Site icon Vistara News

Santro Ravi case | ಸ್ಯಾಂಟ್ರೋ ಬಂಧನದ ಮೂಲಕ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಸರ್ಕಾರ

Santro Ravi CM Son

ಬೆಂಗಳೂರು: ಕಳೆದ ಹತ್ತು ದಿನಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ಕ್ರಿಮಿನಲ್‌ ಸ್ಯಾಂಟ್ರೋ ರವಿ (Santro Ravi case) ಬಂಧನದೊಂದಿಗೆ ರಾಜ್ಯ ಬಿಜೆಪಿ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಸ್ಯಾಂಟ್ರೋ ರವಿ ಬಂಧನ ಆಗದೆ ಇರುವ ವಿಚಾರ ಮತ್ತು ಆತನೊಂದಿಗೆ ರಾಜ್ಯದ ಮಂತ್ರಿಗಳು, ಅಧಿಕಾರಿಗಳು ಹೊಂದಿರುವ ಸಂಬಂಧವನ್ನೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದವು. ಸಾಮಾಜಿಕ ಜಾಲ ತಾಣದಲ್ಲಿ ಸಾಮಾಜಿಕವಾಗಿಯೂ ಇದ್ದ ಆಕ್ರೋಶ ಹೊರಬಿದ್ದಿತ್ತು. ಇದೀಗ ಸ್ಯಾಂಟ್ರೋ ರವಿ ಬಂಧನದಿಂದ ರಾಜ್ಯ ಸರ್ಕಾರ ಒಂದು ಹಂತಕ್ಕೆ ನಿಟ್ಟುಸಿರು ಬಿಡಬಹುದಾಗಿದೆ!

ಸ್ಯಾಂಟ್ರೋ ರವಿ ವಿರುದ್ಧ ಹತ್ತು ದಿನಗಳ ಹಿಂದೆ ದಲಿತ ಮಹಿಳೆಯೊಬ್ಬರು ಮೈಸೂರಿನ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಅತ್ಯಾಚಾರ ಮತ್ತು ವಂಚನೆಯ ದೂರು ಇದಾಗಿದ್ದರೂ ಅದರ ಜತೆಗೆ ಆತ ಒಬ್ಬ ದೊಡ್ಡ ವೇಶ್ಯಾವಾಟಿಕೆ ದಂಧೆಕೋರನಾಗಿರುವುದು, ವರ್ಗಾವಣೆ ದಂಧೆಯ ಕಿಂಗ್‌ ಪಿನ್‌ ಆಗಿರುವುದು ಕೂಡಾ ಬಯಲಾಯಿತು. ಅದಕ್ಕಿಂತಲೂ ಹೆಚ್ಚಾಗಿ ಆತ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜತೆ ಆತ ಹೊಂದಿದ್ದ ಆತ್ಮಸಖನಂಥ ಸಂಬಂಧ ಇನ್ನೂ ಚರ್ಚೆಗೆ ಕಾರಣವಾಯಿತು. ಆತನಿಗೆ ಎಲ್ಲ ಪಕ್ಷಗಳ ನಾಯಕರ ಜತೆ ಸಂಬಂಧವಿದ್ದರೂ ಆಡಳಿತಾರೂಢ ಎಂಬ ಕಾರಣಕ್ಕೆ ಬಿಜೆಪಿ ನಾಯಕರು ಹೆಚ್ಚು ಟಾರ್ಗೆಟ್‌ ಆದರು. ಅದರಲ್ಲೂ ಸಚಿವರೇ ಆತನ ಜತೆ ಖಾಸಾ ಸಂಬಂಧ ಹೊಂದಿದ್ದಾರೆ ಎಂಬಂತೆ ತೋರುವ ಚಿತ್ರಗಳು, ಆತ ಬರೆದುಕೊಂಡಿರುವ ಸ್ಟೇಟಸ್‌ಗಳು ಇವರ ಗಳಸ್ಯ ಕಂಠಸ್ಯ ಸಂಬಂಧಗಳನ್ನು ಬಯಲು ಮಾಡಿದ್ದವು.

ಎಲ್ಲಕ್ಕಿಂತ ಹೆಚ್ಚಾಗಿ ಸಿಎಂ ಅವರ ಪುತ್ರ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪುತ್ರನ ಜತೆಗಿನ ಚಿತ್ರಗಳು, ಗೃಹ ಸಚಿವರ ನಿವಾಸದಲ್ಲೇ ನಡೆದಿದ್ದ ದುಡ್ಡಿನ ಲೆಕ್ಕದ ವಿಡಿಯೊಗಳೆಲ್ಲ ಸರ್ಕಾರವನ್ನು ಅಡಕತ್ತರಿಸಿಗೆ ಸಿಕ್ಕಿಸಿದ್ದವು. ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರಂತೂ ತನ್ನ ಸರಕಾರವನ್ನು ಉರುಳಿಸಲು ಮುಂಬಯಿಗೆ ಹೋಗಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ರಂಜಿಸಲು ಸ್ಯಾಂಟ್ರೋ ರವಿಯೇ ಹುಡುಗಿಯರನ್ನು ಸಪ್ಲೈ ಮಾಡಿದ್ದ ಎಂದು ಹೇಳಿ ವಿವಾದದ ಬಿರುಗಾಳಿ ಎಬ್ಬಿಸಿದ್ದರು.

ಮುಂಬಯಿಗೆ ಹುಡುಗಿಯರನ್ನು ಸಪ್ಲೈ ಮಾಡಿದ್ದ ಬಗ್ಗೆ ಗಂಭೀರ ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ

ಕಾಂಗ್ರೆಸ್‌ ಅಂತೂ ಬಿಜೆಪಿ ನಾಯಕರ ಜತೆಗಿನ ಸ್ಯಾಂಟ್ರೋ ರವಿ ಸಂಬಂಧ ಹಾಗೂ ಆತನನ್ನು ಬಂಧಿಸಲು ವಿಳಂಬ ಆಗುತ್ತಿರುವುದನ್ನು ಬೊಟ್ಟು ಮಾಡಿ ಭಾರಿ ವಾಗ್ದಾಳಿ ನಡೆಸಿದೆ. ಸ್ಯಾಂಟ್ರೋ ರವಿ ಪ್ರಕರಣವನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಮುಂದಾಗಿದ್ದ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿತ್ತು.

ಸ್ಯಾಂಟ್ರೋ ರವಿಯನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದ ಕೈ ನಾಯಕರು, ಸ್ಯಾಂಟ್ರೋ ರವಿ ಹಿಂದೆ ಬಿಜೆಪಿ ಇದೆ. ಹೀಗಾಗಿ ಬಂಧಿಸುತ್ತಿಲ್ಲ. ಬಿಜೆಪಿ ಆತನನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದೆ.

ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇತರ ಮಂತ್ರಿಗಳು ಸ್ಯಾಂಟ್ರೋ ರವಿಗೆ ಬಿಜೆಪಿಗಿಂತಲೂ ಕಾಂಗ್ರೆಸ್‌ ನಾಯಕರ ಜತೆಗೇ ಹೆಚ್ಚು ಸ್ನೇಹ, ಕಾಂಗ್ರೆಸ್‌ ಕಾಲದಲ್ಲೇ ಆತ ಹೆಚ್ಚು ಚಿಗಿತುಕೊಂಡಿದ್ದು ಎಂದು ಹೇಳಿದ್ದರು. ಸ್ಯಾಂಟ್ರೋ ರವಿ ವಿಚಾರದಲ್ಲಿ ನಡೆಯುತ್ತಿರುವ ತನಿಖೆ ಕಾಂಗ್ರೆಸ್‌ ಕಾಲಕ್ಕೂ ವಿಸ್ತರಣೆಯಾಗಲಿದೆ ಎಂದು ಹೇಳಿದ್ದರು. ಇದು ತಪ್ಪಿಸಿಕೊಳ್ಳುವ ಪ್ರಯತ್ನ ಎಂದು ಸ್ಪಷ್ಟವಾಗಿತ್ತು. ಇದೀಗ ಆತನ ಬಂಧನದೊಂದಿಗೆ ಬಿಜೆಪಿ ಸ್ವಲ್ಪ ನಿಟ್ಟುಸಿರು ಬಿಟ್ಟಿದೆ. ಆದರೆ, ಆತ ಯಾರ ಹೆಸರನ್ನೆಲ್ಲ ಹೇಳುತ್ತಾನೆ ಎಂಬ ಆತಂಕವೂ ಜತೆಗೆ ಇದ್ದೇ ಇದೆ.

ಇದನ್ನೂ ಓದಿ | Santro Ravi Case | ಟೈಟನ್‌, ರ‍್ಯಾಡೋ, ರೊಲೆಕ್ಸ್‌ ಇವು ವಾಚ್‌ ಬ್ರಾಂಡ್‌ಗಳಷ್ಟೇ ಅಲ್ಲ, ಸ್ಯಾಂಟ್ರೋ ರವಿಯ ಹುಡ್ಗೀರ ಕೋಡ್‌ವರ್ಡ್‌ಗಳು!

Exit mobile version