Site icon Vistara News

Santro Ravi case | ಗೃಹ ಸಚಿವರ ಮನೆಯಲ್ಲಿ ದುಡ್ಡು ಎಣಿಸಿದ ಸ್ಯಾಂಟ್ರೋ ರವಿ: ಎಚ್‌ಡಿಕೆಗೆ ಸವಾಲು ಹಾಕಿದ ಆರಗ ಜ್ಞಾನೇಂದ್ರ

HDK Santro ravi

ಬೆಂಗಳೂರು: ಪ್ರಭಾವಿ ರಾಜಕಾರಣಿಗಳ ಜತೆ ಆಪ್ತ ಸಖ್ಯವನ್ನು ಇಟ್ಟುಕೊಂಡಿರುವ ಮೈಸೂರಿನ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ (Santro Ravi case) ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಯಲ್ಲೇ ಕುಳಿತು ಹಣದ ಕಂತೆಯನ್ನು ಇಟ್ಟುಕೊಂಡು ಲೆಕ್ಕ ಮಾಡುತ್ತಿದ್ದ ಎಂಬ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಸಚಿವರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಇದು ಸುಳ್ಳು ಆರೋಪವಾಗಿದ್ದು, ಕುಮಾರಸ್ವಾಮಿ ಅವರು ತಮ್ಮಲ್ಲಿ ದಾಖಲೆ ಇದ್ದರೆ ಇದನ್ನು ಸಾಬೀತುಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಮಾಡಿದ ಆರೋಪವೇನು?
ಯಾವುದೋ ಎಸಿಪಿ ವರ್ಗಾವಣೆಗೆ ೭೫ ಲಕ್ಷ ರೂಪಾಯಿ ವರ್ಗಾವಣೆಯ ಡೀಲ್‌ ಅದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಸ್ಯಾಂಟ್ರೋ ರವಿ ೧೫ ಲಕ್ಷ ರೂಪಾಯಿ ತಂದಿಟ್ಟುಕೊಂಡು ಲೆಕ್ಕ ಮಾಡುತ್ತಿದ್ದಾನೆ. ಲೆಕ್ಕ ಮಾಡುತ್ತಿರುವ ಫೋಟೊವನ್ನು ತೆಗೆದವರು ಯಾರು? ಇದನ್ನು ನಾನು ಎಷ್ಟು ಎಂದು ಕೆದಕುತ್ತಾ ಕೂರಲಿ? ನಾನು ನನ್ನ ಪಂಚರತ್ನ ಯಾತ್ರೆ ಬಗ್ಗೆ ಗಮನ ಹರಿಸುತ್ತಿದ್ದೇನೆ. ರಾಜ್ಯದ ಜನತೆ ಮುಂದೆ ಉತ್ತಮ ಆಡಳಿತ ನೀಡಲು ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಇಲ್ಲಿ ಈ ಸಮಸ್ಯೆ ಬಂದಿದ್ದರಿಂದ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ. ಗೃಹ ಸಚಿವರ ಗೃಹದಲ್ಲೇ ಹೀಗೆ ಆಗಿದ್ದರಿಂದ ಅವರೇ ಈ ಬಗ್ಗೆ ತನಿಖೆ ಮಾಡಿಸಲಿ ಎಂದು ಕುಮಾರಸ್ವಾಮಿ ಅವರು ಭಾನುವಾರ ಬೀದರ್‌ನಲ್ಲಿ ಹೇಳಿದ್ದರು.

ಆರಗ ಜ್ಞಾನೇಂದ್ರ ಅವರ ಸವಾಲೇನು?
ಕುಮಾರಸ್ವಾಮಿ ಆರೋಪಕ್ಕೆ ಪ್ರತಿಯಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಆರಗ ಜ್ಞಾನೇಂದ್ರ ಅವರು, ಕುಮಾರಸ್ವಾಮಿಯವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಅವರು ಅತ್ಯಂತ ಬೇಜವಾಬ್ದಾರಿಯಿಂದ ಆರೋಪಗಳನ್ನು ಮಾಡಿದ್ದಾರೆ. ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಹೇಳುವುದರ ಮೂಲಕ ಅವರು ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ವೇದ್ಯವಾಗುತ್ತದೆ ಎಂದಿದ್ದಾರೆ.

ಸಾಂಟ್ರೋ ರವಿಯ ಹಿನ್ನೆಲೆಯ ಬಗ್ಗೆ ತನಿಖೆ ನಡೆಸಿ ವಿಚಾರಣೆ ಮಾಡಿ ಎಂದು ಪೊಲೀಸರಿಗೆ ತಿಳಿಸಿದ್ದೇನೆ. ನನ್ನ ಮನೆಯಲ್ಲಿ ಆತ ಹಣದ ಗಂಟನ್ನು ಬಿಚ್ಚಿದ್ದಾನೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪ ಸತ್ಯಕ್ಕೆ ಅಪಚಾರವಾಗುವಂತಹ ಆಪಾದನೆಯಾಗಿದೆ. ನನ್ನನ್ನು ಯಾವ ಕಾರಣದಿಂದ ತೇಜೋವಧೆ ಮಾಡುತ್ತಿದ್ದಾರೆ, ಎಂದು ತಿಳಿದಿಲ್ಲ. ಇದರಿಂದ ಅವರಿಗೆ ಯಾವರೀತಿ ಲಾಭವಾಗುತ್ತದೆಯೋ ಗೊತ್ತಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ʻʻಗೃಹ ಸಚಿವನಾದ ನನ್ನನ್ನು, ಸಮಾಜದ ಕಟ್ಟಕಡೆಯ ಜನರೂ ಒಳಗೊಂಡಂತೆ, ದಿನನಿತ್ಯ ನೂರಾರು ಮಂದಿ ಭೇಟಿ ಮಾಡುತ್ತಾರೆ. ಪ್ರತಿಯೊಬ್ಬರ ಹಿನ್ನೆಲೆಯನ್ನೂ ಸೋಸಿ ನೋಡಲಾಗುವುದಿಲ್ಲʼʼ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸ್ಯಾಂಟ್ರೋ ರವಿ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ, ಕುಮಾರಕೃಪಾ ಗೆಸ್ಟ್‌ ಹೌಸ್‌ನಲ್ಲಿ ಹಣ ಎಣಿಸುತ್ತಿರುವ ಚಿತ್ರಗಳು ಈಗಾಗಲೇ ಬಯಲಾಗಿವೆ. ಇದರ ನಡುವೆ, ತಾನು ಸಚಿವ ಆರಗ ಜ್ಞಾನೇಂದ್ರ ಅವರ ಪುತ್ರನನ್ನು ಭೇಟಿಯಾಗಲು ಹೋಗುತ್ತಿರುವುದಾಗಿ ಸ್ಯಾಂಟ್ರೋ ರವಿ ಹಾಕಿರುವ ಸ್ಟೇಟಸ್‌ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Santro Ravi Case | ರಾಜ್ಯಾದ್ಯಂತ ಸ್ಯಾಂಟ್ರೋ ರವಿ ಪ್ರಭಾವ! ಯುವತಿಗೆ 1.83 ಲಕ್ಷ ಮೌಲ್ಯದ ರ‍್ಯಾಡೋ ವಾಚ್ ಗಿಫ್ಟ್!

Exit mobile version