ಮೈಸೂರು/ಬೆಂಗಳೂರು: ಕುಖ್ಯಾತ ಕ್ರಿಮಿನಲ್ ಸ್ಯಾಂಟ್ರೋ ರವಿಯನ್ನು (Santro Ravi Case) ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದು, ಆತ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಖಚಿತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವ ಆರಗ ಜ್ಞಾನೇಂದ್ರ ಅವರು, ʻʻ೧೧ ದಿನಗಳ ನಂತರ ಸ್ಯಾಂಟ್ರೋ ರವಿ ಬಂಧನವಾಗಿದೆ. ಮೈಸೂರು, ರಾಮನಗರ ಪೊಲೀಸರ ನಾಲ್ಕೈದು ತಂಡಗಳು ಕಾರ್ಯಾಚರಣೆ ನಡೆಸಿದ್ದು ಅವರ ವಿಶೇಷ ಪ್ರಯತ್ನದಿಂದ ಈ ಬಂಧನ ಸಾಧ್ಯವಾಗಿದೆʼʼ ಎಂದು ಹೇಳಿದರು.
ʻʻಗುಜರಾತ್ ರಾಜ್ಯದಲ್ಲಿ ಸ್ಯಾಂಟ್ರೋ ರವಿ ಬಂಧನವಾಗಿದೆ. ಎಲ್ಲಾ ಪ್ರೊಸೀಜರ್ ಮುಗಿಸಿಕೊಂಡು ಆತನನ್ನು ಬೆಂಗಳೂರಿಗೆ ಕರೆತರಲಾಗುವುದು. ಸ್ಯಾಂಟ್ರೋ ರವಿ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ಮೇಲೆ ಬಹಳ ಟೀಕೆಗಳು ಇದ್ದವು. ಸರ್ಕಾರ ಮೀನ ಮೇಷ ಎಣಿಸುತ್ತಿದೆ, ಸರ್ಕಾರದ ಮೇಲೆ ಒತ್ತಡ ಇದೆ ಎನ್ನುತ್ತಿದ್ದರು. ಆದರೆ, ಸರ್ಕಾರದ ಮೇಲೆ ಯಾವ ಒತ್ತಡವೂ ಇರಲಿಲ್ಲ. ನಾವು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಎಲ್ಲೇ ಇದ್ದರೂ ಹೇಗೇ ಇದ್ದರೂ ಕರೆತಂದು ವಿಚಾರಣೆ ನಡೆಸಬೇಕು ಎಂದು ಹೇಳಿದ್ದೆವು. ಆತ ನಡೆಸಿದ ಕೃತ್ಯಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹೇಳಿದ್ದೆವುʼʼ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʻʻಆತನನ್ನು ಗುಜರಾತ್‌ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ನಂತರ ಆತನನ್ನು ಕರೆತರಲಾಗುವುದುʼʼ ಎಂದು ಹೇಳಿದ ಅವರು, ʻʻಎರಡು ಮೂರು ಕಡೆ ಅಂತಿಮ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದ. ಆದರೆ ಪೊಲೀಸರು ಬಿಡದೆ ಪತ್ತೆ ಹಚ್ಚಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಏನೇ ಇದ್ದರೂ ಅಡಗಿಸಿಡುವುದಿಲ್ಲ. ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಯುತ್ತದೆʼʼ ಎಂದು ಹೇಳಿದರು.
ʻʻಆತ ನಡೆಸಿದ ಎಲ್ಲ ಕೃತ್ಯಕ್ಕೆ ಶಿಕ್ಷೆಯಾಗುತ್ತದೆ. ಯಾವುದೇ ಅಧಿಕಾರಿ, ರಾಜಕಾರಣಿ ಇದ್ದರೂ ಕೂಡ ತನಿಖೆಯಿಂದ ಹೊರಗೆಳೆಯುತ್ತೇವೆ. ಆತನ ಜೊತೆಗೆ ಇರುವವರನ್ನು ಕೂಡ ಬಂಧಿಸಲಾಗುವುದುʼʼ ಎಂದು ಹೇಳಿರುವ ಅವರು, ʻʻಗುರುವಾರ ನಾನು ಕೂಡ ಅಹಮದಾಬಾದ್ ನಲ್ಲಿ ಇದ್ದದ್ದು ಕಾಕತಾಳಿಯವಷ್ಟೇʼʼ ಎಂದರು.
ಮೈಸೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?
ಸ್ಯಾಂಟ್ರೋ ರವಿಯನ್ನು ಅಹಮದಾಬಾದ್‌ನಲ್ಲಿ ಬಂಧಿಸಿದ್ದು, ಅಲ್ಲಿನ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಕೇರಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಗುಜರಾತ್ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇನ್ಸ್‌ಪೆಕ್ಟರ್‌ಗಳಾದ ಅಝರುದ್ದೀನ್, ದಿವಾಕರ್ ಚೇಸ್ ಮಾಡಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಪೊಲೀಸರು ಸುಮಾರು ೧೫೦೦ ಕಿ.ಮೀ. ಬೆನ್ನಟ್ಟಿ ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದರು. ಆತನಿಗೆ ಸಹಾಯ ಮಾಡಿದ ಆರೋಪದಲ್ಲಿ ಮಧುಸೂದನ್ @ ಮಧು, ಸತೀಶ್, ರಾಮ್ @ ರಾಮ್‌ಜೀ ಎಂಬವರನ್ನೂ ಬಂಧಿಸಲಾಗಿದೆ.
ಇದನ್ನೂ ಓದಿ | Santro Ravi Case | ಕುಖ್ಯಾತ ಕ್ರಿಮಿನಲ್ ಸ್ಯಾಂಟ್ರೋ ರವಿ ಬಂಧನ ಖಚಿತಪಡಿಸಿದ ಪೊಲೀಸರು