ಮೈಸೂರು: ದಲಿತ ಮಹಿಳೆಯ ಮೇಲೆ ಅತ್ಯಾಚಾರ, ವಂಚನೆಯೂ ಸೇರಿದಂತೆ ಕುಖ್ಯಾತ ಕ್ರಿಮಿನಲ್ ಸ್ಯಾಂಟ್ರೋ ರವಿ (Santro Ravi Case) ಮೇಲಿನ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸರ್ಕಾರ ಸಿಐಡಿಗೆ ವರ್ಗಾಯಿಸಿದೆ.
ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಕಳೆದ ಗುರುವಾರ ಗುಜರಾತ್‌ನಲ್ಲಿ ಬಂಧಿಸಿದ್ದರು. ಅಲ್ಲಿಂದ ಕರೆತಂದು ಶನಿವಾರ ಮೈಸೂರಿನಲ್ಲಿ ಒಂದು ಹಂತದ ವಿಚಾರಣೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಕೋರ್ಟ್ ಆತನಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಸೋಮವಾರ ಪೊಲೀಸರು ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಇನ್ನಷ್ಟು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಕೋರಿದ್ದರು.
ಆದರೆ, ಕೋರ್ಟ್ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ನಿರಾಕರಿಸಿದ್ದು, ಅರ್ಜಿಯ ವಿಚಾರಣೆಯನ್ನು ಜನವರಿ ೧೮ಕ್ಕೆ ಮುಂದೂಡಿದೆ. ಜ.25ರಂದು ಆರೋಪಿಗಳನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ನ್ಯಾಯಾಧೀಶರಾದ ಗುರುರಾಜ್ ಆದೇಶ ನೀಡಿದರು.
ಸ್ಯಾಂಟ್ರೋ ರವಿ ಪರ ವಕೀಲರು ಹೇಳಿದ್ದೇನು?
ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ವಂಚನೆ ಆರೋಪ ಇದೆ. ಅವರ ವಿರುದ್ಧ ಕೇಳಿಬಂದಿರುವ ವರ್ಗಾವಣೆ ಸೇರಿದಂತೆ ಬೇರಾವುದೇ ಆರೋಪಗಳಿಗೆ ಸಾಕ್ಷ್ಯಾಧಾರ ಇಲ್ಲ. ಸ್ಯಾಂಟ್ರೋ ರವಿಗೆ ಬೆದರಿಕೆಯೂ ಇದೆ. ಹೀಗಾಗಿ ಅವರನ್ನು ತಕ್ಷಣ ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕಾದ ಅನಿವಾರ್ಯತೆ ಇಲ್ಲ ಎಂದು ಸ್ಯಾಂಟ್ರೋ ಪರ ವಕೀಲರು ವಾದಿಸಿದರು. ಇದನ್ನು ಪರಿಗಣಿಸಿ ಕೋರ್ಟ್ ರವಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲು ನಿರಾಕರಿಸಿದರು. ಸ್ಯಾಂಟ್ರೋ ರವಿ ಪರ ವಕೀಲರ ವಾದಕ್ಕೆ ಜ.18ರಂದು ತರಕಾರು ಸಲ್ಲಿಸಲು ಸರ್ಕಾರಿ ವಕೀಲರಿಗೆ ಕೋರ್ಟ್ ಸೂಚನೆ ನೀಡಿತು.
ಸಿಐಡಿಗೆ ಸಮಗ್ರ ಮಾಹಿತಿ
ಈ ನಡುವೆ ಸರ್ಕಾರ ಪ್ರಕರಣದ ತನಿಖೆಯನ್ನು ಸಮಗ್ರವಾಗಿ ಸಿಐಡಿಗೆ ವರ್ಗಾವಣೆ ಮಾಡಿರುವುದರಿಂದ ಮುಂದಿನ ವಿಚಾರಣೆಯನ್ನು ಸಿಐಡಿ ನಡೆಸಲಿದೆ. ಒಮ್ಮೆ ಸಿಐಡಿಗೆ ವಹಿಸಿದ ಮೇಲೆ ಮೈಸೂರು ವಿಜಯನಗರ ಪೊಲೀಸರಿಂದ ತನಿಖೆ ಸಾಧ್ಯವಿಲ್ಲ. ಹೀಗಾಗಿ ಈಗಿರುವ ಎಲ್ಲ ಮಾಹಿತಿಗಳನ್ನು ವಿಜಯ ನಗರ ಪೊಲೀಸರು ಸಿಐಡಿಗೆ ಕೊಡಲಿದ್ದಾರೆ.
ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ ವಿಚಾರಣನ್ನೂ ಪೊಲೀಸರು ಕೋರ್ಟ್ ಗಮನಕ್ಕೆ ತಂದರು. ಮುಂದಿನ ತನಿಖೆಗೆ ಅಗತ್ಯವಿದ್ದರೆ ಇನ್ನು ಸಿಐಡಿ ಪೊಲೀಸರೇ ಸ್ಯಾಂಟ್ರೋ ರವಿಯನ್ನು ವಶಕ್ಕೆ ಪಡೆಯಬೇಕಾಗಿದೆ. ಅದಕ್ಕಾಗಿ ಸಿಐಡಿ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಲಿದೆ.
ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಈಗ ಕೈದಿ ನಂಬರ್ 18894: ಜೈಲರ್ ಮಹೇಶ್ ಬೆಂಗಳೂರಿಗೆ ಶಿಫ್ಟ್