‌ ಖಾತೆ, ಆಸ್ತಿ ಜಪ್ತಿ ಬಗ್ಗೆ ಶೀಘ್ರ ನಿರ್ಧಾರ ಎಂದ ಎಡಿಜಿಪಿ

ಅಲೋಕ್‌ ಕುಮಾರ್‌

ಮೈಸೂರು: ದಲಿತ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ವಂಚನೆ ನಡೆಸಿದ ಆರೋಪ ಎದುರಿಸುತ್ತಿರುವ, ರಾಜ್ಯದ ಹಲವು ರಾಜಕಾರಣಿಗಳು, ಅಧಿಕಾರಿಗಳ ಜತೆ ಸಂಬಂಧ ಹೊಂದಿರುವ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿಯ (Santro Ravi case) ಪತ್ತೆಗಾಗಿ ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆತನ ಆಸ್ತಿ ಜಪ್ತಿ ಹಾಗೂ ಬ್ಯಾಂಕ್‌ ಖಾತೆ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತರ ಕೊಠಡಿಯಲ್ಲಿ ಮಂಗಳವಾರ ದೂರುದಾರರು ಮತ್ತು ಇತರರ ಜತೆ ಮಾತುಕತೆ ನಡೆಸಿದ ಬಳಿಕ ಅವರು ಈ ಹೇಳಿಕೆ ನೀಡಿದರು. ಕಮಿಷನರ್ ರಮೇಶ್ ಬಾನೋತ್, ಡಿಸಿಪಿಗಳಾದ ಮುತ್ತುರಾಜ್, ಗೀತಾ ಪ್ರಸನ್ನ ಸೇರಿದಂತೆ ಪ್ರಮುಖರ ಉಪಸ್ಥಿತಿಯಲ್ಲಿ ಎಡಿಜಿಪಿ ಸಮ್ಮುಖದಲ್ಲಿ ಸಂತ್ರಸ್ತ ಮಹಿಳೆಯ ವಿಚಾರಣೆ ನಡೆಯಿತು. ದೂರುದಾರ ಮಹಿಳೆ, ತಂಗಿ, ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಎಡಿಜಿಪಿ ಅಲೋಕ್‌ ಮೋಹನ್‌ ಹೇಳಿದ್ದೇನು?
ಬೆಂಗಳೂರಿನ ಆರ್ ಆರ್ ನಗರದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಎಲ್ಲಾ ಅಗತ್ಯ ದಾಖಲೆ ಜಪ್ತಿ ಮಾಡಲಾಗಿದೆ. ಎಷ್ಟು ಬ್ಯಾಂಕ್ ಖಾತೆ ಇದೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಆಸ್ತಿ ಜಪ್ತಿ ಬಗ್ಗೆಯೂ ಶೀಘ್ರ ನಿರ್ಧಾರ ಮಾಡಲಾಗುವುದು ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು.

ಸ್ಯಾಂಟ್ರೋ ರವಿ ಪತ್ನಿ ಆರ್ ಆರ್ ನಗರದಲ್ಲಿ ವಾಸವಾಗಿದ್ದಾರೆ. ನಾಲ್ಕು ಜಿಲ್ಲೆಯಲ್ಲಿ ಸ್ಯಾಂಟ್ರೋ ರವಿಗಾಗಿ ಹುಡುಕಾಟ ನಡೆದಿದೆ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರಿನಲ್ಲಿ ಹುಡುಕಾಟ ಮಾಡಲಾಗಿದೆ. 8 ದಿನದಲ್ಲಿ ಆತ ಸಿಗಬೇಕಾಗಿತ್ತು. ಕೆಲವೊಮ್ಮೆ ತಂತ್ರಜ್ಞಾನ ಇದ್ದರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಾಗ ಸಿಗುವುದು ಕಷ್ಟ ಎಂದು ಹೇಳಿದರು.

ʻʻಪೊಲೀಸರ ಮೇಲೆ ಯಾವುದೇ ಒತ್ತಡ ಇಲ್ಲ. ಅದೇ ಕಾರಣಕ್ಕೆ‌ ನಾನು ಇಲ್ಲಿ ಬಂದು ಮಾಹಿತಿ‌ ಪಡೆದಿದ್ದೇ‌ನೆʼʼ ಎಂದ ಅವರು ಆದಷ್ಟು ಬೇಗ ಸ್ಯಾಂಟ್ರೋ ರವಿ ಬಂಧನವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನ್ಯಾಯ ಸಿಗುವ ವಿಶ್ವಾಸವಿದೆ
ಎಡಿಜಿಪಿ ಅಲೋಕ್‌ ಕುಮಾರ್‌ ಅವರ ಮುಂದೆ ತನಗಾದ ನೋವುಗಳನ್ನು ಹಂಚಿಕೊಂಡ ಸಂತ್ರಸ್ತೆ, ಸ್ಯಾಂಟ್ರೋ ರವಿ ಎರಡನೇ ಪತ್ನಿ, ಎಡಿಜಿಪಿ‌ ಎಲ್ಲವನ್ನೂ ವಿವರವಾಗಿ ಕೇಳಿದ್ರು. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಆತ ಎಷ್ಟೇ ಪ್ರಭಾವಿಯಾದರೂ ಬಂಧಿಸುವ ಭರವಸೆ ನೀಡಿದ್ದಾರೆ. ಎಂದರು.

ʻʻನಾನು ದಾಖಲೆ ಸಮೇತ ಅವರಿಗೆ ವಿವರಿಸಿದ್ದೇನೆ. ಆತ ನನಗೆ ನೀಡಿರುವ ಚಿತ್ರಹಿಂಸೆ ಕುರಿತು ತಿಳಿಸಿರುವೆ.
ಆತನನ್ನು ಬಂಧಿಸಬೇಕು ಎಂಬುದು ನನ್ನ ಆಗ್ರಹ. ಆತ ಸಿಕ್ಕೇ ಸಿಗ್ತಾನೆ, ಆತ ಎಲ್ಲೂ ಹೋಗಲ್ಲʼʼ ಎಂದು ಹೇಳಿದರು.

ಇದನ್ನೂ ಓದಿ | Santro Ravi case | ಹಣದ ತನಿಖೆ ಮಾಡಿಸಿ: ಸ್ಯಾಂಟ್ರೋ ರವಿ ವಿರುದ್ಧ ಪ್ರಧಾನಿ ಮೋದಿ ಅಮಿತ್‌ ಶಾಗೆ ಒಡನಾಡಿ ದೂರು

Exit mobile version