ಬೆಳಗಾವಿ: ಹಿಂದು ಪದಕ್ಕೆ ಪರ್ಷಿಯನ್ ಡಿಕ್ಷ್‌ನರಿಯಲ್ಲಿ ನೀಡಿರುವ ಕೀಳು ಅರ್ಥವನ್ನು ಹುಡುಕಿಕೊಟ್ಟಿದ್ದಕ್ಕೆ ಬಿಜೆಪಿಯವರು ನನಗೆ ಕೃತಜ್ಞರಾಗಿರಬೇಕು ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಹಿಂದು ಪದದ ಕುರಿತು ಭಾಷಣದ ವಿಡಿಯೋ ಎಲ್ಲೆಡೆ ಹರಿದಾಡಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆಕ್ಷೇಪ ವ್ಯಕ್ತಪಡಿಸಿದ್ದರು. ದೇಶಾದ್ಯಂತ ವಿವಾದ ಹೆಚ್ಚಾಗುತ್ತಿರುವುದರಿಂದ ಒಂದು ಸ್ಪಷ್ಟನೆ ನೀಡುವಂತೆ ಸುರ್ಜೆವಾಲ ದೂರವಾಣಿ ಕರೆ ಮಾಡಿ ಹೇಳಿದ್ದರಿಂದ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಪುಸ್ತಕದಲ್ಲಿದ್ದದ್ದನ್ನು ನಾನು ಹೇಳಿದ್ದೇನೆ. ತಮಗೆ ಬೈದಿದ್ದನ್ನು ಬಿಜೆಪಿಯವರು ನೋಡಿಲ್ಲ. ಇಂತಹದ್ದನ್ನು ಹುಡುಕಿ ಹೇಳಿದ್ದಕ್ಕೆ ನನಗೆ ಅವರು ಕೃತಜ್ಞತೆ ಸಲ್ಲಿಸಬೇಕು. ನಿಮ್ಮ ಬಗ್ಗೆ ಹೀಗೆ ಹೇಳಿದ್ದಾರೆ ಹುಡುಕಿ ಎಂದಿದ್ದೇನೆ ಎಂದರು.
ನೀವು ಹಿಂದುವೋ ಅಥವಾ ಬೇರಾವುದೋ ಧರ್ಮದವರೋ ಎಂಬ ಪ್ರಶ್ನೆಗೆ, ನಾನು ಭಾರತೀಯ, ಇಂಡಿಯನ್ ಎಂದು ಉತ್ತರಿಸಿದ ಜಾರಕಿಹೊಳಿ, ಡಿಕ್ಷ್‌ನರಿಯಲ್ಲಿ ಹಿಂದು ಪದಕ್ಕೆ ಏನು ಬಳಕೆ ಮಾಡಿದ್ದಾರೆ ಎಂದು ತೆಗೆದುನೋಡಿ. ಹಿಂದು ಪದಕ್ಕೆ ಕೆಟ್ಟ ಶಬ್ದ ಬಳಸಿದ್ದಾರೆ ನೋಡಿ ಎಂದಿದ್ದೇನೆ. ಡಿಕ್ಷ್‌ನರಿಯಲ್ಲಿ ಹಿಂದು ಪದಕ್ಕೆ ಅಶ್ಲೀಲ ಅರ್ಥ ಇದೆ. ಇದರ ಬಗ್ಗೆ ವಾಜಪೇಯಿ ಅವರೂ ಸೇರಿ ಅನೇಕರು ಮಾತನಾಡಿದ್ದಾರೆ. ನಾನು ಯಾರ ಪರವಾಗಿಯೂ ವಿರೋಧವಾಗಿಯೂ ಇಲ್ಲ. ನಾವು ಮನುಷ್ಯರ ಪರವಾಗಿದ್ದೇವೆ, ಅದರ ನ್ಯೂನತೆಗಳನ್ನು ನಾನು ಹೇಳಿದ್ದೇನೆ ಎಂದು ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡರು.
ಈ ಹೇಳಿಕೆಯಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ತಾವು ಏಕಾಂಗಿ ಆಗಿದ್ದೀರ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಸತೀಶ್ ಜಾರಕಿಹೊಳಿ, ನಾನೇನು ಏಕಾಂಗಿ ಅಲ್ಲ. ನಂದೇ ಆದಂತಹ ಪಡೆ ಇದೆ. ಇವತ್ತಿನಿಂದ ನಮ್ಮ ಕಡೆಯಿಂದ ಟ್ರೋಲ್ ಹ್ಯಾಂಗ್ ಆಗುತ್ತದೆ ನೋಡಿ ಎಂದರು. ನನ್ನನ್ನು ಕಟ್ಟಿಹಾಕುವುದರಲ್ಲಿ ಆ ಪಕ್ಷ ಈ ಪಕ್ಷ ಎನ್ನುವ ವ್ಯತ್ಯಾಸವಿಲ್ಲ. ಎಲ್ಲರೂ ಕಟ್ಟಿಹಾಕಲು ಪ್ರಯತ್ನಿಸುತ್ತಿರಬಹುದು. ಮನುವಾದಿಗಳು ನನ್ನನ್ನು ಕಟ್ಟಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ನಾನು ಮಾತನಾಡಿಲ್ಲ. ಕಾಂಗ್ರೆಸ್‌ಗೂ ಇದಕ್ಕೂ ಸಂಬಂಧ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ, ಬೇಕಿದ್ದರೆ ತನಿಖೆ ನಡೆಸಲಿ. ಇದರ ಕುರಿತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಬೇಕಿದ್ದರೆ ಸಮಿತಿ ರಚಿಸಿ ತನಿಖೆ ನಡೆಸಲಿ. ತಪ್ಪು ಎಂದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ. ಕ್ಷಮೆಯ ಪ್ರಶ್ನೆಯೇ ಇಲ್ಲ ಎಂದರು.
ಸತೀಶ್ ಜಾರಕಿಹೊಳಿ ಅರೆಬರೆ ಓದಿಕೊಂಡಿದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ಪ್ರತಿಕ್ರಿಯಿಸಿ, ನಾನು ಅರೆಬರೆ ಓದಿಕೊಂಡಿಲ್ಲ. ನಾನು ಮೂವತ್ತು ವರ್ಷದಿಂದ ಇದರಲ್ಲಿದ್ದೇನೆ. ಇದರ ಕುರಿತು ಒಂದಲ್ಲ ಎರಡಲ್ಲ ಸಾವಿರಾರು ದಾಖಲೆ ಇದೆ ಎಂದರು.
ಸುರ್ಜೆವಾಲ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನನ್ನ ವಿಡಿಯೋವನ್ನು ಅವರು ನೋಡಿಲ್ಲ. ಹಿಂದು ಎಂಬುದರ ಕುರಿತು ಹೀಗೆ ಹೇಳಿದ್ದಾರಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಇದನ್ನು ಖಂಡಿಸುತ್ತೇವೆ ಎಂದಿದ್ದಾರೆ. ಅವರ ಮಾತಿನ ಬಗ್ಗೆ ಆಕ್ಷೇಪಣೆ ಇಲ್ಲ ಎಂದರು.
ಇದನ್ನೂ ಓದಿ | Swabhimani hindu | ಸತೀಶ್ ಜಾರಕಿಹೊಳಿ ಹೇಳಿಕೆಗೆ ರಾಹುಲ್, ಸಿದ್ದರಾಮಯ್ಯ ಸಮ್ಮತಿಯೇ?: ಬೊಮ್ಮಾಯಿ ಪ್ರಶ್ನೆ