ಮೈಸೂರು: ರಾಜ್ಯದಲ್ಲಿ ಸಾವರ್ಕರ್ ಫ್ಲೆಕ್ಸ್ ವಿವಾದ ತಾರಕಕ್ಕೇರುತ್ತಿರುವಾಗಲೇ (Savarkar’s Rath Yatra) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ವೀರ ಸಾವರ್ಕರ್ ಹೆಸರಲ್ಲಿ ಸರಣಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದ್ದು, ರಾಜ್ಯಾದ್ಯಂತ ಸಾವರ್ಕರ್ ಅಭಿಯಾನ ನಡೆಸಲು ನಿರ್ಧಾರ ಮಾಡಲಾಗಿದೆ. ಇದರ ಮೊದಲ ಭಾಗವಾಗಿ ಮೈಸೂರಲ್ಲಿ ಸಾವರ್ಕರ್ ರಥಯಾತ್ರೆ ನಡೆಸಲಾಗುತ್ತಿದೆ.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಬಳಿ ಬೆಳಗ್ಗೆ 11.೩೦ಕ್ಕೆ ರಥಯಾತ್ರೆಗೆ ಬಿಎಸ್‌ವೈ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಾರು ಹಿಂದು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. 4 ವಿಧಾನಸಭಾ ಕ್ಷೇತ್ರದ 30 ಕಿಲೋಮೀಟರ್‌ವರೆಗೆ ರಥಯಾತ್ರೆ ಕ್ರಮಿಸಲಿದೆ.
ರಥಯಾತ್ರೆ ರೂಟ್ ಮ್ಯಾಪ್ ಹೀಗಿದೆ
ಅರಮನೆಯ ಕೋಟೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭಗೊಳ್ಳುವ ರಥಯಾತ್ರೆ ಬನ್ನೂರು ರಸ್ತೆ ಮಾರ್ಗವಾಗಿ ಸಂಚಾರ ಮಾಡಲಿದೆ. ಬಳಿಕ ಯರಗನಹಳ್ಳಿ ವೃತ್ತ, ರಾಜ್‌ಕುಮಾರ್ ರಸ್ತೆ ಮೂಲಕ ಸಾಗಿ ಗಾಯಿತ್ರಿಪುರಂ ಬಳಸಿ ಕ್ಯಾತಮಾರನಹಳ್ಳಿ ಟೆಂಟ್ ವೃತ್ತ ಪ್ರವೇಶಿಸಲಿದೆ.
ನಂತರ ಉದಯಗಿರಿ ರಸ್ತೆ ಮುಖಾಂತರ ರಾಜೇಂದ್ರ ನಗರದ 1008 ಗಣಪತಿ ವೃತ್ತ, ಎಲ್.ಐ.ಸಿ ವೃತ್ತ, ಸಯ್ಯಾಜಿರಾವ್ ರಸ್ತೆ, ತಿಲಕ್‌ನಗರದಿಂದ ಬಂದು ಶನಿ ಮಹಾತ್ಮ ವೃತ್ತ, ಬಂಬೂಬಜಾರ್, ಪಡುವಾರಳ್ಳಿ ಬಳಸಿ ಮಾತೃಮಂಡಳಿ ವೃತ್ತದಲ್ಲಿ ರಥಯಾತ್ರೆ ಸಂಚಾರಿಸಲಿದೆ.
ಹುಣಸೂರು ರಸ್ತೆ, ಜೆಸಿಇ ಕಾಲೇಜು ರಸ್ತೆ, ಶಾರದಾದೇವಿನಗರ, ಹೈಟೆನ್ ರಸ್ತೆ, ರಾಮಕೃಷ್ಣ ಪರಮಹಂಸ ವೃತ್ತ, ವಿವೇಕಾನಂದ ವೃತ್ತ , ಡಿ.ಸಿ. ವೃತ್ತ , ನೃಪತುಂಗ ರಸ್ತೆ , ಪಂಚಮಂತ್ರ ಗಲ್ಲಿ ದಾಟಿ ಅಕ್ಷಯ ಭಂಡಾರ್, ನ್ಯೂ ಕಾಂತ ರಾಜೇ ಅರಸ್ ರಸ್ತೆ – ಜೆ.ಎಲ್.ಬಿ. ರಸ್ತೆ, ಚಾಮುಂಡಿಪುರಂ ವೃತ್ತದಿಂದ ಅಗ್ರಹಾರದಲ್ಲಿ ರಥಯಾತ್ರೆ ಮುಕ್ತಾಯವಾಗಲಿದೆ.
ಬಿಗಿ ಭದ್ರತೆ
ಸಾವರ್ಕರ್ ರಥಯಾತ್ರೆ ಹಿನ್ನೆಲೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರೀಯ ದಳದಿಂದ ವೇದಿಕೆ ಬಳಿ ಇಂಚಿಂಚು ಜಾಗ ಪರಿಶೀಲನೆ ಮಾಡಲಾಗುತ್ತಿದೆ.
ಇದನ್ನೂ ಓದಿ | ವಿಜಯಪುರ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೊ, ಮುತ್ತಿಗೆ; 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಶ