ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಂದ ಭವ್ಯ ಸ್ವಾಗತ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸರ್ವೋದಯ ಸಮಾವೇಶಕ್ಕೆ (Sarvodaya Samavesha) ಚಾಲನೆ ದೊರೆತಿದ್ದು, ಕಾಂಗ್ರೆಸ್‌ನಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದ ರಾಜ್ಯ ನಾಯಕನನ್ನು ಹಾಡಿಹೊಗಳಿದ್ದಾರೆ. ಈ ವೇಳೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ನಾನು ಬಂಡೆ ಅಲ್ಲ, ಅದೇನಿದ್ದರೂ ಮಲ್ಲಿಕಾರ್ಜುನ ಖರ್ಗೆ ಎಂದು ಬಣ್ಣಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಇದು ಐತಿಹಾಸಿಕ ದಿನ. ಮಹಾತ್ಮಾ ಗಾಂಧೀಜಿ ಅವರು ಪ್ರಾರಂಭಿಸಿದ ಈ ಸರ್ವೋದಯ ಹೋರಾಟದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ವಿಶ್ವಾಸವನ್ನು ಇಟ್ಟಿದ್ದಾರೆ. ಇಂದು ಖರ್ಗೆ ಜತೆಗೆ ನಾವು-ನೀವೆಲ್ಲರೂ ಇದ್ದೇವೆ ಎಂಬ ಸಂದೇಶ ಕೊಡುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಕೆಶಿ ತಿಳಿಸಿದರು.
ಬಡವರಿಗೆ ಶಕ್ತಿ ತುಂಬಲು ಇರುವ ಬಂಡೆ
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಎಐಸಿಸಿ ಚುನಾವಣೆ ನಡೆಯಿತು. ಅವರ ಹೆಸರನ್ನು ಚುನಾವಣೆಗೆ ಸೂಚಿಸುವ ಭಾಗ್ಯ ನಮಗೆ ಸಿಕ್ಕಿತು. ಶೇಕಡಾ 90ರಷ್ಟು ಮತದಾರರು ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ನಿಂತಿದ್ದರು. ಭಾರತ್ ಜೋಡೋ ಯಾತ್ರೆ ಮುಗಿಯುವುದರೊಳಗೆ ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾದರು. ಇಡೀ ರಾಷ್ಟಕ್ಕೆ ಶಕ್ತಿ ತುಂಬಲು ಅವರು ಬಂದಿದ್ದಾರೆ. ನಾನು ಕನಕಪುರದ ಬಂಡೆ ಅಲ್ಲ. ಇಡೀ ದೇಶದ ಜನರಿಗೆ, ಬಡವರಿಗೆ ಶಕ್ತಿ ತುಂಬಲು ನಿಂತಿರುವ ಖರ್ಗೆ ಅವರು ಬಂಡೆ ಎಂದು ಇದೇ ವೇಳೆ ಡಿ.ಕೆ. ಶಿವಕುಮಾರ್ ಹೇಳಿದರು.
ಪಕ್ಷಕ್ಕೆ ನಿಷ್ಠೆ, ತ್ಯಾಗ, ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮಲ್ಲಿಕಾರ್ಜುನ ಖರ್ಗೆ. ಅವರ ತ್ಯಾಗದಿಂದಲೇ ಈ ಸ್ಥಾನ ಅವರಿಗೆ ದೊರೆತಿದೆ. ಅವರು ಹುಡುಕಿಕೊಂಡು ಹೋಗಿ ಅಧಿಕಾರ ಕೇಳಿದವರಲ್ಲ. ಅವರೊಂದಿಗೆ ನಾನು ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ್ದೇನೆ. ಈಗ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈಗಲೂ ಅವರ ಜತೆಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಇದು ನನ್ನ ಪುಣ್ಯ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ | ಏರ್‌ಪೋರ್ಟ್‌ನಲ್ಲಿ ಕಾಂಗ್ರೆಸ್ ಅಧಿನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅದ್ಧೂರಿ ಸ್ವಾಗತ