ಬೆಂಗಳೂರು: ದಲಿತ ಮಹಿಳೆಯ ಅತ್ಯಾಚಾರ ಮತ್ತು ವಂಚನೆ, ಪ್ರಭಾವಿ ರಾಜಕಾರಣಿಗಳ ಜತೆ ನಿಕಟ ಸಂಪರ್ಕ ಹಾಗು ಹುಡುಗಿಯರ ಪೂರೈಕೆಯಂಥ ಗಂಭೀರ ಆರೋಪ ಎದುರಿಸುತ್ತಿರುವ ಮೈಸೂರಿನ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯ (Santro Ravi case) ಈ ದುಸ್ಸಾಹಸಗಳು ಹೊಸತೇನೂ ಅಲ್ಲ. ಆತ ೧೯೯೫ರಿಂದಲೂ ಇಂಥಹುದೇ ಕೃತ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾನೆ ಎಂದು ತಿಳಿದುಬಂದಿದೆ. ೧೯೯೫ರಲ್ಲೇ ಮೈಸೂರಿನ ಕಾಲೇಜೊಂದರ ವಿದ್ಯಾರ್ಥಿನಿಯರನ್ನು ಅಪಹರಿಸಿ ಅತ್ಯಾಚಾರ ಮಾಡಿದ ಗಂಭೀರ ಆರೋಪವೂ ಆತನ ಮೇಲಿದೆ. ಉಳಿದಂತೆ ವೇಶ್ಯಾವಾಟಿಕೆ, ಉನ್ನತ ನಾಯಕರಿಗೆ ಪಿಂಪ್ ಆಗಿ ಸಹಕರಿಸುವ ಹಲವು ಧೂರ್ತತನಗಳು ಈತನ ದಾಖಲೆಯಲ್ಲಿವೆ.
ಪ್ರವೀಣ್ ಸೂದ್ ಬಂಧನಕ್ಕೆ ಅದೇಶ ಮಾಡಿದ್ದರು!
ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯ ಖತರ್ನಾಕ್ ಕೃತ್ಯಗಳ ಮೇಲೆ ಬಹುಹಿಂದೆಯೇ ಪೊಲೀಸರ ಕಣ್ಣು ಬಿದ್ದಿತ್ತು. 2005ರಲ್ಲೆ ಆತನ ಸಮಾಜಘಾತುಕ ಚಟುವಟಿಕೆಗಳ ವಿರುದ್ಧ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಅಂದು ಮೈಸೂರು ನಗರ ಪೊಲೀಸ್ ಕಮಿಷನರ್ ಆಗಿರುವ ಈಗಿನ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರೇ ಈತನ ಬಂಧನಕ್ಕೆ ಆದೇಶ ನೀಡಿದ್ದರು.
ದೊಡ್ಡ ದೊಡ್ಡ ಬಂಗಲೆಗಳಲ್ಲಿ ವೇಶ್ಯಾವಾಟಿಕೆ
ಆ ಕಾಲಕ್ಕೆ ಸ್ಯಾಂಟ್ರೋ ರವಿಯ ಹಲವಾರು ಕೃತ್ಯಗಳು ಪೊಲೀಸರ ನಿದ್ದೆಗೆಡಿಸಿತ್ತು. ಆತ ದೊಡ್ಡ ದೊಡ್ಡ ಬಂಗಲೆಗಳನ್ನು ಬಾಡಿಗೆ ಪಡೆದು ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ. ತನ್ನದೇ ಗ್ಯಾಂಗ್ ಕಟ್ಟಿಕೊಂಡು ಬೈಕ್ ಕಳ್ಳತನ, ವೇಶ್ಯಾವಾಟಿಕೆ, ಗಾಂಜಾ ದಂಧೆಗಳಲ್ಲಿ ತೊಡಗಿದ್ದ ಎಂಬ ಆರೋಪಗಳಿದ್ದವು.
ವಿದ್ಯಾರ್ಥಿನಿಯ ಅಪಹರಣ, ಅತ್ಯಾಚಾರ
1995ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದ ಒಬ್ಬ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿದ್ದ ರವಿ ಮತ್ತು ಗ್ಯಾಂಗ್ ಬಳಿಕ ಆಕೆಯನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಬಲವಂತವಾಗಿ ಮದುವೆಯಾಗಿ ಅತ್ಯಾತಾರವೆಸಗಿದ್ದ ಎಂದು ದೂರಲಾಗಿತ್ತು.
ಮೈಸೂರಿನಲ್ಲಿ ಆರಂಭಿಸಿದ್ದ ದಂಧೆಗಳನ್ನು ಬೆಂಗಳೂರಿಗೆ ವಿಸ್ತರಿಸಿದ್ದ ಆತ ಜಯನಗರ, ಜೆ.ಪಿ. ನಗರ, ಮೈಕೋ ಲೇಔಟ್ ಹಾಗೂ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಕಷ್ಟು ಕುಕೃತ್ಯಗಳನ್ನು ನಡೆಸಿದ್ದ. ಮಾನವ ಕಳ್ಳಸಾಗಣೆಕೆ ಮೂಲಕ ಹೆಣ್ಣು ಮಕ್ಕಳನ್ನು ಕರೆ ತಂದು ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಆರೋಪವೂ ಆತನ ಮೇಲಿತ್ತು.
ನಕಲಿ ವಿಳಾಸ ನೀಡಿ ಮನೆಗಳನ್ನು ಬಾಡಿಗೆ ಪಡೆದು ಅಲ್ಲಿ ದಂಧೆ ನಡೆಸುತ್ತಿದ್ದ ಆತನ ಅಡ್ಡೆಗಳ ಮೇಲೆ ಬೆಂಗಳೂರು ಪೊಲೀಸರು ಲೆಕ್ಕವಿಲ್ಲದಷ್ಟು ಸಲ ದಾಳಿ ಮಾಡಿದ್ದರು. ಬಾಡಿಗೆ ಕರಾರಿನಲ್ಲಿ ಯೋಗಾನಂದಮೂರ್ತಿ ಎಂದು ಹೆಸರಿಟ್ಟುಕೊಂಡಿದ್ದ ಆತ ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರು ಇಟ್ಟುಕೊಂಡಿದ್ದ.
ವಾಹನ ಕಳವು ಜಾಲದಲ್ಲೂ ಸಕ್ರಿಯ
ಕೇವಲ ಹೆಣ್ಣು ಮಕ್ಕಳ ವ್ಯಾಪಾರವಲ್ಲ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಕಾರು ಕಳವು, ಬೈಕ್ ಕಳವು ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದ ಈ ಸ್ಯಾಂಟ್ರೋ ರವಿ. ಮಂಡಿ ಪೊಲೀಸ್ ಠಾಣೆಯಲ್ಲಿ 1997 ರಲ್ಲಿ ಬೈಕ್ ಕಳವು ಕೇಸ್ ದಾಖಲಾಗಿತ್ತು. ಹೀಗೆ ಸರಿ ಸುಮಾರು ೨೫ ವರ್ಷಗಳಿಂದ ಅಕ್ರಮ ದಂಧೆಗಳನ್ನೆಸಗಿ ದೊಡ್ಡದಾಗಿ ಬೆಳೆದಿದ್ದ ಸ್ಯಾಂಟ್ರೋ ರವಿ ಲೇಡಿಸ್ ಸರ್ವಿಸ್ ಬಾರ್ ಗಳಿಗೂ ಹುಡುಗಿಯರ ಸಪ್ಲೈ ಮಾಡುತ್ತಿದ್ದ.
ಹೀಗೆ ಸಾಲು ಸಾಲು ಕೇಸ್ ಗಳು ದಾಖಲಾಗಿದ್ದರೂ ಯಾವುದಕ್ಕೂ ಅಂಜದೆ ತನ್ನ ಕೃತ್ಯಗಳನ್ನು ಮುಂದುವರಿಸಿದ್ದ. ಕೋರ್ಟ್ ನಲ್ಲಿರೋ ಕೇಸ್ ಗಳ ವಿಚಾರಣೆಗೂ ಹಾಜರಾಗದೇ ತಲಮರೆಸಿಕೊಳ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Santro Ravi case | ರಾಜಕಾರಣಿಗಳ ಜತೆ ಸ್ಯಾಂಟ್ರೋ ರವಿ ನಂಟು: 20 ವರ್ಷಗಳ ಇತಿಹಾಸದ ಬಗ್ಗೆ ತನಿಖೆ ಎಂದ ಬೊಮ್ಮಾಯಿ