Site icon Vistara News

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ: ಮಾಲೀಕನ ಅಗಲಿಕೆಗೆ ನೊಂದು ಕಣ್ಣೀರಾದ ಶ್ವಾನ

chandrashekhar guruji hubli

ಹುಬ್ಬಳ್ಳಿ: ಹಾಡಹಗಲೇ ಹತ್ಯೆಗೀಡಾದ ಖ್ಯಾತ ವಾಸ್ತುಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಅವರ ಅಂತ್ಯಕ್ರಿಯೆಯನ್ನು ಹುಬ್ಬಳ್ಳಿ ಸಮೀಪದ ಸುಳ್ಳ ಗ್ರಾಮದಲ್ಲಿರುವ ಗುರೂಜಿ ಅವರ ಜಮೀನಿನಲ್ಲಿ ಬುಧವಾರ ಸಂಜೆ ನೆರವೇರಿಸಲಾಯಿತು. ಕಿಮ್ಸ್‌ ಆಸ್ಪತ್ರೆಯಿಂದ ಜಮೀನಿನವರೆಗೂ ಪಾರ್ಥಿವ ಶರೀರದ ಮೆರವಣಿಗೆ ಹಾಗೂ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸಾವಿರಾರು ಜನರು, ಭಕ್ತರು ಹಾಗೂ ಕುಟುಂಬದವರು ನೆರೆದು ಕಣ್ಣೀರು ಸುರಿಸಿದರು. ಮಾಲೀಕನ ಅಗಲಿಕೆಗೆ ಗುರೂಜಿ ಅವರ ಶ್ವಾನವೂ ಮೌನವಾಗಿದ್ದು ಶ್ರದ್ಧಾಂಜಲಿ ಅರ್ಪಿಸಿತು.

ಉಣಕಲ್‌ ಕೆರೆ ಬಳಿ ಇರುವ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ಮಂಗಳವಾರ ಗುರೂಜಿ ಹತ್ಯೆ ನಡೆದಿತ್ತು. ಚಂದ್ರಶೇಖರ ಗುರೂಜಿ ಅವರನ್ನು ಭೇಟಿಯಾಗಲು ಬಂದ ಮಹಾಂತೇಶ್‌ ಹಾಗೂ ಮಂಜುನಾಥ್‌ ಭೀಕರವಾಗಿ ಕೊಲೆ ಮಾಡಿದ್ದರು. ಗುರೂಜಿ ನೆಲಕ್ಕುರುಳಿದರೂ ಬಿಡದೆ ಅವರನ್ನು ನಿರಂತರವಾಗಿ ಇರಿಯಲಾಗಿತ್ತು. ಕೇವಲ ೪೦ ಸೆಕೆಂಡುಗಳಲ್ಲಿ ಹಂತಕರು ನಿರಂತರವಾಗಿ ಇರಿದಿದ್ದರು.ಿಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಎರಡು ಬಾರಿ ಕುತ್ತಿಗೆಗೆ ಇರಿದಿರುವುದೂ ಸೇರಿದಂತೆ ದೇಹದಲ್ಲಿ ಒಟ್ಟು 42 ಕಡೆ ಇರಿದಿರುವ ಗುರುತು ಮರಣೋತ್ತರ ಪರೀಕ್ಷೆ ವೇಳೆ ಕಂಡುಬಂದಿತ್ತು. ತೀವ್ರ ರಕ್ತಸ್ರಾವದಿಂದ ಚಂದ್ರಶೇಖರ ಗುರೂಜಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದರು. ಮದ್ಯಾಹ್ನ 12ರ ಸುಮಾರಿಗೆ ಕಿಮ್ಸ್‌ ಆಸ್ರಪತ್ರೆಯಿಂದ ಕುಟುಂಬದವರಿಗೆ ದೇಹವನ್ನು ಹಸ್ತಾಂತರಿಸಲಾಯಿತು.

ದಾರಿಯುದ್ದಕ್ಕೂ ಮೆರವಣಿಗೆ

ಪಾರ್ಥಿವ ಶರೀರವನ್ನು ಕಿಮ್ಸ್‌ ಆಸ್ಪತ್ರೆಯಿಂದ ಸುಳ್ಳವರೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ರಸ್ತೆಯುದ್ದಕ್ಕೂ ಸಾವಿರಾರು ಜನರು ನಿಂತು ನೆಚ್ಚಿನ ಗುರೂಜಿ ಅಗಲಿಕೆಗೆ ಕಣ್ಣೀರು ಹಾಕಿದರು. ಸುಳ್ಳದ ಜಮೀನಿಗೆ ಶರೀರವನ್ನು ತರುವ ವೇಳೆಗಾಗಲೆ ಅಲ್ಲಿಯೂ ಸಾವಿರಾರು ಜನರು ನೆರೆದಿದ್ದರು. ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌, ನಿಡುಮಾಮಿಡಿ ಶ್ರೀಗಳು, ವಿವಿಧ ಮಠಾಧೀಶರು ಅಂತಿಮ ಸಂಸ್ಕಾರ ಕ್ರಿಯೆಗಳನ್ನು ವೀಕ್ಷಿಸಿದರು.

ಗುರೂಜಿ ಮಗಳು ಸ್ವಾತಿ ಹಾಗೂ ಅಣ್ಣನ ಮಗ ಸಂತೋಷ್‌ ಅಂತಿಮ ವಿಧಿವಿಧಾನ ನೆರವೇರಿಸಿದರು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕೊಟ್ರಯ್ಯ ಹಿರೇಮಠ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಂಸ್ಕಾರ ಕಾರ್ಯ ನಡೆಯಿತು. ಮೃತ ದೇಹದ ಬಳಿ ಬಿಕ್ಕಿಬಿಕ್ಕಿ ಅಳುತ್ತಿದ್ದ ಗುರೂಜಿ ಪತ್ನಿ ಅಂಕಿತಾರನ್ನು ಕಂಡು ಜನರು ಮರುಗಿದರು. ಗುರೂಜಿ ಅವರ ಅಕ್ಕ ದುಃಖವನ್ನು ತಾಳಲಾಗದೆ ಪ್ರಜ್ಞೆ ತಪ್ಪಿ ಬಿದ್ದರು.

ಕಣ್ಣೀರು ಸುರಿಸಿದ ಪ್ರಿನ್ಸ್‌

ಗುರೂಜಿ ಅವರ ನೆಚ್ಚಿನ ಸಾಕುನಾಯಿ ಪ್ರಿನ್ಸ್‌ ತನ್ನ ಮಾಲೀಕನನ್ನು ನೆನೆದು ಶ್ರದ್ಧಾಂಜಲಿ ಅರ್ಪಿಸಿತು. ಶವವನ್ನು ಇಟ್ಟಿದ್ದ ಗಾಜಿನ ಪೆಟ್ಟಿಗೆಯ ಮೇಲೆ ಸಾಕಷ್ಟು ಹೊತ್ತು ಮಲಗಿದ ನಾಯಿ ತನ್ನ ಮಾಲೀಕನನ್ನೇ ನೋಡುತ್ತಿತ್ತು. ನಂತರವೂ ಸಾಕಷ್ಟು ಹೊತ್ತು ಶವದ ಬಳಿಯಲ್ಲೆ ಮೌನವಾಗಿ ಕುಳಿತಿತ್ತು. ಶವದ ಪೆಟ್ಟಿಗೆಯನ್ನು ತೆರೆಯುತ್ತಿದ್ದಂತೆಯೇ ಬೊಗಳಲು ಆರಂಭಿಸಿ ನಂತರ ರೋದಿಸುವುದನ್ನು ಕಂಡು ಇಡೀ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತು. ಕುಟುಂಬದ ಸದಸ್ಯರೂ ನಾಯಿಯನ್ನು ತಬ್ಬಿಕೊಂಡು ರೋದಿಸಿದರು.

ಇದನ್ನೂ ಓದಿ | ಗ್ರಾಹಕರ ಹಣ ಎಗರಿಸಿದ, ಗ್ರಾಹಕ ನ್ಯಾಯಾಲಯಕ್ಕೆ ಹೋದ: ಚಂದ್ರಶೇಖರ ಗುರೂಜಿ ಹತ್ಯೆಗೆ ಹೊಸ ಟ್ವಿಸ್ಟ್‌

Exit mobile version