ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ವೇಳೆ ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಶಿವಮೊಗ್ಗದಲ್ಲಿ (Savarkar photo) ಹೊತ್ತಿಕೊಂಡ ಕಿಡಿ ಈಗ ಇತರೆ ಜಿಲ್ಲೆಗಳಿಗೂ ವ್ಯಾಪಿಸಿದೆ. ಸ್ವಾತಂತ್ರ್ಯವೀರ ಸಾವರ್ಕರ್ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಕ್ಕರ್ ಕೊಡಲು ಶ್ರೀರಾಮಸೇನೆ ಸೇರಿ ವಿವಿಧ ಹಿಂದು ಸಂಘಟನೆಗಳು ತಯಾರಿ ನಡೆಸಿವೆ.
ವಿಜಯಪುರ ಜಿಲ್ಲೆಯಲ್ಲಿ ಶ್ರೀರಾಮಸೇನೆ ಘಟಕದ ವತಿಯಿಂದ ಗಣೇಶೋತ್ಸವದಂದು ಸಾವರ್ಕರ್ ಅಭಿಯಾನ ನಡೆಸಲು ಸಿದ್ಧತೆ ನಡೆದಿದೆ. ಎಲ್ಲೆಲ್ಲಿ ಗಣೇಶ ಮೂರ್ತಿಯನ್ನು ಕೂರಿಸಲಾಗುತ್ತದೆಯೋ ಅಲ್ಲಿ ಸಾವರ್ಕರ್ ಮೂರ್ತಿ ಅಥವಾ ಫೋಟೋ ಇಡುವ ಅಭಿಯಾನ ನಡೆಸಲಾಗುತ್ತಿದೆ.
ಸಾವರ್ಕರ್ ಫೋಟೋ ಜತೆ ಗಣೇಶ ಮಂಟಪದಲ್ಲಿ ಸಾವರ್ಕರ್ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೂ ನಿರ್ಧಾರ ಮಾಡಲಾಗಿದ್ದು, ವಿಜಯಪುರದ 250ಕ್ಕೂ ಅಧಿಕ ಗಣೇಶ ಮಂಟಪದಲ್ಲಿ ಸಾವರ್ಕರ್ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ಶ್ರೀರಾಮ ಸೇನೆ ಸದಸ್ಯರು ತಯಾರಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಫೋಟೊ ವೈರಲ್
ಬೆಳಗಾವಿಯಲ್ಲೂ ಗಣೇಶೋತ್ಸವ ಸಂದರ್ಭದಲ್ಲಿ ಸಾವರ್ಕರ್ ಫೋಟೊ ಹಾಕಲು ನಿರ್ಧರಿಸಲಾಗಿದೆ.
ಬೆಳಗಾವಿಯ ಸುಮಾರು 350ಕ್ಕೂ ಅಧಿಕ ಗಣೇಶೋತ್ಸವ ಮಂಡಳಿಗಳ ಮಂಟಪದಲ್ಲಿ ಸಾವರ್ಕರ್ ಫೋಟೋ ಇರಿಸಲಾಗುತ್ತದೆ. ಈ ಅಭಿಯಾನಕ್ಕೆ ಬೆಳಗಾವಿ ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಬೆಂಬಲ ನೀಡಿದ್ದಾರೆ.
ಸಾವರ್ಕರ್ ಫೋಟೋ ಜತೆಗೆ ಅವರ ಇತಿಹಾಸ, ಸಂದೇಶ ಸಾರುವ ಬರಹಗಳ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ. ಈ ಅಭಿಯಾನಕ್ಕೆ, ಸಾವರ್ಕರ್ ಹಾಗೂ ಬೆಳಗಾವಿಗೆ ಸಂಬಂಧವಿರುವ ಫೋಟೊ ಬಳಕೆ ಮಾಡಲಿಕೊಳ್ಳಲಾಗುತ್ತಿದೆ.
ಈ ಕುರಿತು ಶಾಸಕ ಅಭಯ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ಇಲಾಖೆ ಇದನ್ನು ತಡೆಯಲು ಮುಂದಾದರೆ ಏನು ಮಾಡುತ್ತೀರ ಎಂಬ ಪ್ರಶ್ನೆಗೆ, ಯಾರಾದರೂ ತಡೆಯಲು ಮುಂದಾದರೆ ಗಂಭೀರ ಪರಿಣಾಮ ಎದುರಿಸುತ್ತಾರೆ. ಯಾರದಾರೂ ಹರಿಯಲು ಮುಂದಾದರೆ ಅವರಿಗೆ ಏನು ಮಾಡಬೇಕು, ಆ ದಿವಸ ಮಾಡುತ್ತೇವೆ. ಬಹಳಷ್ಟು ಯುವಕ ಮಂಡಳಿಯವರು ಗಣೇಶೋತ್ಸವ ಮಂಟಪದಲ್ಲಿ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂದು ಹೇಳಿದ್ದಾರೆ. ಸಾವರ್ಕರ್ ಇಡೀ ದೇಶದ ನಾಯಕರು. ಜಗತ್ತಿಗೆ ಮಾರ್ಗದರ್ಶನ ನೀಡಿದಂತವರು. ಅವರ ಭಾವಚಿತ್ರ ಗಣೇಶೋತ್ಸವ ಮಂಡಳಿಯಲ್ಲಿ ಹಾಕಿ ಎಂದು ಹೇಳಿದ್ದೇವೆ. ವಿಪಕ್ಷದವರಿಗೆ ಎಷ್ಟು ಜ್ಞಾನ ಇದೆ ಅವರು ಅಭ್ಯಾಸ ಮಾಡಿಕೊಳ್ಳಲಿ. ಬ್ರಿಟಿಷ್ ಮ್ಯೂಸಿಯಂನಲ್ಲಿರುವ ದಾಖಲೆ ಪರಿಶೀಲಿಸಲಿ. ಸಾವರ್ಕರ್ ಇತಿಹಾಸ ಇನ್ನೊಮ್ಮೆ ಅಭ್ಯಾಸ ಮಾಡಲಿ, ಅವರ ಜೀವನಚರಿತ್ರೆ ಓದಲಿ ಎಂದಿದ್ದಾರೆ.
ಸಾವರ್ಕರ್‌ಗೆ ಆದ ಜೈಲು ಶಿಕ್ಷೆ ಯಾವ ಸ್ವಾತಂತ್ರ್ಯ ಸೈನಿಕರಿಗೂ ಆಗಿಲ್ಲ ಎಂದಿರುವ ಶಾಸಕ, ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಭಾವಚಿತ್ರ ಹಾಕಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾಳೆ ಹಿಂದೂಗಳು ಮುಸ್ಲಿಂ ಏರಿಯಾದಲ್ಲಿ ಓಡಾಡಬಾರದು ಎನ್ನುತ್ತಾರೆ. ಆಮೇಲೆ ಮುಸ್ಲಿಂ ಏರಿಯಾದಲ್ಲಿ ಹಿಂದೂ ಮನೆ ಇರಬಾರದು ಎನ್ನುತ್ತಾರೆ. ಬಳಿಕ ಅವರಿಗೆ ಪ್ರತ್ಯೇಕ ದೇಶ ಕೊಡಿ ಎನ್ನುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
1950ರ ವೇಳೆ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿದ್ದ ಸಾವರ್ಕರ್, ವಿಚಾರಣಾಧೀನ ಕೈದಿಯಾಗಿ 100 ದಿನ ಇಲ್ಲೇ ಇದ್ದರು. 1950ರ ಜುಲೈ 13ರಂದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಸಾವರ್ಕರ್ ಬಿಡುಗಡೆಯಾಗುತ್ತಿರುವ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎಲ್ಲೆಲ್ಲೂ ಸಾವರ್ಕರ್ ಅಭಿಯಾನ
ನಾಡಿನೆಲ್ಲೆಡೆ ಗಣೇಶೋತ್ಸವದ ಜತೆಗೆ ಸಾವರ್ಕರ್ ಫೋಟೊ ಅಭಿಯಾನ ಕಾವು ಪಡೆಯುತ್ತಿದ್ದು, ಫೋಟೊ ಜತೆಗೆ ಕನಿಷ್ಠ ಒಂದಾದರೂ ಭಾಷಣವನ್ನು ಏರ್ಪಡಿಸಲು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ಯುವಾ ಬ್ರಿಗೇಡ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲೆಲ್ಲೂ ಸಾವರ್ಕರ್ ಹೆಸರಿನ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈ ಕುರಿತು ಫೇಸ್‌ಬುಕ್‌ನಲ್ಲಿ ಚಕ್ರವರ್ತಿ ಸೂಲಿಬೆಲೆ ಪ್ರಕಟಿಸಿದ್ದಾರೆ.
ಸಾವರ್ಕರ್‌ರ ಕುರಿತ ಚರ್ಚೆ ಈಗ ಕಾವು ಪಡೆದುಕೊಂಡಿದೆ. ಈ ಬಾರಿ ಗಣೇಶೋತ್ಸವ ಸಾಮಾನ್ಯವಲ್ಲ, ಅದು ಸಾವರ್ಕರ್ ಗಣೇಶೋತ್ಸವ. ನಾವು ಬರಿಯ ಪುಸ್ತಕಗಳನ್ನು, ವಿಡಿಯೊಗಳನ್ನಷ್ಟೆ ತಲುಪಿಸುವ ಕೆಲಸ ಮಾಡುತ್ತಿಲ್ಲ. ಸಾವರ್ಕರ್ ಕುರಿತಂತೆ ಮಾತನಾಡಬಲ್ಲ ತರುಣರಿಗೂ ತಾಲೀಮು ನೀಡುತ್ತಿದ್ದೇವೆ. ರಾಜ್ಯದಾದ್ಯಂತ ಈ ವಾರಾಂತ್ಯ ಮತ್ತು ಮುಂದಿನ ವಾರಾಂತ್ಯಗಳಲ್ಲಿ ಆಸಕ್ತ ತರುಣ-ತರುಣಿಯರನ್ನು ಒಟ್ಟಿಗೆ ಸೇರಿಸಿ ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ಪರಿಚಯಿಸುತ್ತಾ ಸಾವರ್ಕರ್ ಕುರಿತಂತಹ ವಿಡಿಯೊ, ಪುಸ್ತಕ ಇತ್ಯಾದಿಗಳ ಮೂಲಕ ಅವರನ್ನು ಸಂದೇಶ ಹೊತ್ತೊಯ್ಯಲು ಸಿದ್ಧಗೊಳಿಸುತ್ತಿದ್ದೇವೆ.
ಈ ಬಾರಿಯ ಚೌತಿಯ ಪೆಂಡಾಲಿನಲ್ಲಿ ಎಲ್ಲ ಕಾರ್ಯಕ್ರಮಗಳೊಂದಿಗೆ ಸಾವರ್ಕರ್ ಕುರಿತ ಭಾಷಣದ್ದೂ ಒಂದು ಕಾರ್ಯಕ್ರಮವಿರಲಿ. ನಾಡಿನ ಮೂಲೆ-ಮೂಲೆಯಲ್ಲಿ ತರುಣರು ರಾಷ್ಟ್ರೀಯತೆಯ ವಿಚಾರವನ್ನು ಮುಟ್ಟಿಸಲು ಕಾತರರಾಗಿದ್ದರೆ. ಆಸಕ್ತ ತರುಣರು ಕಾರ್ಯಾಗಾರದಲ್ಲಿ ಭಾಗವಹಿಸಲು ಈ ಸಂಖ್ಯೆಗಳನ್ನು ಸಂಪರ್ಕಿಸಿ ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | ಸಾವರ್ಕರ್ ವಿಚಾರದಲ್ಲಿ ಕಾನೂನುಬದ್ಧವಾಗಿರಿ: ಪ್ರತಿಪಕ್ಷಗಳಿಗೆ ಬುದ್ಧಿ ಹೇಳಿದ ಸಿಎಂ ಬೊಮ್ಮಾಯಿ