ಮೈಸೂರು: ಅಂತೂ ಇಂತೂ ಹರಸಾಹಸ ಪಟ್ಟು ಸ್ಯಾಂಟ್ರೋ ರವಿಯನ್ನು (Santro Ravi case) ಬಂಧಿಸಿದ ಪೊಲೀಸರಿಗೆ ಹೊಸ ತಲೆ ನೋವು ಶುರುವಾಗಿದೆ. ಒಂದು ಕಡೆ ಆಡಿಯೋ, ವಿಡಿಯೊ, ರಾಜಕಾರಣಿಗಳ ಸಖ್ಯವನ್ನು ಬಾಯಿಬಿಡಿಸುವ ಟಾಸ್ಕ್. ಆದರೆ ಮತ್ತೊಂದು ಕಡೆ ಆನಾರೋಗ್ಯದಿಂದ ಬಳಲುತ್ತಿರುವ ಸ್ಯಾಂಟ್ರೋ ರವಿಯ ಬಾಯಿಂದ ಸತ್ಯವನ್ನು ಹೊರತರೋದು ತಲೆನೋವಾಗಿ ಪರಿಣಮಿಸಿದೆ. ಈ ನಡುವೆ, ಅಹಮದಾಬಾದ್‌ನಲ್ಲಿ ಬಂಧಿಸಲ್ಪಟ್ಟ ಸ್ಯಾಂಟ್ರೋ ರವಿಯನ್ನು ಶನಿವಾರ ಮುಂಜಾನೆ ಮೈಸೂರಿಗೆ ಕರೆ ತರಲಾಗಿದ್ದು, ಬಳಿಕ ಕೆಲ ಹೊತ್ತು ವಿಚಾರಣೆ ನಡೆಸಿದ ಬಳಿಕ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಕೋರ್ಟ್ ಆತನನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕೆಂಬ ವಿಚಾರಕ್ಕೆ ಸ್ಪಂದಿಸಿದ ಕೋರ್ಟ್ ಸೋಮವಾರ ಮತ್ತೆ ಅರ್ಜಿ ಸಲ್ಲಿಸಲು ಸೂಚಿಸಿದೆ.
ವಿಜಯನಗರ ಪೊಲೀಸ್ ಠಾಣೆಗೆ ಕರೆತರಲಾದ ಸ್ಯಾಂಟ್ರೋ ರವಿಯನ್ನು ಎಡಿಜಿಪಿ ಅಲೋಕ್ ಕುಮಾರ್, ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಡಿಸಿಪಿ ಮುತ್ತುರಾಜ್ ಸೇರಿ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದರು. ಇದೇ ವೇಳೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಸದ್ಯ ಮಹಿಳೆ ದಾಖಲಿಸಿರುವ ಪ್ರಕರಣದ ಸಂಬಂದ ತನಿಖೆ ನಡೆಸುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ತದ ನಂತರ ಉಳಿದ ಮಾಹಿತಿಯನ್ನ ಕಲೆ ಹಾಕಲಾಗುವುದು ಎಂದು ಹೇಳಿದರು.
ಸ್ಯಾಂಟ್ರೋ ರವಿಯನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ನ್ಯಾಯಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಮಧ್ಯ ಪೊಲೀಸರು ಹೆಚ್ಚಿನ ತನಿಖೆಗಾಗಿ ಸ್ಯಾಂಟ್ರೋ ರವಿಯನ್ನು ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸೋಮವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಸದ್ಯ ರಾಜ್ಯಾದ್ಯಂತ ಸಂಚಲನ ಮೂಡಿಸಿದ ಸ್ಯಾಂಟ್ರೋ ರವಿ ಜೈಲು ಸೇರಿದ್ದು ಸೋಮವಾರ ಮತ್ತೆ ಆತನನ್ನ ವಶಕ್ಕೆ ಪಡೆಯಲು ಪ್ರಯತ್ನ ನಡೆಸಲಿದ್ದಾರೆ.
ಸದ್ಯ ಸ್ಯಾಂಟ್ರೋ ರವಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಸೋಮವಾರ ಪೊಲೀಸರ ಕಸ್ಟಡಿ ಬಂದ ನಂತರ ಅದ ಯಾವ ಸ್ಫೋಟಕ ಸತ್ಯಗಳನ್ನು ಬಿಚ್ಚಿಡುತ್ತಾನೋ, ಯಾವ ಯಾವ ಗಣ್ಯರ ರಹಸ್ಯವನ್ನ ಬಯಲು ಮಾಡುತ್ತಾನೋ ಕಾದು ನೋಡಬೇಕಿದೆ.
ಇದನ್ನೂ ಓದಿ | Santro Ravi case : ಕೆಲಸಕ್ಕೆ ಸೇರಿದ ಎರಡೇ ದಿನಕ್ಕೆ ಅತ್ಯಾಚಾರ; ಸ್ಯಾಂಟ್ರೋ ರವಿ 2ನೇ ಪತ್ನಿಯ Exclusive ಸಂದರ್ಶನ