ನವದೆಹಲಿ: ಕೃಷ್ಣಾನದಿ ನೀರು ಹಂಚಿಕೆ ಸಂಬಂಧ ಪ್ರಕರಣ ವಿಚಾರಣೆ ಇಂದು(ಮಂಗಳವಾರ) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಕರ್ನಾಟಕದ ಪರವಾಗಿ ವಕೀಲರು ಸುಮಾರು 1.10 ಗಂಟೆಯವರೆಗೆ ವಾದ ಮಂಡಿಸಿದರು. ಅಂತಿಮವಾಗಿ ವಿಚಾರಣೆಯನ್ನು ನ್ಯಾಯಾಲಯವು ನಾಳೆಗೆ (ಜ.11) ಮುಂದೂಡಿದೆ(Krishna Water Dispute).
ಕೃಷ್ಣ ಜಲವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಐತೀರ್ಪುಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
ಕರ್ನಾಟಕದ ಪರವಾಗಿ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಸುದೀರ್ಘವಾಗಿ ವಾದ ಮಂಡಿಸಿದರು. ಹಂಚಿಕೆಯಾದ ನೀರಿನ ಸದ್ಭಳಕೆ ಮಾಡಲು ಕರ್ನಾಟಕವು ಈಗಾಗಲೇ 14,955 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲವೆ ಜಾಗ ನಿರ್ಮಾಣ ಮಾಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ 130 ಟಿಎಂಸಿ ನೀರಿನ ಬಳಕೆಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಲಾಗಿದೆ. ಈ ಸೌಕರ್ಯವು ವ್ಯರ್ಥವಾಗಬಾರದು ಎಂದು ಕೋರ್ಟ್‌ಗೆ ಅವರು ಮನವಿ ಮಾಡಿದರು.
ಕಾವೇರಿ ಜಲವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳು ಇದ್ದಾಗ್ಯೂ, ನ್ಯಾಯಾಲಯವೇ ಅಂತಾರಾಜ್ಯ ಜಲ ಹಂಚಿಕೆ ಕಾಯ್ದೆಯ ಅನ್ವಯ ಗೆಜೆಟ್ ಪ್ರಕಟಣೆಗೆ ಅವಕಾಶ ನೀಡಿತ್ತು. ಅದೇ ಪರಿಸ್ಥಿತಿಯು ಈಗ ಕೃಷ್ಣಾ ಜಲ ವಿವಾದದಲ್ಲಿ ಇದೆ ಎಂದು ವಾದ ಮಂಡಿಸಿದರು.
ಇದನ್ನೂ ಓದಿ | ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಮಾನ್ಯತೆ: ದಶಕದ ಬೇಡಿಕೆಗೆ ಒಪ್ಪಿದ ಕೇಂದ್ರ ಸರ್ಕಾರ