Site icon Vistara News

Sarvodaya Samavesha | ಸಣ್ಣಪುಟ್ಟ ಭಿನ್ನಮತ ಇದ್ದರೂ ಕಾಂಗ್ರೆಸ್‌ ಅಧಿಕಾರಕ್ಕೆ ತರುತ್ತೇವೆ: ಖರ್ಗೆಗೆ ಸಿದ್ದು ಮಾತು

congress sarvodaya ೧೨

ಬೆಂಗಳೂರು: ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದು ನಮಗಿರುವ ಸವಾಲಾಗಿದೆ. ಬಡವರ, ರೈತರ, ಯುವಕರ, ಅಲ್ಪಸಂಖ್ಯಾತರ ವಿರೋಧಿ, ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಿ, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ವೋದಯ ಸಮಾವೇಶದಲ್ಲಿ (Sarvodaya Samavesha) ಪ್ರತಿಜ್ಞೆ ಮಾಡಿದರು.

ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸರ್ವೋದಯ ಸಮಾವೇಶದಲ್ಲಿ (Sarvodaya Samavesha) ಮಾತನಾಡಿದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡುವಾಗ ಪ್ರಸ್ತಾಪ ಮಾಡಿದಂತೆ ಕರ್ನಾಟಕದಲ್ಲಿ ೨೦೨೩ರಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಬೇಕು. ಎಲ್ಲ ಕಾರ್ಯಕರ್ತರು, ನಾಯಕರು ಒಟ್ಟಾಗಿ ಈಗಿನ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ ಕೆಲಸ ಸಾಗಲಿದೆ. ಅಲ್ಲದೆ, ರಾಜ್ಯದ ಜನರೂ ಸಹ ಈ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದು, ಈ ಭ್ರಷ್ಟ, ನಿಷ್ಕ್ರಿಯ ಸರ್ಕಾರವನ್ನು ಕಿತ್ತೊಗೆಯಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಖರ್ಗೆಗೆ ಅಧ್ಯಕ್ಷ ಪಟ್ಟ ಕರ್ನಾಟಕ ಹೆಮ್ಮೆ- ಸಿದ್ದರಾಮಯ್ಯ
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಮೊದಲನೆಯ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದಾರೆ. ಕೆಪಿಸಿಸಿ ಕಡೆಯಿಂದ ಅದ್ಧೂರಿ ಹಾಗೂ ಆತ್ಮೀಯವಾಗಿ ಸ್ವಾಗತ ಕೋರಿದ್ದೇವೆ. ಇಡೀ ಕಾಂಗ್ರೆಸ್‌ ವಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿಜಲಿಂಗಪ್ಪ ಅವರ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದು ಕರ್ನಾಟಕದ ಏಳು ಕೋಟಿ ಜನರ ಹೆಮ್ಮೆಯ ವಿಚಾರ ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಇದನ್ನೂ ಓದಿ | Sarvodaya Samavesha | ಪಕ್ಷಕ್ಕೆ ಬಂದ ಕೂಡಲೇ ಸಿಎಂ ಮಾಡಿ ಅನ್ನಬೇಡಿ: ಮಲ್ಲಿಕಾರ್ಜುನ ಖರ್ಗೆ

ಭ್ರಷ್ಟತೆ ಬಗ್ಗೆ ಮೋದಿ ಮಾತನಾಡುತ್ತಿಲ್ಲ
ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಇದೆ. ಇದನ್ನು ನಾವು ಹೇಳುತ್ತಿಲ್ಲ. ಗುತ್ತಿಗೆದಾರ ಸಂಘದವರು ಹೇಳಿದ್ದಾರೆ. ಗುತ್ತಿಗೆದಾರರಿಗೆ ಇನ್ನೂ ಸುಮಾರು 25 ಸಾವಿರ ಕೋಟಿ ರೂಪಾಯಿ ಬಾಕಿ ಹಣವನ್ನು ಗುತ್ತಿಗೆದಾರರಿಗೆ ಕೊಡಬೇಕಿದೆ. ಅದನ್ನು ಕೊಡಲು ಕಮಿಷನ್‌ ಕೇಳುತ್ತಿದ್ದಾರೆ. ಈ ಬಗ್ಗೆ ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ. ಆದರೆ, ಯಾರೂ ಕ್ಯಾರೆ ಎನ್ನಲಿಲ್ಲ. ಸಂತೋಷ್‌ ಪಾಟೀಲ್‌ ಎಂಬ ಗುತ್ತಿಗೆದಾರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಶೇ. ೪೦ರಷ್ಟು ಕಮಿಷನ್‌ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಆಗಿನ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಅಲ್ಲದೆ, ಈಚೆಗೆ ಇನ್ಸ್‌ಪೆಕ್ಟರ್‌ ನಂದೀಶ್‌ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು 70-80 ಲಕ್ಷ ರೂಪಾಯಿ ಕೊಟ್ಟು ಕೆ.ಆರ್.ಪುರಂ ಪೊಲೀಸ್‌ ಸ್ಟೇಷನ್‌ಗೆ ನಿಯೋಜನೆಗೊಂಡಿದ್ದರು ಎಂದು ಈ ಸರ್ಕಾರದ ಸಚಿವ ಎಂಟಿಬಿ ನಾಗರಾಜ್‌ ಹೇಳುತ್ತಾರೆ. ಕೊನೆಗೆ ನಾನು ಹೇಳೇ ಇಲ್ಲ ಎಂದು ಹೇಳುತ್ತಾರೆ. ಆದರೆ, ಈ ನಂದೀಶ್‌ ಸಾವಿಗೆ ನೇರವಾಗಿ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ಕಾರಣ. ಈ ಇಬ್ಬರಿಗೂ ಘನತೆ, ಗೌರವ ಇದ್ದರೆ ಎಂಟಿಬಿ ನಾಗರಾಜ್‌ ರಾಜೀನಾಮೆ ಕೊಡಬೇಕಿತ್ತು. ಆದರೆ, ಇದು ಭಂಡ ಸರ್ಕಾರ ಎಂದು ಸಿದ್ದರಾಮಯ್ಯ ದೂರಿದರು.

ಶಕ್ತಿ ತುಂಬಲಿದೆ ಜೋಡೋ ಯಾತ್ರೆ
ಬಡವರ, ರೈತರ ಕೆಲಸಗಳು ನಡೆಯುತ್ತಿಲ್ಲ. ದ್ವೇಷದ ರಾಜಕಾರಣ ನಡೆಯುತ್ತಿದೆ. ನಿರುದ್ಯೋಗ, ಭ್ರಷ್ಟಾಚಾರ ಯಾವುದಕ್ಕೂ ಪರಿಹಾರ ಸಿಗುತ್ತಿಲ್ಲ. ಅದಕ್ಕಾಗಿ ನಮ್ಮ‌ ನಾಯಕರಾಗಿರುವ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಯನ್ನು ಕೈಗೊಂಡಿದ್ದಾರೆ. ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ ಸೇರಿದಂತೆ ಎಲ್ಲ ಭಾಗದಲ್ಲೂ ಜನಸ್ಪಂದನೆ ದೊರೆಯುತ್ತಿದೆ. ಇದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸಾಕಷ್ಟು ಶಕ್ತಿ ದೊರೆತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಖರ್ಗೆ ಎಚ್ಚರಿಕೆ ಮಾತನ್ನು ಪಾಲಿಸುತ್ತೇವೆ
ಖರ್ಗೆ ಅವರೇ ನೀವು ಕರ್ನಾಟಕದವರು. ಬಹಳ ಸುದೀರ್ಘ ರಾಜಕಾರಣ ಮಾಡಿದ್ದೀರಿ. ಅಭಿವೃದ್ಧಿಪರ ರಾಜಕಾರಣದ ಬಗ್ಗೆ ನಂಬಿಕೆ ಇಟ್ಟವರು. ನೀವು ಕೆಲಸ ಮಾಡಿದ ಇಲಾಖೆಯಲ್ಲಿ ಹೆಜ್ಜೆ ಗುರುತು ಬಿಟ್ಟಿದ್ದೀರಿ. ನಿಮಗೆ ದ್ವೇಷ ರಾಜಕಾರಣ ಗೊತ್ತಿಲ್ಲ. ಬಡವರ ಪರ, ಶೋಷಿತರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೀರಿ. ಬುದ್ಧ, ಬಸವ, ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಬೆಳೆದುಬಂದಿದ್ದೀರಿ. ನೀವೊಬ್ಬರು ಸಮಚಿತ್ತ, ಸ್ವಾಭಿಮಾನಿ ನಾಯಕರಾಗಿದ್ದೀರಿ. ನಿಮ್ಮ ಎಚ್ಚರಿಕೆಯ ಮಾತುಗಳಂತೆ ನಾವು ನಡೆದುಕೊಂಡು ಹೋಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ | Ramulu Vs Siddu | ಕ್ಷೇತ್ರವಿಲ್ಲದೆ ಪರದೇಶಿಯಂತೆ ಓಡಾಡುತ್ತಿರುವ ಗಿರಾಕಿ ಸಿದ್ದರಾಮಯ್ಯ ಎಂದ ರಾಮುಲು

ಖರ್ಗೆಗೆ ಬಲ ತುಂಬಲು ಈ ಸಮಾವೇಶ- ಡಿಕೆಶಿ
ರಾಜ್ಯದ ಇತಿಹಾಸದಲ್ಲಿ ಇದು ಐತಿಹಾಸಿಕ ದಿನ. ಮಹಾತ್ಮಾ ಗಾಂಧೀಜಿ ಅವರು ಪ್ರಾರಂಭಿಸಿದ ಈ ಸರ್ವೋದಯ ಹೋರಾಟದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ವಿಶ್ವಾಸವನ್ನು ಇಟ್ಟಿದ್ದಾರೆ. ಇಂದು ಖರ್ಗೆ ಜತೆಗೆ ನಾವು-ನೀವೆಲ್ಲರೂ ಇದ್ದೇವೆ ಎಂಬ ಸಂದೇಶ ಕೊಡುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಕೆಶಿ ತಿಳಿಸಿದರು.

ಬಡವರಿಗೆ ಶಕ್ತಿ ತುಂಬಲು ಇರುವ ಬಂಡೆ
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಎಐಸಿಸಿ ಚುನಾವಣೆ ನಡೆಯಿತು. ಅವರ ಹೆಸರನ್ನು ಚುನಾವಣೆಗೆ ಸೂಚಿಸುವ ಭಾಗ್ಯ ನಮಗೆ ಸಿಕ್ಕಿತು. ಶೇಕಡಾ 90ರಷ್ಟು ಮತದಾರರು ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ನಿಂತಿದ್ದರು. ಭಾರತ್ ಜೋಡೋ ಯಾತ್ರೆ ಮುಗಿಯುವುದರೊಳಗೆ ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾದರು. ಇಡೀ ರಾಷ್ಟಕ್ಕೆ ಶಕ್ತಿ ತುಂಬಲು ಅವರು ಬಂದಿದ್ದಾರೆ. ನಾನು ಕನಕಪುರದ ಬಂಡೆ ಅಲ್ಲ. ಇಡೀ ದೇಶದ ಜನರಿಗೆ, ಬಡವರಿಗೆ ಶಕ್ತಿ ತುಂಬಲು ನಿಂತಿರುವ ಖರ್ಗೆ ಅವರು ಬಂಡೆ ಎಂದು ಇದೇ ವೇಳೆ ಡಿ.ಕೆ. ಶಿವಕುಮಾರ್‌ ಹೇಳಿದರು.

ಪಕ್ಷಕ್ಕೆ ನಿಷ್ಠೆ, ತ್ಯಾಗ, ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮಲ್ಲಿಕಾರ್ಜುನ ಖರ್ಗೆ. ಅವರ ತ್ಯಾಗದಿಂದಲೇ ಈ ಸ್ಥಾನ ಅವರಿಗೆ ದೊರೆತಿದೆ. ಅವರು ಹುಡುಕಿಕೊಂಡು ಹೋಗಿ ಅಧಿಕಾರ ಕೇಳಿದವರಲ್ಲ. ಅವರೊಂದಿಗೆ ನಾನು ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ್ದೇನೆ. ಈಗ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈಗಲೂ ಅವರ ಜತೆಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಇದು ನನ್ನ ಪುಣ್ಯ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ಜೋಕರ್‌: ಸಿದ್ದರಾಮಯ್ಯ

Exit mobile version