ಮೈಸೂರು: ಕೇವಲ ೧೨ ದಿನಗಳ ಹಿಂದೆ ಹುಲಿಯಂತೆ ಓಡಾಡುತ್ತಿದ್ದ, ಅಧಿಕಾರಿಗಳನ್ನು ಬೆದರಿಸುತ್ತಿದ್ದ, ರಾಜಕಾರಣಿಗಳ ಪಕ್ಕ ಹೋಗಿ ನಿಂತುಕೊಳ್ಳುತ್ತಿದ್ದ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi case) ಪೊಲೀಸರ ಕೈಗೆ ಸಿಗುತ್ತಿದ್ದಂತೆಯೇ ಇಲಿಯಂತಾಗಿದ್ದಾನೆ! ಜತೆಗೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ ಗಂಟೆಗೊಮ್ಮೆ ಇನ್ಸುಲಿನ್ ಕೊಡಬೇಕಾಗಿದೆ.
ಗುರುವಾರ ಅಹಮದಾಬಾದ್‌ನಲ್ಲಿ ಬಂಧಿತನಾದ ಸ್ಯಾಂಟ್ರೋ ರವಿಯನ್ನು ಶನಿವಾರ ಬೆಳಗ್ಗೆ ಮೈಸೂರಿಗೆ ಕರೆತರಲಾಗಿದೆ. ಆತನನ್ನು ವಿಜಯ ನಗರ ಠಾಣೆಯಲ್ಲಿ ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ಸಂಜೆ ಮೈಸೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆತನಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
೨೦೧೯ರಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಮತ್ತು ವಂಚನೆ ಮಾಡಿದ ಆರೋಪದಲ್ಲಿ ಸ್ಯಾಂಟ್ರೋ ರವಿಯ ಬಂಧನವಾಗಿದ್ದು, ಪ್ರಧಾನವಾಗಿ ಈ ವಿಚಾರದಲ್ಲಿ ಪೊಲೀಸರು ಆತನ ವಿಚಾರಣೆ ನಡೆಸಿದರು. ವಿಚಾರಣೆಯ ಸಂದರ್ಭದಲ್ಲಿ ಆತನಿಗೆ ಬೇಕಾದ ಔಷಧಗಳ ವ್ಯವಸ್ಥೆ ಮಾಡಿದರು.
ಶನಿವಾರ ಬೆಳಗ್ಗೆ ಹಾಗೂ ಮಧ್ಯಾಹ್ನದ ಊಟವನ್ನು ಸ್ಯಾಂಟ್ರೋ ರವಿ ಪೊಲೀಸ್ ಠಾಣೆಯಲ್ಲೇ ಮಾಡಿದ್ದಾನೆ. ಬೆಳಗ್ಗೆ ಎರಡು ಇಡ್ಲಿ ಹಾಗೂ ಮಧ್ಯಾಹ್ನ ಒಂದು ಮೊಸರನ್ನು ಮತ್ತು ಬಾಳೆಹಣ್ಣು ತಿಂದಿದ್ದಾನೆ. ಈ ನಡುವೆ ಆತನಿಗೆ ವಿಚಾರಣೆಯ ವೇಳೆ ಪ್ರತಿ ಒಂದು ಗಂಟೆಗೊಮ್ಮೆ ಇನ್ಸುಲಿನ್ ನೀಡಿ ಆತನ ರಕ್ತದ ಸಕ್ಕರೆ ಪ್ರಮಾಣದ ಮೇಲೆ ನಿಗಾ ಇಡಲಾಯಿತು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಸ್ಯಾಂಟ್ರೊ ರವಿ ಜತೆಗೆ ಆತನಿಗೆ ರಕ್ಷಣೆ ನೀಡಿದ ಆರೋಪದಲ್ಲಿ ರಾಮ್ ಜಿ ಮತ್ತು ಶ್ರುತೇಶ್ ಕುಮಾರ್ ಎಂಬವರನ್ನೂ ಬಂಧಿಸಲಾಗಿದ್ದು, ಅವರನ್ನೂ ವಿಚಾರಣೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿಗೆ ನ್ಯಾಯಾಂಗ ಬಂಧನ, ಸೋಮವಾರ ಮತ್ತೆ ಕಸ್ಟಡಿಗೆ ಕೇಳಲಿರುವ ಪೊಲೀಸರು