ಬೆಳಗಾವಿ: ಪ್ರಸಕ್ತ ಸಾಲಿನ ವಿಧಾನಸಭಾ ಚುಣಾವಣಾ (Karnataka Election 2023) ಕಣ ರಂಗು ಪಡೆದುಕೊಳ್ಳುತ್ತಿದೆ. ಈ ವೇಳೆ ಗೊಂದಲಕ್ಕೆ ಕಾರಣವಾಗಿದ್ದ ಸವದತ್ತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರ ವಿಚಾರ ಕೊನೆಗೂ ಬಗೆಹರಿದಿದೆ. ಅವರ ನಾಮಪತ್ರವನ್ನು ಅಂಗೀಕರಿಸಿ ಚುನಾವಣಾಧಿಕಾರಿ ಆದೇಶವನ್ನು ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶನಿವಾರ (ಏಪ್ರಿಲ್ 22) ಕಾಂಗ್ರೆಸ್, ಆಪ್ ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳ ವಿಚಾರಣೆ ನಡೆಸಲಾಗಿದ್ದು, ಎರಡೂ ಕಡೆ ವಾದ-ಪ್ರತಿವಾದಗಳನ್ನು ಆಲಿಸಿದ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಚುನಾವಣಾಧಿಕಾರಿ ಡಾ.ರಾಜೀವ್ ಕೂಲೇರ್ ಅವರು ನಾಮಪತ್ರವನ್ನು ಅಂಗೀಕರಿಸಿ ಆದೇಶಿಸಿದ್ದಾರೆ. ಆದರೆ, ಈ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಪರ ವಕೀಲರು, ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿದ್ದಾರೆ.
ಆಪ್ ಅಭ್ಯರ್ಥಿ ಬಾಪುಗೌಡ ಪಾಟೀಲ ಪರ ವಕೀಲ ಬಿ.ಎಂ. ಯಲಿಗಾರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಪರ ವಕೀಲ ಮುರುಗೇಶ ವಂಟಮೂರಿ ಅವರು ವಾದ ಮಂಡಿಸಿದ್ದು, ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರ ಅಸಿಂಧು ಇದೆ, ಅದು ಕಾನೂನು ಬದ್ಧವಾಗಿಲ್ಲ ಎಂದು ಆಕ್ಷೇಪಣೆ ಮಾಡಿದ್ದರು. ಅಲ್ಲದೆ, ಬಿಜೆಪಿ ಅಭ್ಯರ್ಥಿ ಮೂರು ಬಾರಿ ಅಫಿಡೆವಿಟ್ ಸಲ್ಲಿಸಿದ್ದರೂ ಸರಿಯಾದ ಮಾದರಿಯಲ್ಲಿ ಸಲ್ಲಿಸಿಲ್ಲ ಎಂದು ವಾದಿಸಿದ್ದರು.
ವಾದ-ಪ್ರತಿವಾದ
ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಪರ ವಕೀಲ ಮುರುಘೇಂದ್ರ ವಂಟಮೂರಿ, 2019ರ ಪರಿಷ್ಕೃತ ಫಾರ್ಮ್ ನಂಬರ್ 26ರಲ್ಲಿ 5ಎ, 6ಎ, 9ಎ, 9ಬಿ ಕಾಲಂ ಸಲ್ಲಿಕೆ ಮಾಡಿಲ್ಲ. 9ಬಿ ಕಾಲಂನಲ್ಲಿ ಇದ್ದಂತಹ ಸರ್ಕಾರ ಅಥವಾ ಯಾವುದೇ ಕಂಪನಿಗಳ ಜತೆ ಕರಾರು ಹೊಂದಿದ ವಿಚಾರ ಉಲ್ಲೇಖ ಇಲ್ಲ. ಈ ಎಲ್ಲ ವಿವರವನ್ನು ಸಲ್ಲಿಕೆ ಮಾಡಿಲ್ಲ. ಯಾರೋ ತುಂಬಿದರು, ನಾನು ನೋಡಿಲ್ಲ ಎಂದು ಅಭ್ಯರ್ಥಿ ಹೇಳಿಕೆ ನೀಡುವಂತೆ ಇಲ್ಲ. ಇಂತಹ ಸಂದರ್ಭಗಳಲ್ಲಿ ಅದನ್ನು ಪರಿಣಗಿಸಲು ಬರುವುದಿಲ್ಲ ಎಂದು ವಾದ ಮಂಡಿಸಿದ್ದರು. ಇದಕ್ಕೆ ಪ್ರತಿವಾದ ಮಾಡಿದ ರತ್ನಾ ಮಾಮನಿ ಪರ ವಕೀಲರು, ಇದ್ಯಾವುದೂ ಗುರುತರವಾದ ದೋಷವಲ್ಲ ಎಂದು ವಾದಿಸಿದ್ದರು.
ಅಫಿಡವಿಟ್ ಸಲ್ಲಿಕೆ ಅಪೂರ್ಣ- ಮುರುಘೇಂದ್ರ ವಂಟಮೂರಿ
ವಿಚಾರಣೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಪರ ವಕೀಲ ಮುರುಘೇಂದ್ರ ವಂಟಮೂರಿ ಪ್ರತಿಕ್ರಿಯೆ ನೀಡಿ, ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯೋಜಿತ ಅಧಿಕಾರಿ ನಾಮಪತ್ರ ಮಾದರಿಯನ್ನು ಕೊಟ್ಟಿರುತ್ತಾರೆ. ಅದರಲ್ಲಿರುವ ಸೂಚನೆಗಳು ಅಭ್ಯರ್ಥಿಗಳಿಗೆ ಕಾನೂನು ಆಗುತ್ತದೆ. ಆ ಸೂಚನೆ ಪ್ರಕಾರವೇ ನಾಮಪತ್ರ ಸಲ್ಲಿಸಬೇಕಾಗುತ್ತದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಮಧ್ಯಾಹ್ನ 3ರೊಳಗೆ ಅಫಿಡೆವಿಟ್ ಸಲ್ಲಿಸಬೇಕು. ಏ.18ರಂದು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದಾಗ ತಪ್ಪು ತಿದ್ದಿಕೊಳ್ಳಿ ಎಂದು ನೋಟಿಸ್ ಕೊಡಲಾಗಿತ್ತು. ಏ.19ರಂದು ಎರಡನೇ ಅಫಿಡೆವಿಟ್ ಸಲ್ಲಿಸಿದಾಗಲೂ ಅಪೂರ್ಣವಾಗಿ ಸಲ್ಲಿಸಿದ್ದಾರೆ. ಬಳಿಕ ಏ.20ರಂದು ಸಂಜೆ ಮತ್ತೊಂದು ಅಫಿಡೆವಿಟ್ ಸಲ್ಲಿಕೆ ಮಾಡಿದ್ದು ಅದು ಅಪೂರ್ಣವಾಗಿದೆ ಎಂದು ಹೇಳಿದರು.
ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಮೇಲೆ 2019ರಲ್ಲಿ ಸುಪ್ರೀಂ ಕೋರ್ಟ್ ಕೆಲವು ಗೈಡ್‌ಲೈನ್ಸ್ ಕೊಟ್ಟಿದೆ. ಆ ಗೈಡ್‌ಲೈನ್ಸ್‌ಗಳನ್ನು ಪರಿಷ್ಕೃತ ಅಫಿಡವಿಟ್‌ನಲ್ಲಿ ಸೇರಿಸಲಾಗಿದೆ. ಇದನ್ನು ನೋಡದೇ ಬಿಜೆಪಿ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಲ್ಲಿಸಿದ ಅಫಿಡೆವಿಟ್‌ನಲ್ಲಿ 9ಎ, 9ಬಿ, 6ಎ ಈ ರೀತಿ ಹಲವು ಕಾಲಂಗಳು ಇಲ್ಲ. ಹೀಗಾಗಿ ಇವೆಲ್ಲ ಗಣನೀಯ ದೋಷ (Substantial Error) ಆಗುತ್ತದೆ. ಆದರೆ, ಇವೆಲ್ಲ ನಾಮಮಾತ್ರ ದೋಷ (Nominal Error) ಎಂದು ಅವರ ಪರ ವಕೀಲರು ವಾದಿಸಿದ್ದಾರೆ ಎಂದು ತಿಳಿಸಿದರು.
ಹೈಕೋರ್ಟ್‌ನಲ್ಲಿ ಪ್ರಶ್ನೆ- ಕಾಂಗ್ರೆಸ್ ವಕೀಲ
ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರ ಅಂಗೀಕಾರವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಪರ ವಕೀಲ ಮುರುಗೇಶ ವಂಟಗೂಡಿ, ನಾವು ಈ ಬಗ್ಗೆ ಹೈಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇವೆ. ಅಲ್ಲಿ ಈ ಆದೇಶವನ್ನು ಪ್ರಶ್ನೆ ಮಾಡುತ್ತೇವೆ. ಯಾವ ಕಾರಣಕ್ಕೆ ಅಂಗೀಕಾರ ಆಗಿದೆ ಎಂಬುದು ನಮಗೆ ತಿಳಿದಿಲ್ಲ. ಕೇವಲ ಅಂಗೀಕಾರ ಆಗಿದೆ ಎಂದು ಮಾತ್ರ ಹೇಳಿದ್ದಾರೆ. ನಾವು ಚುನಾವಣಾಧಿಕಾರಿಗಳ ಬಳಿ ಮಾಹಿತಿ ಪಡೆದು ಮುಂದಿನ ನಿರ್ಧಾರವನ್ನು ಮಾಡುತ್ತೇವೆ ಎಂದ ಹೇಳಿದರು.
ಏನಿದು ಆಕ್ಷೇಪಣೆ?
ಸವದತ್ತಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ಆಪ್ ಅಭ್ಯರ್ಥಿ ಬಾಪುಗೌಡ ಪಾಟೀಲ್ ಅವರು ರತ್ನಾ ಮಾಮನಿ ನಾಮಪತ್ರದ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಅಫಿಡವಿಟ್ ಸಲ್ಲಿಕೆ ವೇಳೆ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು. ಪ್ರಜಾಪ್ರತಿನಿಧಿ ಕಾಯ್ದೆ 2019ರ ತಿದ್ದುಪಡಿ ಪ್ರಕಾರ ಪರಿಷ್ಕೃತ ಫಾರ್ಮ್ ಸಂಖ್ಯೆ 26 (ಅಫಿಡವಿಟ್) ಸಲ್ಲಿಸಿಲ್ಲ ಎಂದು ಆರೋಪ ಮಾಡಲಾಗಿತ್ತು. 2019ರ ಮಾದರಿ ಬದಲಿಗೆ 2018ರ ಮಾದರಿಯ ಫಾರ್ಮ್ ಸಂಖ್ಯೆ 26 (ಅಫಿಡವಿಟ್) ರಲ್ಲಿ ಸಲ್ಲಿಕೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಏ.18 ಹಾಗೂ ಏ.19ರಂದು ಎರಡು ಬಾರಿ ರತ್ನಾ ಮಾಮನಿ ನಾಮಪತ್ರ ಸಲ್ಲಿಸಿದ್ದರು. ಎರಡೂ ಬಾರಿ ಸಲ್ಲಿಕೆ ಮಾಡುವಾಗಲೂ ಪರಿಷ್ಕೃತ ಫಾರ್ಮ್ ಸಂಖ್ಯೆ 26 (ಅಫಿಡವಿಟ್) ಅನ್ನು ಸಲ್ಲಿಸಿಲ್ಲ ಎಂದು ಆಪ್ ಹಾಗೂ ಕಾಂಗ್ರೆಸ್ ಆರೋಪಿಸಿತ್ತು.
ಇದನ್ನೂ ಓದಿ:Amit Shah: ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿದ್ದೇಕೆ?-ಗೃಹ ಸಚಿವ ಅಮಿತ್ ಶಾ ಉತ್ತರ ಹೀಗಿದೆ
ಚುನಾವಣಾಧಿಕಾರಿಗಳ ನೋಟಿಸ್ ಬಳಿಕವೂ ಎರಡೂ ಬಾರಿ ಹಳೆಯ ಮಾದರಿ ಫಾರ್ಮ್ ಸಂಖ್ಯೆ 26 ಅನ್ನು ಸಲ್ಲಿಕೆ ಮಾಡಲಾಗಿದೆ. ಮತ್ತೆ ನೋಟಿಸ್ ನೀಡಿದ ಬಳಿಕ ನಾಮಪತ್ರ ಪರಿಶೀಲನೆ ಅವಧಿ ಮುಕ್ತಾಯವಾಗಿದ್ದರೂ ಅಫಿಡೆವಿಟ್ ಸಲ್ಲಿಕೆ ಮಾಡಲಾಗಿದೆ. ಏ.20ರ ಸಂಜೆ 7.38ಕ್ಕೆ ಬಾಂಡ್ ಪಡೆದು ಮತ್ತೊಂದು ಅಫಿಡವಿಟ್ ಅನ್ನು ಸಲ್ಲಿಸಿದ್ದಾರೆ. ಇದೂ ಸಹ ಕಾನೂನು ಬಾಹಿರ ಎಂದು ಕಾಂಗ್ರೆಸ್, ಆಪ್ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಈಗ ನಾಮಪತ್ರ ಅಂಗೀಕಾರವಾಗುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಂತೆ ಆಗಿದೆ.