Site icon Vistara News

Santro Ravi case | ವಿಗ್‌ ತೆಗೆದು, ಮೀಸೆ ಬೋಳಿಸಿ ತಲೆಮರೆಸಿಕೊಂಡರೂ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲಾಗಲಿಲ್ಲ ಸ್ಯಾಂಟ್ರೋಗೆ!

ಅಹಮದಾಬಾದ್‌ನಲ್ಲಿ ಸ್ಯಾಂಟ್ರೊ ರವಿ ಅರೆಸ್ಟ್‌

ಬೆಂಗಳೂರು: ಕೆ.ಎಸ್.‌ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಎಂದ ಕೂಡಲೇ ಎಲ್ಲರಿಗೂ ನೆನಪಾಗುತ್ತಿದ್ದದ್ದು ಸ್ಟೈಲಿಷ್‌ ಮ್ಯಾನ್‌. ಚೆನ್ನಾಗಿ ಬಾಚಿದ ಕೂದಲು, ಕಣ್ಣಿಗೊಂದು ಕನ್ನಡಕ, ಚೆಂದದ ಮೀಸೆ. ಆದರೆ, ಗುಜರಾತ್‌ನಲ್ಲಿ ಬುಧವಾರ ಪತ್ತೆಯಾದ ಸ್ಯಾಂಟ್ರೋ ರವಿಯನ್ನು ನೋಡಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದರು. ಅವನ ತಲೆಯಲ್ಲಿ ಕೂದಲು ಇರಲಿಲ್ಲ, ಮುಖದಲ್ಲಿ ಮೀಸೆ ಇರಲಿಲ್ಲ. ಇಲ್ಲಿ ಓಡಾಡಿಕೊಂಡಿದ್ದ, ಫೋಟೊಗಳಲ್ಲಿ ಕಂಡಿದ್ದ ಸ್ಯಾಂಟ್ರೋನೇ ಬೇರೆ, ಇವನೇ ಬೇರೆ ಎನ್ನುವಷ್ಟು ರೂಪಾಂತರ.

ಸ್ಯಾಂಟ್ರೋ ರವಿ ವೇಶ್ಯಾವಾಟಿಕೆಯ ಕಿಂಗ್‌ ಪಿನ್‌ ಆಗಿ ಕೆಲಸ ಮಾಡುತ್ತಿರುವುದು ಹೊಸತೇನಲ್ಲ. ಅದಕ್ಕೆ ಕಾಲು ಶತಮಾನದ ಇತಿಹಾಸವೇ ಇದೆ. ತನ್ನ ೨೪-೨೫ನೇ ವಯಸ್ಸಿಗೇ ಅವನು ಹೈಟೆಕ್‌ ವೇಶ್ಯಾವಾಟಿಕೆಯ ಸರದಾರನಾಗಿದ್ದ. ಮುಂದೆ ಅದರ ಸಂಪರ್ಕಗಳು, ಹುಡುಗಿಯರನ್ನು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಪೂರೈಸುತ್ತಾ ಅವರ ದೌರ್ಬಲ್ಯಗಳನ್ನು ನಗದೀಕರಿಸಿಕೊಂಡು ವರ್ಗಾವಣೆ ದಂಧೆಯ ಕಿಂಗ್‌ ಪಿನ್‌ ಆದವನು ಆತ.

ಹೇಗಿದ್ದ? ಹೇಗಾದ ನೋಡಿ

ಆದರೆ, ಕಳೆದ ಕೆಲವು ವರ್ಷಗಳಲ್ಲಿ ಯಾವುದೇ ಸದ್ದಿಲ್ಲದೆ ತನ್ನ ಕೆಲಸ ಮಾಡುತ್ತಿದ್ದ ಆತ ಮತ್ತೆ ಸಾರ್ವಜನಿಕವಾಗಿ ಸುದ್ದಿಯಾದದ್ದು ಎರಡನೇ ಹೆಂಡತಿ, ದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆಯ ದೂರು ದಾಖಲಿಸಿದಾಗ. ಆಗ ಆತನ ವಿಶ್ವರೂಪ ಪ್ರಕಟಗೊಂಡು ಈಗ ಬಂಧನದ ಹಂತಕ್ಕೆ ಬಂದಿದೆ.

ನಿಜವೆಂದರೆ ಕಳೆದ ೧೧ ದಿನಗಳಿಂದ ತಲೆಮರೆಸಿಕೊಂಡಿರುವ ಈತ ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಲೆ ಬೋಳಿಸಿಕೊಂಡಿದ್ದ ಎಂದು ತಿಳಿದುಕೊಳ್ಳಬೇಡಿ. ನಿಜವೆಂದರೆ ಆತನಿಗೆ ಇಪ್ಪತ್ತು ವರ್ಷಗಳ ಹಿಂದೆಯೇ ಬೋಳು ತಲೆ ಇತ್ತು! ಆತ ಬಳಸುತ್ತಿದ್ದುದು ವಿಗ್‌.

ಪಿಂಪ್‌ ಆಗಿದ್ದ ಕಾಲದಲ್ಲಿ ಬಂಧಿತನಾಗಿದ್ದ ಅವನ ಚಿತ್ರಗಳಲ್ಲಿ ಬೋಳು ತಲೆಯೇ ಕಾಣಿಸುತ್ತದೆ. ಆದರೆ, ರಾಜಕಾರಣಿಗಳ ಜತೆ ಡೀಲ್‌ ಮಾಡಲು ಶುರು ಮಾಡಿದ ನಂತರ ವಿಗ್‌ ಹಾಕಿಕೊಂಡು ನ್ಯೂ ಲುಕ್‌ ಪಡೆದುಕೊಂಡ. ಜತೆಗೆ ಹುಡುಗಿಯರ ನಡುವೆಯೂ ಚರಿಷ್ಮಾ ಹೆಚ್ಚಿಸಿಕೊಂಡ.

ಈಗ ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವಿಗ್‌ ಕಳಚಿಟ್ಟು, ಮೀಸೆ ಬೋಳಿಸಿಕೊಂಡು ತಲೆ ಮರೆಸಿಕೊಂಡಿದ್ದ. ಆದರೆ, ಪೊಲೀಸರು ಅದಕ್ಕಿಂತಲೂ ಹೆಚ್ಚು ಚಾಣಾಕ್ಷರು. ಮೊದಲೇ ಆತ ಬಳಸುತ್ತಿದ್ದುದು ವಿಗ್‌ ಎನ್ನುವುದು ಅವರಿಗೆ ಗೊತ್ತಿತ್ತು!

ಈ ನಡುವೆ, ಆತ ಮನೆ ಬದಲಿಸಿದ್ದ, ಮೊಬೈಲ್‌ ಬದಲಿಸಿದ್ದ. ಆದರೂ ಪಟ್ಟು ಬಿಡದೆ ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ. ವೇಷ ಬದಲಿಸಿದರೂ ಆತನಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ.

ಇದನ್ನೂ ಓದಿ | Santro Ravi Case | ಸ್ಯಾಂಟ್ರೊ ರವಿ ಕೈಯಲ್ಲಿದೆ ಹಲವು ಸಚಿವರು, ಅಧಿಕಾರಿಗಳು, ರಾಜಕೀಯ ಮುಖಂಡರ ಭವಿಷ್ಯ!

Exit mobile version