Site icon Vistara News

Santro Ravi case | ಏಳು ದಿನವಾದರೂ ಬಂಧಿಸದ ಪೊಲೀಸ್‌, ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Santro Ravi

ಮೈಸೂರು: ದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆಯ ಪ್ರಕರಣ ದಾಖಲಿಸಿ ಏಳು ದಿನಗಳೇ ಕಳೆದಿವೆ. ರಾಜ್ಯಾದ್ಯಂತ ಆತನ ಸಂಬಂಧಗಳು, ಖತರ್ನಾಕ್‌ ಕೃತ್ಯಗಳ ಬಗ್ಗೆ ಬಣ್ಣ ಬಣ್ಣದ ಕಥೆಗಳು ಓಡಾಡುತ್ತಿವೆ. ಅಷ್ಟಾದರೂ ಮೈಸೂರು ಪೊಲೀಸರು ಮಾತ್ರ ಕನಿಷ್ಠ ಪಕ್ಷ ಆತನನ್ನು ಕರೆಸಿ ವಿಚಾರಣೆ ಮಾಡುವಷ್ಟೂ ಧೈರ್ಯವನ್ನು ತೋರಿಸಿಲ್ಲ. ಇದೀಗ ಹೈಕೋರ್ಟ್‌ ಆತನ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು (Santro Ravi case) ಪೊಲೀಸರಿಗೆ ನೋಟಿಸ್‌ ನೀಡಿದೆ.

ಇದು ಕುಖ್ಯಾತ ಕ್ರಿಮಿನಲ್‌ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಬಗ್ಗೆ ಮೈಸೂರು ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ. ಅಚ್ಚರಿ ಎಂದರೆ, ಮೈಸೂರು ಪೊಲೀಸರು ಸ್ಯಾಂಟ್ರೋ ರವಿಗೆ ಮದುವೆ ಮಾಡಿಸಿದ ಪುರೋಹಿತರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆದರೆ, ಸ್ಯಾಂಟ್ರೋ ರವಿಯನ್ನು ಕನಿಷ್ಠ ಮಾತನಾಡಿಸಲೂ ಇಲ್ಲ! ಪೊಲೀಸರಿಗೆ ಆತನ ಬಗ್ಗೆ ಆ ಮಟ್ಟದ ಹೆದರಿಕೆ ಇದೆಯೇ ಅಥವಾ ವಿಚಾರಣೆ ನಡೆಸದಂತೆ ರಾಜಕಾರಣಿಗಳ ಒತ್ತಡವಿದೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಜೋರಾದ ಚರ್ಚೆ ನಡೆಯುತ್ತಿದೆ.

ಸ್ಯಾಂಟ್ರೊ ರವಿ ಮೇಲೆ ರೇಪ್ ಕೇಸ್, ದೌರ್ಜನ್ಯ ಪ್ರಕರಣ, ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದರೂ ಏನೂ ಕ್ರಮ ಕೈಗೊಳ್ಳದಿರುವುದು ಪೊಲೀಸರೇ ಆತನಿಗೆ ಸಹಕಾರ ನೀಡುತ್ತಿರುವ ಸಂಶಯವನ್ನು ಹುಟ್ಟಿಸಿದೆ.

ಈ ನಡುವೆ ಪೊಲೀಸರು ಒತ್ತಡಕ್ಕೆ ಒಳಗಾಗಿ ತನ್ನನ್ನು ಬಂಧಿಸಬಹುದು ಎಂಬ ಸಣ್ಣ ಆತಂಕ ಸ್ಯಾಂಟ್ರೋ ರವಿಗಿದೆ. ಹೀಗಾಗಿ ಆತ ಕೆಲವು ದಿನಗಳ ಹಿಂದೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾನೆ. ಸೋಮವಾರ ಈ ಅರ್ಜಿಯ ವಿಚಾರಣೆ ನಾಲ್ಕನೇ ಅಡಿಷನಲ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭಗೊಂಡಿದ್ದು, ವಿಚಾರಣೆಯನ್ನು ಜನವರಿ ೧೦ಕ್ಕೆ ಮುಂದೂಡಲಾಗಿದೆ.

ವಿಜಯನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಕೋರ್ಟ್‌ ತಕ್ಷಣಕ್ಕೆ ತೀರ್ಮಾನ ತೆಗೆದುಕೊಂಡಿಲ್ಲ. ಬದಲಾಗಿ ಆರೋಪಿಗೆ ನೋಟಿಸ್‌ ಜಾರಿ ಮಾಡಿದೆ. ಜತೆಗೆ ಪೊಲೀಸರಿಂದಲೂ ವಿವರವನ್ನು ಕೋರಿದೆ. ಆಕ್ಷೇಪಣೆ ಸಲ್ಲಿಸಲು ಪಬ್ಲಿಕ್‌ ಪ್ರಾಸಿಕ್ಯೂಟರ್‌ಗೆ ಸೂಚನೆ ಕೊಟ್ಟಿದೆ.

ಇದನ್ನೂ ಓದಿ | Santro Ravi case | ಹಾಗಿದ್ದರೆ ಸ್ಯಾಂಟ್ರೋ ರವಿ ದುಡ್ಡೆಣಿಸಿದ್ದು ಯಾರ ಮನೆಯಲ್ಲಿ?: ಆರಗಗೆ ಎಚ್‌ಡಿಕೆ ಪ್ರಶ್ನೆ

Exit mobile version