Site icon Vistara News

Santro Ravi case | ನಿವೃತ್ತ ಐಎಎಸ್‌ ಅಧಿಕಾರಿಗಳ ಬಳಿಗೂ ಕಳಿಸ್ತಿದ್ದ: ಸಂತ್ರಸ್ತ ಮಹಿಳೆಯಿಂದ ಗಂಭೀರ ಆರೋಪ

santro ravi

ಮೈಸೂರು: ಕೆಲಸ ಕೇಳಿಕೊಂಡು ಬಂದ ಯುವತಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಮದುವೆಯಾಗಿ ಬೇರೆಯವರಿಗೆ ಸಪ್ಲೈ ಮಾಡಲು ಮುಂದಾದ ಆರೋಪ ಎದುರಿಸುತ್ತಿರುವ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿಯ (Santro Ravi case) ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಮೈಸೂರು ಪೊಲೀಸ್ ಕಮೀಷನರ್ ರಮೇಶ್ ಬಾನೋತ್ ಹೇಳಿದ್ದಾರೆ.

ಸಂತ್ರಸ್ತ ಮಹಿಳೆ ಸ್ಯಾಂಟ್ರೋ ರವಿ ವಿರುದ್ಧ ಮಾಡಿರುವ ಒಂದೊಂದು ಆರೋಪಗಳೂ ಭಯಾನಕವಾಗಿದೆ. ರವಿ ತಾನು ಕಟ್ಟಿಕೊಂಡ ಹೆಂಡತಿಯನ್ನೇ ಐಎಎಸ್‌ ಅಧಿಕಾರಿಗಳ ಬಳಿಗೆ ಹೋಗುವಂತೆ ಒತ್ತಾಯಿಸುತ್ತಿದ್ದ ಎಂಬ ಗಂಭೀರ ಆರೋಪವಿದೆ. ಅದಲ್ಲದೆ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ ಎಂಬವರ ಹೆಸರನ್ನು ಆಕೆ ನೇರವಾಗಿ ದೂರಿನಲ್ಲೇ ದಾಖಲಿಸಿದ್ದಾಳೆ.

ಸ್ಯಾಂಟ್ರೊ ರವಿ ಹಲವು ದಶಕಗಳಿಂದಲೇ ಹುಡುಗಿಯರ ಪೂರೈಕೆ ವಿಚಾರದಲ್ಲಿ ಪಿಂಪ್‌ ಎಂದು ಹೆಸರಾಗಿದ್ದವನು. ಆತನ ಕೃತ್ಯಗಳ ಬಗ್ಗೆ ರಾಜಕೀಯ, ಅಧಿಕಾರಿ ವಲಯದಲ್ಲಿ ಬಣ್ಣ ಬಣ್ಣದ ಕಥೆಗಳಿವೆ. ರಾಜಕಾರಣಗಳಿಗೆ ತೀರಾ ಹತ್ತಿರದವನಾಗಿರುವ ಆತ ವರ್ಗಾವಣೆ ದಂಧೆಯಲ್ಲೂ ತೊಡಗಿಸಿಕೊಂಡಿರುವುದು ಆತನ ಕೆಲವು ಆಡಿಯೊಗಳಿಂದ ಬಯಲಾಗಿದೆ. ಈ ನಡುವೆ. ಜೆಡಿಎಸ್‌ – ಕಾಂಗ್ರೆಸ್‌ ಸರಕಾರವನ್ನು ಉರುಳಿಸಲು ಮುಂಬಯಿಗೆ ತೆರಳಿದ್ದ ೧೭ ಶಾಸಕರನ್ನು ರಂಜಿಸಲು ಸ್ಯಾಂಟ್ರೋ ರವಿ ೧೨ ಹುಡುಗಿಯರನ್ನು ಕಳುಹಿಸಿಕೊಟ್ಟಿದ್ದ ಎಂಬ ಗಂಭೀರ ಆರೋಪವನ್ನು ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದು ಚರ್ಚೆಗೆ ಇನ್ನಷ್ಟು ಪುಷ್ಟಿ ನೀಡಿದೆ.

ಸಂತ್ರಸ್ತ ಮಹಿಳೆ ಮಾಡಿದ ಆರೋಪಗಳೇನು?
-ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ ೨೦೧೯ರಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗಲೇ ಅತ್ಯಾಚಾರ ಮಾಡಿ ನಂತರ ನನ್ನ ಮದುವೆಯಾದ.
– ಮದುವೆಯಾದ ನಂತರ ದೈಹಿಕ ಕಿರುಕುಳ ಹೆಚ್ಚಾಯಿತು. ಆ ನಂತರ ನಿವೃತ್ತ ಐಎಎಸ್ ಅಧಿಕಾರಿಗಳ ನಂಬರ್ ಕೊಟ್ಟು ಸಹಕರಿಸುವಂತೆ ಹೇಳುತ್ತಿದ್ದ. ಅವರೊಂದಿಗೆ ನೀನು ಸಹಕರಿಸು, ನನಗೆ ದೊಡ್ಡ ಮೊತ್ತ ಸಿಗುತ್ತೆ ಅಂತ ಸ್ಯಾಂಟ್ರೋ ರವಿ ಹೇಳಿದ್ದ.
– ಮದುವೆಯಾದ ದಿನದಿಂದ ಇಲ್ಲಿವರೆಗೂ ಸಾಕಷ್ಟು ಕಷ್ಟು ಕೊಟ್ಟಿದ್ದಾನೆ. ಬೇರೆವರ ಜತೆ ಮಲಗುವಂತೆ ಸ್ಯಾಂಟ್ರೋ ರವಿ ಒತ್ತಾಯಿಸುತ್ತಿದ್ದ.
– ನಾನು ಬೇರೆಯವರ ಜತೆ ಸಹಕರಿಸಲು ನಿರಾಕರಿಸುತ್ತಿದ್ದೆ. ಆಗ ಇಲ್ಲದ ಕೇಸ್‌ ಹಾಕಿ ಜೈಲಿಗೂ ಕಳುಹಿಸಿದ್ದ. ಕೊನೆಗೆ ಸಹಿಸಲಾರದೆ ನಾನು ಆತನಿಂದ ಹೊರಗೆ ಬಂದೆ.
– ಆತ ಈಗಾಗಲೇ ಮದುವೆಯಾಗಿದ್ದ ಎನ್ನುವ ವಿಚಾರ ನವೆಂಬರ್ ತಿಂಗಳಲ್ಲಿ ಗೊತ್ತಾಯಿತು.
– ಹಿರಿಯ ಅಧಿಕಾರಿಗಳು, ಐಪಿಎಸ್, ಐಎಎಸ್ ಅಧಿಕಾರಿಗಳ ಜತೆ ನಿರಂತರ ಸಂಕರ್ಪ ಹೊಂದಿದ್ದ. ಹಲವು ರಾಜಕಾರಣಿಗಳ ಜತೆ ರವಿಗೆ ಸಂಪರ್ಕ ಇದೆ. ವರ್ಗಾವಣೆ ಮಾಡಿಸುವ ದಂಧೆಯಿಂದ ಸಾಕಷ್ಟು ಹಣ ಸಂಪಾದಿಸಿದ್ದಾನೆ.

ವಿಚಾರಣೆ ಆರಂಭವಾಗಿದೆ ಎನ್ನುತ್ತಿರುವ ಪೊಲೀಸ್‌
ಈ ನಡುವೆ ಸ್ಯಾಂಟ್ರೊ ರವಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೈಸೂರು ಪೊಲೀಸ್ ಕಮೀಷನರ್ ರಮೇಶ್ ಬಾನೋತ್ ಹೇಳಿದ್ದಾರೆ. ಮಹಿಳೆಯ ಪರವಾಗಿ ನಿಂತು ದೂರು ನೀಡಿದ ಒಡನಾಡಿ ಸಂಸ್ಥೆಯ ಹೂಟಗಳ್ಳಿ ಕಚೇರಿಗೆ ವಿಜಯನಗರ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಎಸಿಪಿ ಶಿವಶಂಕರ್, ವಿಜಯನಗರ ಇನ್ಸ್ ಪೆಕ್ಟರ್ ರವಿಶಂಕರ್, ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ವಿಚಾರಣೆ ನಡೆಯುತ್ತಿದೆ.

ʻʻಆತನ ಎರಡನೇ ಪತ್ನಿ ಎಂಬವರು ದೂರು ನೀಡಿದ್ದಾರೆ. ಅವರು ಕೇವಲ ದೂರನ್ನಷ್ಟೇ ನೀಡಿದ್ದಾರೆ. ಈ ಕಾರಣದಿಂದ ಅಗತ್ಯ ದಾಖಲೆಗಳ ಹುಡುಕಾಟದಲ್ಲಿದ್ದೇವೆ. ಆತನ ವಿರುದ್ಧ ದೂರು ದಾಖಲಾಗಿರುವ ಕಾರಣ ಶೀಘ್ರ ಬಂಧಿಸುತ್ತೇವೆ. ಕಾನೂನಿನ ಅಡಿ ಯಾರನ್ನೂ‌ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆತ ಬೇರೆ – ಬೇರೆಯವರ ಜತೆ ಇರುವ ಫೋಟೊಗಳನ್ನು ನೋಡಿದ್ದೇವೆ. ಜಾಲತಾಣದಲ್ಲೂ ಆತ ಏನೆಲ್ಲ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಆತನ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆʼʼ ಎಂದು ಕಮಿಷನರ್‌ ಬಾನೋತ್‌ ಹೇಳಿದ್ದಾರೆ.

ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಗೊತ್ತೇ ಇಲ್ಲ ಅಂತೀರಲ್ಲಾ, ನಿಮ್ಮ ಪುತ್ರ ಅವನಿಗೆ ಸ್ವೀಟ್‌ ಬ್ರದರ್‌ ಹೇಗೆ?: ಬೊಮ್ಮಾಯಿಗೆ ಕಾಂಗ್ರೆಸ್‌ ಪ್ರಶ್ನೆ

Exit mobile version