Site icon Vistara News

Santro Ravi case | ಸ್ಯಾಂಟ್ರೋ ರವಿ ಮೊದಲ ಪತ್ನಿ ಮನೆಗೆ ಲಗ್ಗೆ ಇಟ್ಟ 30 ಪೊಲೀಸರ ವಿಶೇಷ ತಂಡ: ಡೈರಿ, ಗ್ಯಾಸ್‌ ಬಿಲ್‌ ವಶಕ್ಕೆ!

Santro Ravi RR Nagara house

ಬೆಂಗಳೂರು: ಕಳೆದ ೨೫ ವರ್ಷಗಳಿಂದಲೂ ಕ್ರಿಮಿನಲ್‌ ಚಟುವಟಿಕೆಗಳನ್ನು ನಡೆಸುತ್ತಿರುವ, ವೇಶ್ಯಾವಾಟಿಕೆ, ವರ್ಗಾವಣೆ ದಂಧೆಗಳಲ್ಲಿ ಮುಳುಗೇಳುತ್ತಿರುವ, ರಾಜಕಾರಣಿಗಳು ಮತ್ತು ಅಧಿಕಾರಿಗಳ ಆಪ್ತ ಸಖ ಮೈಸೂರಿನ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಹುಡುಕಾಟದ ನಾಟಕ ನಡೆಯುತ್ತಿದೆ.

ಸ್ಯಾಂಟ್ರೋ ರವಿ ಮೇಲೆ ದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆಯ ಪ್ರಕರಣ ದಾಖಲಿಸಿ ಒಂಬತ್ತು ದಿನಗಳು ಕಳೆದಿವೆ. ಆದರೆ, ಇನ್ನೂ ಆತನ ಬಂಧನವಾಗಿಲ್ಲ. ಆತನಿಗೆ ಲುಕ್‌ ಔಟ್‌ ನೋಟಿಸ್‌ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ. ಆರು ಪೊಲೀಸ್‌ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ. ಆದರೆ, ಶೋಧ ಕಾರ್ಯ ನಡೆಯುತ್ತಿರುವುದು ಎಲ್ಲಿ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ.

ಆರ್‌ಆರ್‌ ನಗರದ ನಿವಾಸಕ್ಕೆ ಎಂಟ್ರಿ
ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವಿಶಂಕರ್ ಮತ್ತು ಟೀಂ ಮಂಗಳವಾರ ಆರ್ ಆರ್ ನಗರದ ಸ್ಯಾಂಟ್ರೋ ರವಿ ಮನೆಗೆ ಎಂಟ್ರಿ ಕೊಟ್ಟು, ಇಡೀ ಮನೆಯನ್ನು ಜಾಲಾಡಿದೆ.

ಇದು ಸ್ಯಾಂಟ್ರೋ ರವಿ ತನ್ನ ಮೊದಲನೆಯ ಪತ್ನಿ ವನಜಾಕ್ಷಿ ಅವರ ಜತೆ ವಾಸವಾಗಿದ್ದ ಮನೆ. ಈಗಲೂ ಇಲ್ಲಿ ವನಜಾಕ್ಷಿ ಅವರು ವಾಸವಾಗಿದ್ದಾರೆ. ಸರ್ಚ್ ವಾರೆಂಟ್ ಹಿಡಿದು ಬಂದ ಪೊಲೀಸರು ಇಡೀ ಮನೆಯನ್ನು ಜಾಲಾಡಿದ್ದಾರೆ.

ರಾಜರಾಜೇಶ್ವರಿ ನಗರದ ಗೋಖಲೆ ರಸ್ತೆಯಲ್ಲಿರೋ 1191 ನಂಬರ್‌ನ ಮನೆ ಇದಾಗಿದ್ದು, ಇನ್ಸ್‌ಪೆಕ್ಟರ್ ರವಿಶಂಕರ್ ಸೇರಿದಂತೆ 30 ಪೊಲೀಸರ ವಿಶೇಷ ತಂಡ ಶೋಧ ಕಾರ್ಯಾಚರಣೆ ನಡೆಸಿದೆ. ಪರಿಶೀಲನೆಯ ಬಳಿಕ ಮನೆಯಲ್ಲಿ ಸಿಕ್ಕ ಸಿಪಿಯು, ಆಕ್ಸಿಸ್ ಬ್ಯಾಂಕ್‌ನ ಮೂರು ಚೆಕ್‌ಗಳು, ಡೈರಿ ಹಾಗೂ ಗ್ಯಾಸ್ ಬಿಲ್ಲನ್ನು ವಶಕ್ಕೆ ಪಡೆದು ತೆರಳಿದೆ.

ಇದನ್ನೂ ಓದಿ | Santro Ravi Case | ನಾನು ಬಿಜೆಪಿ ಕಾರ್ಯಕರ್ತ, ವರ್ಗಾವಣೆ ದಂಧೆ ನಿಜ ಎಂದು ಒಪ್ಪಿಕೊಂಡಿದ್ದ ಸ್ಯಾಂಟ್ರೋ ರವಿ

Exit mobile version