ಮೈಸೂರು: ವೇಶ್ಯಾವಾಟಿಕೆ ಕಿಂಗ್‌ಪಿನ್ ಸ್ಯಾಂಟ್ರೋ ರವಿಯ ವಿರುದ್ಧ ದಲಿತ ಮಹಿಳೆ ಮಾಡಿರುವ ಆರೋಪಗಳ ಬಗ್ಗೆ ರವಿ ಪರ ವಕೀಲ ಹರೀಶ್ ಪ್ರಭು ತಿರುಗೇಟು ನೀಡಿದ್ದಾರೆ. ಇದು ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿ ಬಂದಿರುವ ಮೊದಲ ಅಧಿಕೃತ ಪ್ರತಿಕ್ರಿಯೆಯಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹರೀಶ್ ಪ್ರಭು ಅವರು ಸಂತ್ರಸ್ತೆ ಕೆ.ಎಸ್.ಮಂಜುನಾಥ್ ಅವರಿಂದ 10 ಲಕ್ಷ ರೂ.ಸಾಲ ಪಡೆದಿದ್ದಾರೆ. ಆ ಸಾಲ ತೀರಿಸದೆ ಅತ್ಯಾಚಾರ, ಜಾತಿ ನಿಂದನೆಯಂತಹ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದರು. ದೂರುದಾರ ಮಹಿಳೆ ಸ್ಯಾಂಟ್ರೋ ರವಿ ಪತ್ನಿಯೇ ಅಲ್ಲ ಎಂದರು.
ವಕೀಲ ಹರೀಶ್ ಪ್ರಭು ಹೇಳುವುದೇನು?
೧. ಹಣಕಾಸಿನ ವ್ಯಾಜ್ಯವನ್ನು ವಿಜೃಂಭಿಸಿ ಹೇಳಲಾಗಿದೆ. ಸಂತ್ರಸ್ತೆ ಅಕ್ಕನ ಮದುವೆಗಾಗಿ 10 ಲಕ್ಷ ರೂ. ಸಾಲ ಪಡೆದಿದ್ದರು. ಅದನ್ನು ತೀರಿಸಲಾಗದೆ ಸುಳ್ಳು ದೂರು ದಾಖಲಿಸಿದ್ದಾರೆ.
೨. ಸಂತ್ರಸ್ತೆ ಕೆ.ಆರ್.ಮಂಜುನಾಥ್ ಅವರನ್ನು ಮದುವೆ ಆಗಿಲ್ಲ. ಎರಡನೇ ಪತ್ನಿ ಎನ್ನುವುದೇ ಸುಳ್ಳು. ಮದುವೆ ಆಗಿದ್ದರೆ ಇದುವರೆಗೂ ಯಾಕೆ ಸಾಕ್ಷ್ಯಾಧಾರ ಸಲ್ಲಿಸಿಲ್ಲ ?
೩. ಸ್ಯಾಂಟ್ರೋ ರವಿ ಬಳಿ ಐಶಾರಾಮಿ ಬಂಗಲೆ, ಕಾರುಗಳು ಇಲ್ಲ. ಅವರು ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದಾರೆ.
೪. ಕೆ.ಎಸ್.ಮಂಜುನಾಥ್ ಯಾವುದೇ ತಪ್ಪು ಮಾಡಿಲ್ಲ. ಸ್ಟೇಟಸ್ ಹಾಕಿಕೊಂಡಿರುವುದನ್ನೇ ದೊಡ್ಡ ರೀತಿಯಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ.
೫. ಕೌಟುಂಬಿಕ ಕಲಹವನ್ನು ಸಿಐಡಿ ತನಿಖೆ ಮಾಡುವ ಸಾಧ್ಯತೆ ಇಲ್ಲ. ವರ್ಗಾವಣೆ ಸೇರಿದಂತೆ ಬೇರಾವುದೇ ಎಫ್‌ಐಆರ್ ದಾಖಲಾಗಿಲ್ಲ.
ಸಾಲ ಪಡೆದ ಆರೋಪ ಸುಳ್ಳು, ಮದುವೆಗೆ ಸಾಕ್ಷ್ಯವಿದೆ ಎಂದ ಸಂತ್ರಸ್ತೆ
ವಕೀಲ ಹರೀಶ್ ಪ್ರಭು ಅವರ ಆರೋಪವನ್ನು ಸಂತ್ರಸ್ತ ಮಹಿಳೆ ತಳ್ಳಿಹಾಕಿದ್ದಾರೆ. ʻʻನಾನು 10 ಲಕ್ಷ ರೂ. ಸಾಲ ಪಡೆದಿರುವುದು ಸುಳ್ಳು. ಸ್ಯಾಂಟ್ರೋ ರವಿ ಜೊತೆ ಮದುವೆಯಾಗಿರುವುದಕ್ಕೆ ಆಹ್ವಾನ ಪತ್ರಿಕೆ ಫೋಟೊ ಸೇರಿದಂತೆ ಸಾಕಷ್ಟು ದಾಖಲೆಗಳನ್ನು ಈಗಾಗಲೇ ತನಿಖಾಧಿಕಾರಿಗಳಿಗೆ ಕೊಟ್ಟಿದ್ದೇನೆʼʼ ಅಂಥ ಸ್ಪಷ್ಟಪಡಿಸಿದರು.
ಯಾವುದೇ ಜಿದ್ದು ಇಲ್ಲ ಎಂದ ಒಡನಾಡಿ
ʻʻಒಡನಾಡಿ ಸೇವಾ ಸಂಸ್ಥೆ ಅನುಶಾಸನಬದ್ಧವಾಗಿ ಸರ್ಕಾರದ ಜತೆಯಲ್ಲಿ ಕೆಲಸ ಮಾಡುವ ಸಂಸ್ಥೆ.
ಸ್ಯಾಂಟ್ರೋ ರವಿ ಜತೆ ನಮಗೆ ಜಿದ್ದು ಇಲ್ಲʼʼ ಎಂದು ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಹೇಳಿದ್ದಾರೆ.
ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಆರೋಪಿಗಳ ಪರ ವಕೀಲರು ಆರೋಪಿಯನ್ನು ರಕ್ಷಣೆ ಮಾಡಲೇಬೇಕು. ಅದಕ್ಕಾಗಿ ಆತನ ಪರವಾಗಿ ವಾದ ಮಾಡಲಿ. ಆದರೆ ಸ್ಯಾಂಟ್ರೋ ರವಿ ಏನು ? ಆತನ ಚರಿತ್ರೆ ಏನು ಅನ್ನೋದಕ್ಕೆ ಒಡನಾಡಿ ಸೇವಾ ಸಂಸ್ಥೆಯಲ್ಲಿ ದೊಡ್ಡ ಫೈಲ್ ಇದೆ. ಅಗತ್ಯವಿದ್ದರೆ ಆರೋಪಿ ಪರ ವಕೀಲರೂ ಬಂದು ಪರಿಶೀಲಿಸಲಿ. ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿರುವುದು ಸ್ವಾಗತʼʼ ಎಂದರು.
ಇದನ್ನೂ ಓದಿ | Santro Ravi Case | ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗ: ನ್ಯಾಯಾಂಗ ಬಂಧನ ಮುಂದುವರಿಕೆ