ಬೆಳಗಾವಿ: ಪರ್ಶಿಯನ್ ಭಾಷೆಯ ಮೂಲಕ ಹಿಂದು ಶಬ್ದದ ವ್ಯಾಖ್ಯಾನ ಮಾಡಲು ಹೋಗಿ ಭಾರಿ ಆಕ್ರೋಶಕ್ಕೆ ಗುರಿಯಾದ ಮತ್ತು ಪಕ್ಷಕ್ಕೂ ಮುಜುಗರ ಉಂಟು ಮಾಡಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುವುದಾಗಿ ಪ್ರಕಟಿಸಿದ್ದಾರೆ. ಜತೆಗೆ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ಪತ್ರವನ್ನೇ ಬರೆದಿರುವ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ಹೇಳಿಕೆಯನ್ನು ಸೂಕ್ತವಾಗಿ ಗಮನಿಸದೆ ಅವಾಂತರ ಸೃಷ್ಟಿಸಿದವರ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಮುಖ್ಯಮಂತ್ರಿಗಳಲ್ಲಿ ಕೋರಿದ್ದಾರೆ.
ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ.
ದಿನಾಂಕ 06-11-2022 ರಂದು ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಕೆಳಕಂಡ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತ ದೇಶಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಎಂಬ ಪದದ ಅರ್ಥ ಕಟ್ಟದಾಗಿದೆ ಎಂದು ಬರೆದಿರುತ್ತಾರೆ ಅಂತಾ ಹೇಳಿರುತ್ತೇನೆ ಮತ್ತು ಇದು ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿರುವುದು ಬಹಳ ಅವಶ್ಯಕತೆ ಇದೆ ಎಂದು ಸಹ ಹೇಳಿರುತ್ತೇನೆ.
ವಿಕಿಪಿಡಿಯಾ, ಪುಸ್ತಕಗಳು, ಶಬ್ದಕೋಶಗಳು ಮತ್ತು ಇತಿಹಾಸಕಾರರ ಬರಹಗಳ ಉಲ್ಲೇಖದ ಮೇಲೆ ಈ ನನ್ನ ಭಾಷಣ ಆಧಾರಿತವಾಗಿರುತ್ತದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುತ್ತಾರೆ. ಜೊತೆಗೆ ನನಗೆ ತೇಜೋವಧೆ ಹಾಗೂ ಹಾನಿಯುಂಟುಮಾಡುವ ವ್ಯವಸ್ಥಿತ ಪಿತೂರಿ ನಡೆದಿರುತ್ತದೆ. ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲು ಮತ್ತು ನೈಜ ಸ್ಥಿತಿಯನ್ನು ವಿವರಿಸದೇ ಈ ಅವಾಂತರ ಸೃಷ್ಟಿಸಿದವರ ಮೇಲೆ ತನಿಖೆ ಮಾಡುವಂತೆ ವಿನಂತಿಸಿಕೊಳ್ಳುತ್ತೇನೆ.
ಮತ್ತೊಮ್ಮೆ ತಮ್ಮಲ್ಲಿ ಕೇಳಿಕೊಳ್ಳುವದೇನೆಂದರೆ, ಈ ಕುರಿತು ತಕ್ಷಣ ತನಿಖಾ ಸಮಿತಿ ರಚಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಹಾಗೂ ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆಯ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ಆ ಒಂದು ಮಾತು ವಿವಾದಕ್ಕಿಡಾಗಿದೆ. ಅಲ್ಲದೇ ಅದನ್ನು ತಿರುಚಿ ಅಪಪ್ರಚಾರ ಗೊಳಿಸುತ್ತಿರುವುದರಿಂದ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ್ದ ಆ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ಮತ್ತು ಆ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ.
ಇದನ್ನೂ ಓದಿ | Swabhimani hindu | ರಾಹುಲ್ ಮೌನ ಯಾಕೆ, ಸಿದ್ದು ನುಣುಚಿಕೊಳ್ಳೋದ್ಯಾಕೆ, ಮಾತಾಡ್ಲಿ: ಸವಾಲು ಹಾಕಿದ ಸಿಎಂ