Site icon Vistara News

Santro Ravi case | ಸುಳ್ಳು ಕೇಸು ಹಾಕಿ ಪೊಲೀಸರು, ಅಧಿಕಾರಿಗಳನ್ನು ಕಾಡುತ್ತಿರುವ ಸ್ಯಾಂಟ್ರೋ ರವಿ, ಅದಕ್ಕೇ ಅವರಿಗೆ ಭಯ!

Santro Ravi- Inspector yashwant

ಮೈಸೂರು: ಸ್ಯಾಂಟ್ರೋ ರವಿ (Santro Ravi case) ಪೊಲೀಸರನ್ನು, ಅಧಿಕಾರಿಗಳ ಜತೆ ಗಳಸ್ಯ ಕಂಠಸ್ಯ ಸಂಬಂಧ ಹೊಂದಿದ್ದಾನೆ. ರಾಜಕಾರಣಿಗಳನ್ನು ಕೂಡಾ ತಮ್ಮ ಕೈಯೊಳಗೆ ಇಟ್ಟುಕೊಂಡಿದ್ದಾನೆ ಅಂತೀವಲ್ಲ… ನಿಜವೆಂದರೆ, ಆತ ತನ್ನ ಕುತಂತ್ರಗಳಿಂದಲೇ ಈ ರೀತಿ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಆತ ಅಧಿಕಾರಿಗಳು, ಪೊಲೀಸರು ತಾನು ಹೇಳಿದ ಹಾಗೆ ಕೇಳದೆ ಹೋದರೆ ಅವರಿಗೆ ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಇದೇ ಕಾರಣಕ್ಕಾಗಿ ಅವರೆಲ್ಲ ಅವನನ್ನು ಕಂಡರೆ ಭಯಪಡುತ್ತಿದ್ದರು ಎನ್ನಲಾಗಿದೆ. ರಾಜಕಾರಣಿಗಳ ದೌರ್ಬಲ್ಯಗಳನ್ನು ಕೂಡಾ ಇದೇ ರೀತಿ ಬಳಕೆ ಮಾಡುತ್ತಿದ್ದ ಎನ್ನಲಾಗಿದೆ.

ಹಲವಾರು ಪೊಲೀಸರು ಸ್ಯಾಂಟ್ರೋ ರವಿಯಿಂದ ಕಿರುಕುಳಕ್ಕೆ ಒಳಗಿದ್ದಾರೆ ಎಂದು ತಿಳಿದುಬಂದಿದ್ದು, ಇದೇ ಕಾರಣಕ್ಕ್ಕೆ ಮೈಸೂರಿನ ಪೊಲೀಸರಂತೂ ಅವನ ಸಹವಾಸವೇ ಬೇಡ ಎಂಬ ಪರಿಸ್ಥಿತಿಗೆ ಬಂದಿದ್ದಾರೆ ಎನ್ನಲಾಗಿದೆ.

ಮೈಸೂರಿನ ಕುವೆಂಪುನಗರ ಠಾಣಾ ಪೊಲೀಸರನ್ನು ವಿಪರೀತವಾಗಿ ಕಾಡಿದ್ದ. ಹಿಂದೆ ಇನ್ಸ್‌ಪೆಕ್ಟರ್ ಯಶ್ವಂತ್ ಸೇರಿ ಹಲವರಿಗೆ ಕಿರುಕುಳ ನೀಡಿದ್ದ ಆತ ಸುಳ್ಳು ಕೇಸ್ ದಾಖಲಿಸಿ ಚಿತ್ರಹಿಂಸೆ ನೀಡಿದ್ದ. ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಶ್ರೀನಿವಾಸ್, ಮಹಾದೇವ ಚಿತ್ರಹಿಂಸೆ ಅನುಭವಿಸಿದ್ದರು.

ನಿವೃತ್ತಿ ಅಂಚಿನಲ್ಲಿದ್ದ ಪೇದೆ ಲಕ್ಷ್ಮೀನಾರಾಯಣ್‌ ಅವರ ಮೇಲೆ ದ್ವೇಷ ಸಾಧಿಸಿದ್ದರಿಂದ ಅವರು ಕೊನೆಗೆ ಪೆನ್ಷನ್ ಸಿಗದೆ, ಭತ್ಯೆ ಸಿಗದೆ ಪರದಾಡಿದ್ದರು. ಇನ್ಸ್ ಪೆಕ್ಟರ್ ಯಶ್ವಂತ್ ವಿರುದ್ಧ ದೂರು ದಾಖಲಾಗಿ ನ್ಯಾಯಾಲಯಕ್ಕೆ ಅಲೆದಾಡಿದ್ದರು.

ಮೊದಲ ಹೆಂಡತಿಯನ್ನು ಬಳಸಿ ದೂರು
ಈ ಸ್ಯಾಂಟ್ರೋ ರವಿ ಎಷ್ಟೊಂದು ಖತರ್ನಾಕ್‌ ಎಂದರೆ ಇನ್ಸ್‌ಪೆಕ್ಟರ್‌ ಯಶ್ವಂತ್‌ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲೇ ಕೇಸ್‌ ಹಾಕಿದ್ದ. ಇದಕ್ಕೆ ಆತ ಬಳಸಿಕೊಂಡಿದ್ದು ತನ್ನ ಮೊದಲ ಹೆಂಡತಿಯನ್ನು. ಈ ಪೊಲೀಸರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೆಂಡತಿ ಮೂಲಕ ದೂರು ಕೊಟ್ಟು ಕಾಡಿಸಿದ್ದ. ಅಂತಿಮವಾಗಿ ನ್ಯಾಯಾಲಯದಲ್ಲಿ ಕೇಸ್ ಯಶ್ವಂತ್ ಸೇರಿ ಅಧಿಕಾರಿಗಳ ಪರ ಆಗಿತ್ತು. ಆ ಮೂಲಕ ನಿಷ್ಠಾವಂತ ಪೊಲೀಸ್ ಅಧಿಕಾರಿಗಳಿಗೆ ನ್ಯಾಯ ಸಿಕ್ಕಿತ್ತು. ಆದರೆ ಅವರು ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ. ಆ ಕಾರಣದಿಂದಲೇ ಪೊಲೀಸ್ ಅಧಿಕಾರಿಗಳಿಗೆ ಈತನನ್ನು ಕಂಡರೆ ಭಯ.

ಯಾರನ್ನೂ ಬಿಟ್ಟಿಲ್ಲ ಈ ಸ್ಯಾಂಟ್ರೋ
ಬೆಂಗಳೂರಿನ ಕಬ್ಬನ್ ಪಾರ್ಕ್ ಎಸಿಪಿಗೆ ಆವಾಜ್ ಹಾಕಿದ್ದ ಸ್ಯಾಂಟ್ರೋ, ಇನ್ಸ್‌ಪೆಕ್ಟರ್‌ ಮಲ್ಲೇಶ್‌ಗೂ ಕಿರಿಕಿರಿ ಮಾಡಿದ್ದ. ಗೋಲ್ಡ್ ಮೆಡಲ್‌ ಪಡೆದ ಅಧಿಕಾರಿಯನ್ನೂ ಬಿಡದೆ ಆತ ಕಾಡಿದ್ದ.

ಮಾನವ ಹಕ್ಕು ಉಲ್ಲಂಘನೆ ಅಡಿ ದೂರು ದಾಖಲಿಸುವುದು, ಮೊದಲ ಪತ್ನಿ ಮೂಲಕ ಲೈಂಗಿಕ ದೌರ್ಜನ್ಯ ಸೇರಿ ಬೇರೆ ಬೇರೆ ಪ್ರಕರಣ‌ ದಾಖಲಿಸುವುದು ಆತನ ಚಾಳಿಯಾಗಿತ್ತು.

ಫೋನ್ ನಲ್ಲಿ ಮಾತನಾಡುವ ಸಂದರ್ಭದಲ್ಲಿ ಬೆದರಿಕೆ ಹಾಕಿದ್ರು ಅಂತಾನೂ ದೂರು ದಾಖಲಿಸಿದ್ದ. ಕೆಲವು ಪ್ರಕರಣಗಳಲ್ಲಿ ಕೆಲವು ಅಧಿಕಾರಿಗಳು ಈಗಲೂ ವಿಚಾರಣೆ ಎದುರಿಸುತ್ತಿದ್ದಾರೆ. ಪ್ರಭಾವಿ ರಾಜಕಾರಣಿಗಳು,‌ ಅಧಿಕಾರಿಗಳ ಪರಿಚಯ ಬಳಸಿಕೊಂಡು ಸಿಕ್ಕಾಪಟ್ಟೆ ಕಿರಿಕ್‌ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ | Santro Ravi case | ರಾಜಕಾರಣಿಗಳ ಜತೆ ಸ್ಯಾಂಟ್ರೋ ರವಿ ನಂಟು: 20 ವರ್ಷಗಳ ಇತಿಹಾಸದ ಬಗ್ಗೆ ತನಿಖೆ ಎಂದ ಬೊಮ್ಮಾಯಿ

Exit mobile version