ಮೈಸೂರು: ಕುಖ್ಯಾತ ಕ್ರಿಮಿನಲ್ ಸ್ಯಾಂಟ್ರೋ ರವಿ (Santro Ravi case) ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿಸುವುದರಲ್ಲಿ ಸಿದ್ಧಹಸ್ತ ಎನ್ನುವುದು ಈಗಾಗಲೇ ಬಯಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಒಂದು ಆಡಿಯೋಗದಲ್ಲಿ ಆತ ಚಿಟಿಕೆ ಹೊಡೆದಷ್ಟು ಸುಲಭದಲ್ಲಿ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡುವ ಮಾತನ್ನು ಆಡುತ್ತಾನೆ. ಎಲ್ಲಿಗೆ ಬೇಕು ಕೇಳು, ಮಾಡಿಸಿಕೊಡುತ್ತೇನೆ ಎನ್ನುವಷ್ಟು ಸರಳವಾಗಿದೆ ಟ್ರಾನ್ಸ್‌ಫರ್ ಎಂದು ವಿವರಿಸುತ್ತಾನೆ. ಒಂದು ವರ್ಗಾವಣೆಗೆ ೫೦ ಕೋಟಿ ಫಿಕ್ಸ್ ಆಗಿದೆ ಎನ್ನುತ್ತಾನೆ. ಹಾಗಿದ್ದರೆ ನಿಜಕ್ಕೂ ಈಗ ಟ್ರಾನ್ಸ್‌ಫರ್ ದಂಧೆಯ ಕಿಂಗ್ ಪಿನ್ ಆಗಿದ್ದಾನಾ ಅಥವಾ ತನ್ನನ್ನು ತಾನು ಬೆನ್ನು ತಟ್ಟಿಕೊಂಡು ಹಣ ವಸೂಲಿ ಮಾಡುತ್ತಿದ್ದಾನಾ ಎಂದು ಪರಿಶೀಲಿಸಿದಾಗ ಆತ ನಿಜಕ್ಕೂ ವರ್ಗಾವಣೆ ದಂಧೆಯಲ್ಲಿ ಸಕ್ರಿಯವಾಗಿರುವ ದಾಖಲೆಗಳು ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ಈ ಹಿಂದೆ ಆತ ಆರ್.ಆರ್ ನಗರದ ವ್ಯಕ್ತಿಯೊಬ್ಬರು ಮಂಜುನಾಥ್ ಎಂಬಾತ ಶೋಕಿ ಮಾಡುತ್ತಾ, ವರ್ಗಾವಣೆ ದಂಧೆ ಮಾಡುತ್ತಿದ್ದಾನೆ. ಆತ ನಿಜಕ್ಕೂ ವರ್ಗಾವಣೆ ಮಾಡಿಸಿಕೊಡುತ್ತಾನಾ ಅಥವಾ ಮೋಸ ಮಾಡುತ್ತಾನಾ ಎನ್ನುವುದರ ಬಗ್ಗೆ ತನಿಖೆ ನಡೆಸಿ ಎಂದು ಮೈಸೂರಿನ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಆಗ ಪೊಲೀಸ್ ಇನ್ಸ್‌ಪೆಕ್ಟರ್ ಲೋಹಿತ್ ಅವರು ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಕರೆಸಿಕೊಂಡು ಒಂದು ಮುಚ್ಚಳಿಕೆ ಬರೆಸಿಕೊಳ್ಳುತ್ತಾರೆ. ಅದರಲ್ಲಿ ಆತ ತಾನೊಬ್ಬ ಪಿಂಪ್ ಆಗಿದ್ದದ್ದು, ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದದ್ದು, ಆತ ಪ್ರಕರಣಗಳಲ್ಲಿ ಕೆಲವು ಖುಲಾಸೆ ಆಗಿದ್ದು ಸೇರಿದಂತೆ ತನ್ನ ಜನ್ಮ ಜಾತಕವನ್ನು ತಾನೇ ಬಿಚ್ಚಿಟ್ಟಿದ್ದಾನೆ. ಅದರಲ್ಲಿ ತಾನು ವರ್ಗಾವಣೆ ಮಾಡಿದ ಪೊಲೀಸರ ಪಟ್ಟಿಯನ್ನು ಕೊಟ್ಟಿದ್ದಾನೆ, ಜತೆಗೆ ತಾನು ವರ್ಗಾವಣೆ ವಿಚಾರದಲ್ಲಿ ಯಾರನ್ನೆಲ್ಲ ಸಂಪರ್ಕ ಮಾಡಿದ್ದೆ ಎಂಬ ವಿವರವನ್ನು ದಿನಾಂಕವಾರು ನೀಡಿದ್ದಾನೆ. ೨೦೨೨ರ ಜನವರಿ ೨೨ರಂದು ಈ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಇದರಲ್ಲಿ ತಾನು ಬಿಜೆಪಿ ಕಾರ್ಯಕರ್ತ, ತನಗೆ ಬಿಜೆಪಿ ನಾಯಕರ ಜತೆ ಉತ್ತಮ ಸಂಬಂಧವಿದೆ ಎಂದೂ ಹೇಳಿಕೊಂಡಿದ್ದಾನೆ.
ಸ್ಯಾಂಟ್ರೋ ರವಿ ಕಡೆಯಿಂದ ವರ್ಗಾವಣೆಗೊಂಡ ಪೊಲೀಸರ ಲಿಸ್ಟ್
೧. ಕರ್ನಾಟಕ ರಾಜ್ಯ ಗುಪ್ತವಾರ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಜಿ.ಕೆ ಸುಬ್ರಮಣ್ಯ – ಸ್ಯಾಂಟ್ರೋ ರವಿ ಮೂಲಕ ಚೆನ್ನರಾಯಪಟ್ಟಣ ಸರ್ಕಲ್ ಪೊಲೀಸ್ ಠಾಣೆಗೆ ವರ್ಗಾವಣೆ.
೨. ಅಲಗೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಮಳವಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ
ಯಾರ ಯಾರ ಜತೆ ಒಡನಾಟ, ಏನು ಕನೆಕ್ಷನ್?
೧. 19-01-2022ರ ಬೆಳಗ್ಗೆ 10 ಗಂಟೆಗೆ ರಾಜ್ಯ ಗೃಹ ಸಚಿವರ ಕಚೇರಿಯಲ್ಲಿ ಪಿಎ ಆಗಿ ಕೆಲಸ ಮಾಡಿಕೊಂಡಿರುವ ವಿಕ್ರಮ್ ಜೊತೆ ಸ್ಯಾಂಟ್ರೋ ರವಿ ಒಡನಾಟ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಕ್ರಮ್ ಗೆ ಸ್ಯಾಂಟ್ರೋ ರವಿ ಮೇಸೆಜ್ ಮಾಡಿದ್ದಾನೆ.
೨. 21-01-2022ರಂದು ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ವರ್ಗಾವಣೆ ವಿಚಾರವಾಗಿ ಸಂದೇಶ ಕಳುಹಸಿದ್ದ.
೩. 15-01-2022ರ ರಾತ್ರಿ 9.44ಕ್ಕೆ ಗೃಹ ಸಚಿವರ ಆತ್ಮೀಯ ಸ್ನೇಹಿತರಾಗಿರುವ ಬಿಜೆಪಿಯ ಬಸವರಾಜ್ ಒಡ್ಡಾಳ ಅವರಿಗೆ ರವಿ ಮೆಸೇಜ್ ಮಾಡಿದ್ದಾನೆ. ಬಿ.ಬಿ ಗಿರೀಶ್ ಅವರನ್ನು ಅಶೋಕನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸುವ ವಿಚಾರ ಚರ್ಚೆ ಮಾಡಿದ್ದ.
೪. 13-01-2022ರ ಸಂಜೆ 6.35ಕ್ಕೆ ಗೃಹ ಸಚಿವರ ಸ್ನೇಹಿತರಾದ ಶ್ರೀನಾಥ ಮೂಲಕ ಬಿ.ಬಿ ಗಿರೀಶ್ ವರ್ಗಾವಣೆ ವಿಚಾರವಾಗಿ ಗೃಹ ಸಚಿವರ ಮಾತನಾಡಲು ಸಂದೇಶ ಕಳುಹಿಸಿದ್ದ.
೫. 13-01-2022ರ ಮಧ್ಯಾಹ್ನ 12.39ಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ರಾಜೀವ್ ಅವರನ್ನು ಕುಂಬಳಗೊಡು ಪೊಲೀಸ್ ಠಾಣೆಗೆ ವರ್ಗಾವಣೆ ವಿಚಾರವಾಗಿ ಮಾತನಾಡಲು ಸಂದೇಶ ಕಳುಹಿಸಿದ್ದ.
೬. 11-01-2022ರ ರಾತ್ರಿ 9.17ಕ್ಕೆ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಣ್ ಅವರಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿಸಲು ಹುದ್ದೆಗಳು ಖಾಲಿ ಇರುವ ಪೊಲೀಸ್ ಠಾಣೆಗಳ ಮಾಹಿತಿ ಪಡೆಯಲು ಸಂದೇಶ ಕಳುಹಿಸಿದ್ದಾನೆ.
೭. 9-01-2022ರ ರಾತ್ರಿ 8.52ಕ್ಕೆ ಬಿಡಿಎನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಎಸ್ ಅಧಿಕಾರಿ ಆನಂದ ಅವರನ್ನು ಮೈಸೂರು ಮುಡಾಗೆ ವರ್ಗಾವಣೆ ಮಾಡಿಸುವ ಬಗ್ಗೆ ಸಂದೇಶ ರವಾನೆಯಾಗಿದೆ.
೮ 7-11-2022ರ ಬೆಳಗ್ಗೆ 9.41ಕ್ಕೆ ಮೈಸೂರು ಐಜಿಪಿ ಕಚೇರಿಯಲ್ಲಿ ಪಿಎಸ್ಐ ಆಗಿದ್ದ ಮಹೇಶ್ ಅವರಿಗೆ ಅಲಗೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ವರ್ಗಾವಣೆ ವಿಚಾರವಾಗಿ ಸಂದೇಶ ರವಾನೆಯಾಗಿದೆ.
ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಮೊದಲ ಪತ್ನಿ ಮನೆಗೆ ಲಗ್ಗೆ ಇಟ್ಟ 30 ಪೊಲೀಸರ ವಿಶೇಷ ತಂಡ: ಡೈರಿ, ಗ್ಯಾಸ್ ಬಿಲ್ ವಶಕ್ಕೆ!