ಮೈಸೂರು: ವೇಶ್ಯಾವಾಟಿಕೆ ಕಿಂಗ್ಪಿನ್ ಸ್ಯಾಂಟ್ರೋ ರವಿ (Santro Ravi Case) ನಡೆಸುತ್ತಿದ್ದ ದಂಧೆಯ ಆಳ- ಅಗಲದ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಹೋಗುತ್ತಿದೆ. ಮೈಸೂರು, ಬೆಂಗಳೂರು ಮಾತ್ರವಲ್ಲ ಉತ್ತರ ಕರ್ನಾಟಕದ ರಾಜಕಾರಣಿಗಳೊಂದಿಗೂ ಈತನ ನಂಟು ಇರೋದು ಬೆಳಕಿಗೆ ಬಂದಿದೆ. ಈತನ ವರ್ಗಾವಣೆ ದಂಧೆಗೆ ಬೆಂಗಳೂರಿನ ಪ್ರಭಾವಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಬಿ.ಕೃಷ್ಣಪ್ಪ ಶಿಫಾರಸು ಪತ್ರ ಕೊಟ್ಟಿದ್ದಾರೆ. ಇಷ್ಟೆಲ್ಲ ಪ್ರಭಾವ ಹೊಂದಿರುವ ಸ್ಯಾಂಟ್ರೋ ರವಿ, ಯಾರು, ಆತನ ಹಿನ್ನೆಲೆ ಏನು ಅನ್ನೋದನ್ನು ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ವಿಸ್ತಾರ ನ್ಯೂಸ್ಗೆ ವಿವರಿಸಿದ್ದಾರೆ.
ರಾಜ್ಯ ರಾಜಕಾರಣದ ನೈತಿಕತೆಯನ್ನು ಬೆತ್ತಲಾಗಿಸಿರುವ ಸ್ಯಾಂಟ್ರೋ ರವಿ ಕಾರ್ಯವ್ಯಾಪ್ತಿ ದೊಡ್ಡದಿದೆ. ವೇಶ್ಯವಾಟಿಕೆ ಈತನ ಫುಲ್ಟೈಮ್ ಕೆಲಸ. ಬಿಂಕ- ಬಿನ್ನಾಣದ ಯುವತಿಯ ಫೋಟೊಗಳನ್ನು ತೋರಿಸಿ ಬುಕ್ ಮಾಡಿದ ಯುವತಿಯನ್ನು ಹೇಳಿದ ಜಾಗಕ್ಕೆ ಕಳುಹಿಸುತ್ತಿದ್ದ ಈತ, ಈ ವೀಕ್ನೆಸ್ ಅನ್ನೇ ಲಾಭ ಮಾಡಿಕೊಂಡು ನಿಕಟ ಸಂಪರ್ಕ ಸಾಧಿಸಿಕೊಳ್ಳುತ್ತಿದ್ದ.
ಇದಕ್ಕೊಂದು ಸೂಕ್ತ ಉದಾಹರಣೆ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ. ಮೈಸೂರು ಉಸ್ತುವಾರಿ ಕಾರ್ಯದರ್ಶಿ, ಬಿಬಿಎಂಪಿ ಕಮಿಷನರ್, ಸಿಎಂ ಕಾರ್ಯದರ್ಶಿಯಾಗಿದ್ದ ನಿವೃತ್ತ ಅಧಿಕಾರಿಗೆ ಸ್ಯಾಂಟ್ರೋ ರವಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿನ್ನದ ಫೋಟೊ ಗಿಫ್ಟ್ ಎನ್ನಲಾಗಿದೆ. ಸ್ವಂತ ಪತ್ನಿಯನ್ನೇ ಲಕ್ಷ್ಮಿ ನಾರಾಯಣ್ ಜತೆ ಮಲಗುವಂತೆ ಪೀಡಿಸಿದ್ದಾನೆ.
ನಿಜ ಅರ್ಥದಲ್ಲಿ ಸ್ಯಾಂಟ್ರೋ ರವಿ ಜಾತ್ಯತೀತ, ಪಕ್ಷಾತೀತ ಪ್ರಭಾವಿ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೀಗೆ ಎಲ್ಲ ಪಕ್ಷಗಳ ಪ್ರಮುಖ ನಾಯಕರೊಂದಿಗೂ ಈತನಿಗೆ ಸಂಪರ್ಕವಿದೆ ಅನ್ನೋದಕ್ಕೆ ಫೋಟೊ, ವಿಡಿಯೋ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಈ ಸಂಪರ್ಕವನ್ನೇ ಬಳಸಿಕೊಂಡು ಸ್ಯಾಂಟ್ರೋ ರವಿ ದೊಡ್ಡಮಟ್ಟದಲ್ಲಿ ವರ್ಗಾವಣೆ ದಂಧೆಯನ್ನೂ ನಡೆಸಿದ್ದಾನೆ. ಬೆಂಗಳೂರಿನ ಶಾಸಕರಾದ ಎಸ್.ಆರ್.ವಿಶ್ವನಾಥ್, ಬಿ.ಕೃಷ್ಣಪ್ಪ ಈತನ ಆಣತಿಯಂತೆ ಶಿಫಾರಸು ಪತ್ರ ನೀಡಿದ್ದಾರೆ. ಸರ್ಕಾರದ ಅಧಿಕೃತ ವರ್ಗಾವಣೆ ಪತ್ರವನ್ನೇ ಮಾರ್ಕ್ ಮಾಡಿ ʻದಿಸ್ ಇಸ್ ಮೈ ವರ್ಕ್ʼ ಅಂತ ಸ್ಯಾಂಟ್ರೋ ರವಿ ಸ್ಟೇಟಸ್ ಹಾಕಿಕೊಂಡಿರುವ ದಾಖಲೆಗಳು ವಿಸ್ತಾರ ನ್ಯೂಸ್ಗೆ ಲಭ್ಯವಾಗಿವೆ.
ಇನ್ನು ಸ್ಯಾಂಟ್ರೋ ರವಿ ಕಾರ್ಯವ್ಯಾಪ್ತಿ ಮೈಸೂರು- ಬೆಂಗಳೂರಿಗೆ ಸೀಮಿತವಾಗಿಲ್ಲ. ಯಾದಗಿರಿ- ರಾಯಚೂರು ಸಂಸದ ರಾಜಾ ಅರಮೇಶ್ವರ ನಾಯಕ್ ಕೂಡ ಸ್ಯಾಂಟ್ರೋ ರವಿಗೆ ಗೊತ್ತು. ಸ್ಯಾಂಟ್ರೋ ರವಿ ಅದೆಷ್ಟು ಶ್ರೀಮಂತ ಅಂದರೆ, ತನ್ನ ವೇಶ್ಯಾವಾಟಿಕೆ ದಂಧೆಗೆ ಐಷಾರಾಮಿ ಬಂಗಲೆಗಳನ್ನೇ ಬಾಡಿಗೆಗೆ ಪಡೆದುಕೊಳ್ಳುತ್ತಿದ್ದ. ವೇಶ್ಯವಾಟಿಕೆಯಲ್ಲಿ ತೊಡಗಿಸಿದ್ದ ಯುವತಿಯೊಬ್ಬಳಿಗೆ ಬರೋಬ್ಬರಿ 1.83 ಲಕ್ಷ ರೂ. ಮೌಲ್ಯದ ರ‍್ಯಾಡೋ ವಾಚ್ ಗಿಫ್ಟ್ ಕೊಟ್ಟಿದ್ದಾನೆ.
ಹಾಗಾದ್ರೆ, ಯಾರು ಈ ಸ್ಯಾಂಟ್ರೋ ರವಿ, ಈತನ ಹಿನ್ನೆಲೆ ಏನು? ಮಂಡ್ಯದಲ್ಲಿ ಹುಟ್ಟಿ, ಮೈಸೂರಿನಲ್ಲಿ ಒದೆ ತಿಂದು, ಬೆಂಗಳೂರಿಗೆ ಹೋದ ಈತ ಕೋಟ್ಯಾಧಿಪತಿಯಾಗಿದ್ದು ಹೇಗೆ ಅನ್ನೋದನ್ನು ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ವಿಸ್ತಾರ ನ್ಯೂಸ್ಗೆ ವಿವರಿಸಿದ್ದಾರೆ.
ಸ್ಕೂಟರ್, ಬೈಕ್ ಕದ್ದು ಜೈಲು ಸೇರಿದ್ದ ಕೆ.ಎಸ್.ಮಂಜುನಾಥ್, ಜೈಲಿನಲ್ಲಿ ಕ್ರಿಮಿನಲ್ ಕೃತ್ಯಗಳ ಆಳ-ಅಗಲ ಅರ್ಥ ಮಾಡಿಕೊಂಡಿದ್ದ. ಜೈಲಿನಿಂದ ಹೊರಗೆ ಬಂದ ಮೇಲೆ ವೇಶ್ಯವಾಟಿಕೆಯನ್ನೇ ಫುಲ್ಟೈಮ್ ಕೆಲಸ ಮಾಡಿಕೊಂಡ. 2004-05ರಲ್ಲೇ ದಿನಕ್ಕೆ 2 ಲಕ್ಷ ರೂ. ಸಂಪಾದಿಸುತ್ತಿದ್ದ ಆಸಾಮಿ, ಒಂದು ಲಕ್ಷ ರೂ.ಗಳನ್ನು ಸಹಕರಿಸಿದ ಅಧಿಕಾರಿಗಳಿಗೆ ಭಕ್ಷೀಸು ನೀಡುತ್ತಿದ್ದ.
ಈಗ ಸ್ಯಾಂಟ್ರೋ ರವಿ ಮೇಲೆ ಅತ್ಯಾಚಾರ, ವಂಚನೆ, ಜಾತಿ ನಿಂದನೆ ಕೇಸ್ ದಾಖಲಾಗಿದೆ. ಈ ಕೇಸ್ಗೆ ಸಂಬಂಧಪಟ್ಟ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವ ಸಲುವಾಗಿ ದೂರುದಾರ ಸಂತ್ರಸ್ತೆಯನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಇದೊಂದೇ ಪ್ರಕರಣಕ್ಕೆ ತನಿಖೆಯನ್ನು ಸೀಮಿತಗೊಳಿಸಬಾರದು. ಸ್ಯಾಂಟ್ರೋ ರವಿಯ ಪೂರ್ವಾಪರವನ್ನೆಲ್ಲ ಸಮಗ್ರವಾಗಿ ತನಿಖೆ ನಡೆಸಿದ್ರೆ ಇನ್ನಷ್ಟು ಜನಪ್ರತಿನಿಧಿಗಳು, ಅಧಿಕಾರಿಗಳು ಬಯಲಾಗೋದು ಖಚಿತ ಎನ್ನುವುದು ಸಾರ್ವಜನಿಕರ ಆಗ್ರಹ.
ಇದನ್ನೂ ಓದಿ | Santro Ravi Case : ಗೃಹ ಸಚಿವರ ಮನೆಯಲ್ಲಿ 15 ಲಕ್ಷ ರೂ. ಎಣಿಸಿದ ಸ್ಯಾಂಟ್ರೋ ರವಿ; ವಿಡಿಯೊ ಮಾಡಿದವರ ಬಗ್ಗೆ ತನಿಖೆಯಾಗಲಿ: ಎಚ್‌ಡಿಕೆ