ಮೈಸೂರು: ಕುಖ್ಯಾತ ಕ್ರಿಮಿನಲ್ ಹಾಗೂ ರಾಜಕಾರಣಿಗಳು ಮತ್ತು ಅಧಿಕಾರಿಗಳ ಆಪ್ತ ಸಖನಾಗಿದ್ದ ಮೈಸೂರಿನ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯ ಬಂಧನವನ್ನು ಕೊನೆಗೂ ಪೊಲೀಸರು ಖಚಿತಪಡಿಸಿದ್ದಾರೆ. ೧೧ ದಿನಗಳಿಂದ ತಲೆಮರೆಸಿಕೊಂಡಿರುವ ಸ್ಯಾಂಟ್ರೋ ರವಿಯನ್ನು ಬುಧವಾರ ರಾತ್ರಿ ರಾಮನಗರದ ಮನೆಯೊಂದರಲ್ಲಿ ಬಂಧಿಸಲಾಗಿದೆ ಎಂದು ವಿಸ್ತಾರ ನ್ಯೂಸ್ ಗುರುವಾರವೇ ವರದಿ ಮಾಡಿತ್ತು. ಆದರೆ, ಪೊಲೀಸ್ ಅಧಿಕಾರಿಗಳು ಮಾತ್ರ ಇದನ್ನು ದೃಢೀಕರಿಸಿರಲಿಲ್ಲ ಮಾತ್ರವಲ್ಲ ಇನ್ನೂ ಬಂಧನ ಆಗಿಲ್ಲ ಎಂದೇ ಹೇಳಿಕೊಂಡಿದ್ದರು.
ಆದರೆ, ವಿಸ್ತಾರ ನ್ಯೂಸ್‌ಗೆ ಬಂಧನದ ಬಗ್ಗೆ ಖಚಿತವಾದ ಮಾಹಿತಿ ಇತ್ತು. ಹೀಗಾಗಿ ವರದಿ ಮಾಡಿತ್ತು. ಪೊಲೀಸರು ಗುರುವಾರ ಆತನ ಬಂಧನವನ್ನು ಖಚಿತಪಡಿಸಿದ್ದಾರೆ. ಆತನನ್ನು ರಾಮನಗರ ಮನೆಯೊಂದರಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ತಿಳಿದುಬಂದಿತ್ತು. ಬಳಿಕ ಆತನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು.
ಸ್ಯಾಂಟ್ರೋ ರವಿಯ ಮೇಲೆ ಮಹಿಳೆಯ ಕೇಸು ದಾಖಲಾಗುತ್ತಿದ್ದಂತೆಯೇ ಆತನ ವಿರುದ್ಧ ನೂರಾರು ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿದ್ದು ಆತನಿಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜತೆಗೆ ಇರುವ ಸಂಬಂಧವೂ ಬಯಲಾಗಿತ್ತು. ಹೀಗಾಗಿ ಆತನ ಬಂಧನ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಸ್ಯಾಂಟ್ರೋ ರವಿ ಕಳೆದ ೨೫ ವರ್ಷಗಳಿಂದ ಹೈಟೆಕ್ ವೇಶ್ಯಾವಾಟಿಕೆ ಮತ್ತು ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಕಾಲ ಕಾಲದ ಪ್ರಭಾವಿ ರಾಜಕಾಣಿಗಳ ಜತೆ, ಅಧಿಕಾರಿಗಳ ಜತೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದಾನೆ ಎನ್ನುವುದು ಈ ಹಿಂದಿನಿಂದಲೂ ಸುದ್ದಿಯಲ್ಲಿತ್ತು. ಆದರೆ, ಹತ್ತು ದಿನಗಳ ಹಿಂದೆ ದಲಿತ ಮಹಿಳೆಯೊಬ್ಬರು ಮೈಸೂರು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಅತ್ಯಾಚಾರ ಮತ್ತು ವಂಚನೆಯ ಕೇಸು ದಾಖಲಿಸಿದ ಬೆನ್ನಿಗೇ ಭಾರಿ ಚರ್ಚೆ ಆರಂಭವಾಯಿತು.
ಹತ್ತು ದಿನಗಳ ಹಿಂದೆ ಕೇಸ್, ಆರು ತಂಡಗಳಿಂದ ಹುಡುಕಾಟ
ಹತ್ತು ದಿನಗಳ ಹಿಂದೆ ದಲಿತ ಮಹಿಳೆಯೊಬ್ಬರು ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ ದೂರು ನೀಡಿದ್ದರು. ಸ್ಯಾಂಟ್ರೋ ರವಿ ೨೦೧೯ರಲ್ಲಿ ತನಗೆ ಕೆಲಸ ಕೊಡಿಸುವುದಾಗಿ ಹೇಳಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಳಿಕ ತನ್ನನ್ನು ಮದುವೆಯಾಗಿದ್ದು, ಬೇರೆ ಬೇರೆ ಅಧಿಕಾರಿಗಳ ಜತೆಗೆ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಿದ್ದರು.
ಇದರ ಬೆನ್ನಿಗೇ ಸ್ಯಾಂಟ್ರೋ ರವಿ ಹೊಂದಿದ್ದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಂಪರ್ಕದ ನೂರಾರು ಚಿತ್ರಗಳು, ಅಧಿಕಾರಿಗಳ ವರ್ಗಾವಣೆಯಲ್ಲಿ ಆತನ ಕೈವಾಡದ ಫೋನ್ ಸಾಕ್ಷ್ಯಗಳು ಲಭ್ಯವಾಗಿದ್ದವು.
ಇದೀಗ ಆತನ ಬಂಧನದ ಬಳಿಕ ಕೋರ್ಟ್‌ಗೆ ಹಾಜರುಪಡಿಸುವ ನಿರೀಕ್ಷೆ ಇದೆ. ಅದಕ್ಕಿಂತ ಮೊದಲು ಮೈಸೂರು ಪೊಲೀಸರು ಸುದ್ದಿ ಗೋಷ್ಠಿ ಆಯೋಜಿಸಿದ್ದು, ಅವರು ಏನೆಲ್ಲ ಮಾಹಿತಿಗಳನ್ನು ನೀಡಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ | Santro Ravi Case | ಟೈಟನ್, ರ‍್ಯಾಡೋ, ರೊಲೆಕ್ಸ್ ಇವು ವಾಚ್ ಬ್ರಾಂಡ್‌ಗಳಷ್ಟೇ ಅಲ್ಲ, ಸ್ಯಾಂಟ್ರೋ ರವಿಯ ಹುಡ್ಗೀರ ಕೋಡ್‌ವರ್ಡ್‌ಗಳು!