ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಈಗ ಎಲ್ಲೆಡೆ ಸಂಚಲನ ಸೃಷ್ಟಿಸಿದೆ. ಹಿಂದು ಪದಕ್ಕೆ ಅತ್ಯಂತ ಕೀಳು ಅರ್ಥವಿದ್ದು, ಅದನ್ನು ಕೇಳಿದರೆ ನಿಮಗೆ ನಾಚಿಕೆ ಆಗುತ್ತದೆ ಎಂದು ಕಾರ್ಯಕ್ರಮವೊಂದರಲ್ಲಿ ಸೋಮವಾರ ಹೇಳಿದ್ದಕ್ಕೆ ಸ್ವತಃ ಕಾಂಗ್ರೆಸ್‌ನಿಂದಲೇ ವಿರೋಧ ವ್ಯಕ್ತವಾಗುತ್ತಿದೆ.
ಈ ಕುರಿತು ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ ನಂತರ ಸುದ್ದಿಗೋಷ್ಠಿ ನಡೆಸಿರುವ ಜಾರಕಿಹೊಳಿ, ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ತಮ್ಮ ಮಾತಿಗೆ ಪೂರಕವಾಗಿ ಒಂದು ದಾಖಲೆಯನ್ನು ಅವರು ಬಿಡುಗಡೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಂತರ ಜಾರಕಿಹೊಳಿ, ʼಹಿಂದು ಎಂದರೆ ನಿಜವಾಗಿಯೂ ಯಾರು?ʼ ಎಂಬ ಲೇಖನವನ್ನು ಬಿಡುಗಡೆ ಮಾಡಿದ್ದಾರೆ. ಬಸವ ಭಾರತ ಎಂಬ ಪತ್ರಿಕೆಯಲ್ಲಿ 2022ರ ನವೆಂಬರ್‌ನಲ್ಲಿ ಅಂದರೆ ಇದೇ ತಿಂಗಳು ಪ್ರಕಟವಾಗಿರುವ ಲೇಖನವನ್ನು ವಿಜಯಪುರದ ಬಸವತತ್ವ ಪ್ರಚಾರಕ ಡಾ. ಜೆ.ಎಸ್. ಪಾಟೀಲ ಎನ್ನುವವರು ಬರೆದಿದ್ದಾರೆ.
ಹಿಂದು ಎನ್ನುವುದು ಪ್ರಾಚೀನ ಬ್ರಾಹ್ಮಣ ಧರ್ಮದ ಆಧುನಿಕ ಪರಿಭಾಷೆ ಎಂದು ಮಾಜಿ ಶಾಸಕ ನೀಲಗಂಗಯ್ಯ ಪೂಜಾರ ಅವರು ಹೇಳಿದ್ದು ಸೇರಿ ಅನೇಕರ ಮಾತನ್ನು ಉದಾಹರಿಸಿರುವ ಲೇಖನದಲ್ಲಿ, ಪರ್ಷಿಯನ್ ಶಬ್ದಕೋಶವನ್ನು ಉಲ್ಲೇಖಿಸಿದ್ದಾರೆ. 1964ರಲ್ಲಿ ಲಖನೌನಲ್ಲಿ ಪ್ರಕಟವಾಗಿರುವ Lughet-e-Kishwari ಎಂಬ ಶಬ್ದಕೋಶದಲ್ಲಿ ಹಿಂದು ಎಂಬುದಕ್ಕೆ ಚೋರ್(ಕಳ್ಳ), ಡಾಕೂ(ಢಕಾಯಿತ), ರಾಹಜಾನ್ (ದಾಳಿಕೋರ) ಎಂಬ ಅರ್ಥವಿದೆ. ಇನ್ನೊಂದು ಶಬ್ದಕೋಶ Urdu-Feroz-Ul-Laghat ನ ಭಾಗ-1ರ 615ನೇ ಪುಟದಲ್ಲಿ ಚೋರ್(ಕಳ್ಳ) ೆಂಬ ಅರ್ಥವಿದೆ ಎಂದು ಬರೆದಿದ್ದಾರೆ. ಈ ದಾಖಲೆಯನ್ನು ಸತೀಶ್ ಜಾರಕಿಹೊಳಿ ತಮ್ಮ ಸಮರ್ಥನೆಗೆ ಬಿಡುಗಡೆ ಮಾಡಿದ್ದಾರೆ.
2021ರಲ್ಲಿ ಟ್ವೀಟ್ ಮಾಡಿದ್ದ ಉದಾಹರಣೆ
ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿದ ಉದಾಹರಣೆಗೂ ಮುನ್ನವೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗಿದೆ. ಉತ್ತರ ಪ್ರದೇಶದ ಲೇಖಕ ಫಯಾಜ್ ಅಹ್ಮದ್ ಫೈಜಿ ಎಂಬವರು ತಮ್ಮ @FayazAhmadFyzie ಟ್ವಿಟರ್ ಖಾತೆಯಲ್ಲಿ 2021ರಲ್ಲಿ ಇದಕ್ಕೆ ಸಂಬಂಧಿಸಿ ಬರೆದಿದ್ದಾರೆ.
Lughat-e-Kishwarie ಎನ್ನುವುದು ಉರ್ದು ಭಾಷೆಯ ಅಧಿಕೃತ ನಿಘಂಟು. ಇದನ್ನು ಸೈಯದ್ ತಸಾದುಕ್ ಹುಸೇನ್ ಅವರು ಸಂಕಲನ ಮಾಡಿದ್ದಾರೆ. ಇದರಲ್ಲಿ ಹಿಂದು ಎಂಬುದಕ್ಕೆ ಕಳ್ಳ, ಢಕಾಯಿತ, ದರೋಡೆಕೋರ ಹಾಗೂ ಗುಲಾಮ ಎಂದು ಬರೆಯಲಾಗಿದೆ. ಇಂತಹ ಅಪಮಾನಕರ ಶಬ್ದಾರ್ಥವನ್ನು ತೆಗೆದುಹಾಕಬೇಕಲ್ಲವೇ? ಎಂದು ತಿಳಿಸಿದ್ದಾರೆ.