ಬೆಂಗಳೂರು: ಕುಖ್ಯಾತ ಕ್ರಿಮಿನಲ್ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi case) ರವಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೆಚ್ಚು ಮಾತ್ರೆ ನುಂಗಿದ್ದೇ ಈ ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ. ತಕ್ಷಣವೇ ಸಿಐಡಿ ಅಧಿಕಾರಿಗಳು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಗುರುವಾರ (ಜ. ೨೬) ರಾತ್ರಿ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಆತನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಅಗತ್ಯಕ್ಕಿಂತ ಹೆಚ್ಚು ಮಾತ್ರೆ ನುಂಗಿರುವುದೇ ಕಾರಣ ಎನ್ನಲಾಗಿದೆ. ಶುಗರ್, ಬಿಪಿ ಸೇರಿ ಹಲವು ಸಮಸ್ಯೆಯಿಂದ ಬಳಲುತ್ತಿದ್ದಾನೆ. ಸದ್ಯ ವಿಕ್ಟೋರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
2ನೇ ಪತ್ನಿ ವಿಚಾರಣೆ, ಸ್ಥಳ ಮಹಜರು
ಸ್ಯಾಂಟ್ರೋ ರವಿ ವಿರುದ್ಧದ ದಲಿತ ಮಹಿಳೆಯ ಅತ್ಯಾಚಾರ, ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನವರಿ ೨೧ರಂದು ರವಿಯ ಎರಡನೇ ಪತ್ನಿಯನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿ, ಸ್ಥಳ ಮಹಜರು ನಡೆಸಿದ್ದರು. ಡಿವೈಎಸ್‌ಪಿ ಅಂಜುಮಾಲ ನಾಯಕ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: High court order | ಪತ್ನಿಯಿಂದ ಜೀವನಾಂಶ ಕೊಡಿಸಿ ಎಂದು ಕೇಳಿದ ಸೋಮಾರಿ ಗಂಡನಿಗೆ ಹೈಕೋರ್ಟ್ ತಪರಾಕಿ
ಸಿಐಡಿ ಕಚೇರಿಯಲ್ಲಿ ರವಿ 2ನೇ ಪತ್ನಿ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಶೇಷಾದ್ರಿಪುರಂನ ವಾಹಬ್ ಅಪಾರ್ಟ್‌ಮೆಂಟ್‌ನಲ್ಲಿ ಸ್ಥಳ ಮಹಜರು ನಡೆಸಲಾಗಿತ್ತು. ಅಪಾರ್ಟ್ಮೆಂಟ್‌ನಲ್ಲಿ ಇರಿಸಿ ಗರ್ಭಪಾತ ಮಾಡಿಸಿದ್ದಾಗಿ ಸ್ಯಾಂಟ್ರೋ ರವಿ ಪತ್ನಿ ಆರೋಪ ಮಾಡಿದ್ದರು. ಹೀಗಾಗಿ ಮಹಿಳೆ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಾಗಿತ್ತು.
ಶೇಷಾದ್ರಿಪುರಂನ ವಾಹಬ್ ಅಪಾರ್ಟ್ಮೆಂಟ್‌ಗೆ ಸಿಐಡಿ ತಂಡ ತೆರಳಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಹೋಟೆಲ್ ಸನ್ಮಾನ್‌ನಲ್ಲಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು. ಹೋಟೆಲ್‌ನಲ್ಲೇ ಕುಳಿತು ಸ್ಯಾಂಟ್ರೋ ರವಿ ಡೀಲಿಂಗ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಕಲೆಹಾಕಲಾಗಿತ್ತು. ಸ್ಯಾಂಟ್ರೋ ರವಿ ಕರೆತರುತ್ತಿದ್ದ ಅಧಿಕಾರಿಗಳು ಯಾರು ಎಂಬುದರ ಬಗೆಗೂ ಸಿಐಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಶೇಷಾದ್ರಿಪುರಂ ವಹಾಬ್ ಅಲ್ಮಿಯಾದಲ್ಲಿ ಸ್ಯಾಂಟ್ರೋ ರವಿ ಮನೆ ಮಾಡಿ ಎರಡನೇ ಪತ್ನಿಯನ್ನು ತಂದಿರಿಸಿ, ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ. ನಂತರ ಆಕೆ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಗರ್ಭಪಾತಕ್ಕೆ ಒತ್ತಾಯ ಮಾಡಿದ್ದಾನೆ. ಬಳಿಕ ಒತ್ತಾಯಪೂರ್ವಕವಾಗಿ ಶೇಷಾದ್ರಿಪುರಂ ಟ್ರಿನಿಟಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾನೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಟ್ರಿನಿಟಿ ಆಸ್ಪತ್ರೆಯಲ್ಲಿ ಈ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: Gold rate : ಬಂಗಾರದ ದರದಲ್ಲಿ 660 ರೂ. ಇಳಿಕೆ, ಬೆಳ್ಳಿ 400 ರೂ. ಅಗ್ಗ
ಸತತ ಎರಡು ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ ಅಧಿಕಾರಿಗಳು, ಸ್ಯಾಂಟ್ರೋ ರವಿ ಮಲಗುತ್ತಿದ್ದ ಕೋಣೆ ಸೇರಿ ಸಂತ್ರಸ್ತೆ ಸೂಚಿಸಿದ ಸ್ಥಳಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಜತೆಗೆ ಸಂತ್ರಸ್ತೆ ನೀಡಿದ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಸ್ಯಾಂಟ್ರೋ ರವಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ.
ಸಹಚರರು ಜ. 30ರವರೆಗೆ ಸಿಐಡಿ ಕಸ್ಟಡಿಗೆ
ವೇಶ್ಯಾವಾಟಿಕೆ ಕಿಂಗ್‌ಪಿನ್ ಸ್ಯಾಂಟ್ರೋ ರವಿ ಪ್ರಕರಣವು ಸಿಐಡಿಗೆ ವರ್ಗಾವಣೆಯಾಗುತ್ತಿದ್ದಂತೆ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಜ. ೧೭ರಂದು ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಆರೋಪಿ ಸ್ಯಾಂಟ್ರೋ ರವಿ, ರಾಮ್ ಜೀ, ಸತೀಶ್‌ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಮೈಸೂರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜ.೧೭ರಂದು ವಿಚಾರಣೆ ವೇಳೆ ತನಿಖಾಧಿಕಾರಿಗಳ ಮನವಿ ಮೇರೆಗೆ ಜ.30ರವರೆಗೂ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು.
ಸ್ಯಾಂಟ್ರೋ ರವಿ ವಿರುದ್ಧದ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುತ್ತಿದ್ದಂತೆಯೇ ಜನವರಿ ೧೬ರಂದೇ ಮೈಸೂರಿಗೆ ಆಗಮಿಸಿದ್ದ ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದ ತಂಡ, ಮೈಸೂರಿನಲ್ಲೇ ಇಡೀ ದಿನ ಬೀಟು ಬಿಟ್ಟಿತ್ತು. ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಅಧಿಕಾರಿಗಳು, ಕಮಿಷನರ್ ರಮೇಶ್ ಬಾನೋತ್, ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್ ಅವರೊಂದಿಗೆ ಚರ್ಚಿಸಿದ್ದರು. ತನಿಖೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ದೂರು ಪ್ರತಿ, ಎಫ್‌ಐಆರ್, ಆರೋಪಿಗಳ ಬಂಧನ, ವೈದ್ಯಕೀಯ ಪರೀಕ್ಷೆ, ಸಿಡಿಆರ್ ಸೇರಿ ಎಲ್ಲ ದಾಖಲೆಗಳ ಹಸ್ತಾಂತರ ಮಾಡಿಕೊಂಡಿದ್ದರು.
ಈ ಬಗ್ಗೆ ಮಾತನಾಡಿದ್ದ ಕಮಿಷನರ್ ರಮೇಶ್ ಬಾನೋತ್, ಸಿಐಡಿ ಅಧಿಕಾರಿಗಳಿಗೆ ದಾಖಲೆಗಳನ್ನು ವರ್ಗಾಹಿಸಿದ್ದೇವೆ. ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿದೆ. ನಾವು ದಾಖಲೆಗಳನ್ನು ಹಸ್ತಾಂತರ ಮಾಡಿದ್ದೇವೆ.
ಪ್ರಕರಣದ ತನಿಖಾಧಿಕಾರಿ ಬದಲಾಗಿದ್ದಾರೆ. ಆದ್ದರಿಂದ ನಮ್ಮ ಪಾತ್ರ ಇರುವುದಿಲ್ಲ. ಸ್ಥಳೀಯವಾಗಿ ಸಹಕಾರ ಬೇಕಾದರೆ ನೀಡುತ್ತೇವೆ. ರಾಜ್ಯ ಸರ್ಕಾರ ಯಾವುದೇ ಪ್ರಕರಣವನ್ನು ಸಿಐಡಿಗೆ ವಹಿಸಬಹುದು ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಚೇತರಿಕೆ
ಚೆಕ್ ಬೌನ್ಸ್ ಪ್ರಕರಣ ದಾಖಲು
ಈ ನಡುವೆ ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು. ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ಎರಡನೇ ಪತ್ನಿ ದೂರು ನೀಡಿದ್ದರು. ನನ್ನ ಚೆಕ್‌ಬುಕ್ ಕಳವು ಹಾಗೂ ದುರ್ಬಳಕೆ ಮಾಡಿಕೊಳ್ಳಲಾಗಿದೆ.
2019ರಲ್ಲಿ ಸ್ಯಾಂಟ್ರೋ ರವಿ ನನ್ನ ಖಾತೆ ಓಪನ್ ಮಾಡಿಸಿ, ಚೆಕ್ ಬುಕ್ ತರಿಸಿದ್ದ. 2020ರ ವರೆಗೂ ಆತನ ಬಳಿಯೇ ಚೆಕ್ ಬುಕ್ ಇತ್ತು. 2020ರಲ್ಲಿ ಆತ ವಾಪಸ್ ಕೊಟ್ಟ ದಿನವೇ ಕಳವಾಗಿತ್ತು. ಆಗ ದೇವರಾಜ ಪೊಲೀಸ್ ಠಾಣೆಗೆ ದೂರು ಕೊಟ್ಟು ಎನ್‌ಸಿಆರ್ ಪಡೆದಿದ್ದೆ. ಆಗ ಯಾರು ಕಳವು ಮಾಡಿದ್ದರು ಅಂತ ಗೊತ್ತಾಗಿರಲಿಲ್ಲ. ಈಗ ನನ್ನ ಪತಿಯೇ ಚೆಕ್ ಕದ್ದು ದುರ್ಬಳಕೆ ಮಾಡಿಕೊಂಡಿರೋದು ಗೊತ್ತಾಗಿದೆ. 10 ಲಕ್ಷ ರೂ. ಚೆಕ್ ಬೌನ್ಸ್ ಕೇಸ್ ಹಾಕಿದ್ದ. ಪ್ರಕಾಶ್ ಎಂಬುವರು 2022ರಲ್ಲಿ ಪ್ರಕಾಶ್ ಇದೇ ಚೆಕ್‌ಲೀಫ್ ಬಳಸಿ 5 ಲಕ್ಷ ರೂ. ಕೇಸ್ ಹಾಕಿದ್ದರು. ಸ್ಯಾಂಟ್ರೋ ರವಿ ಮತ್ತಷ್ಟು ಚೆಕ್ ಬಳಸಿ ಬ್ಲ್ಯಾಕ್‌ಮೇಲ್ ಮಾಡೋದಾಗಿ ಧಮ್ಕಿ ಹಾಕಿದ್ದಾನೆ ಎಂದು ವಿಸ್ತಾರ ನ್ಯೂಸ್‌ಗೆ ಸಂತ್ರಸ್ತೆ ಪ್ರತಿಕ್ರಿಯೆ ನೀಡಿದ್ದರು.