Site icon Vistara News

SC ST Reservation: ಶಿಕಾರಿಪುರದಲ್ಲಿ ಭುಗಿಲೆದ್ದ ಎಸ್‌ಸಿ-ಎಸ್‌ಟಿ ಮೀಸಲಾತಿ ಹೋರಾಟ: ಬಿಎಸ್‌ವೈ ಮನೆ ಮೇಲೆ ಕಲ್ಲು, ಚಪ್ಪಲಿ ತೂರಾಟ

Sc ST reservation agitation erupts in Shikaripura stones slippers hurled at BS Yediyurappa house SCST reservation updates

ಶಿವಮೊಗ್ಗ: ಎಸ್‌ಸಿ-ಎಸ್‌ಟಿ ಮೀಸಲಾತಿ (SC ST Reservation) ಜಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಶಿಕಾರಿಪುರದಲ್ಲಿ ಲಂಬಾಣಿ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮನೆ ಮುಂದೆ ಬಂದ ಪ್ರತಿಭಟನಾಕಾರರು ಅವರ ಮನೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಶಿಕಾರಿಪುರದಲ್ಲಿ ಬಂಜಾರ ಸಮಾಜದಿಂದ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ತಾಲೂಕು ಬಂಜಾರ ಸಮಾಜ ವತಿಯಿಂದ ಪ್ರತಿಭಟನೆ ನಡೆದಿದ್ದು, ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯದವರು ತೀವ್ರ ಆಕ್ರೋಶಗೊಂಡಿದ್ದಾರೆ. ಸದಾಶಿವ ವರದಿ ಜಾರಿಗೊಳಿಸಿದ್ದಕ್ಕೆ ಪ್ರತಿಭಟನಾಕಾರರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಮನೆ ಮುಂದೆ ಮುತ್ತಿಗೆ ಹಾಕಿರುವ ಪ್ರತಿಭಟನಾಕಾರರು

ಇದನ್ನೂ ಓದಿ: Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಶಿಕಾರಿಪುರದ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ ಭಾವಚಿತ್ರ ದಹಿಸಿ ಆಕ್ರೋಶವನ್ನು ಹೊರಹಾಕಲಾಗಿದೆ. ನೂತನ ಮೀಸಲಾತಿ ರದ್ದುಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ‌ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ

ಇದೇ ವೇಳೆ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರು ಬಿ.ಎಸ್. ಯಡಿಯೂರಪ್ಪ ‌ಅವರ ನಿವಾಸದತ್ತಲೂ ತೆರಳಿದ್ದಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಕಾನಕೇರಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಿಎಸ್‌ವೈ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಜತೆಗೆ ಚಪ್ಪಲಿಯನ್ನೂ ತೂರಿ ಆಕ್ರೋಶ ಹೊರಹಾಕಿದ್ದಾರೆ. ಈ ಮನೆ ಗೃಹ ಪ್ರವೇಶಕ್ಜೆ ಸಿದ್ಧಗೊಂಡಿತ್ತು, ಮನೆಯ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

ಪ್ರತಿಭಟನಾನಿರತರನ್ನು ಚದುರಿಸುತ್ತಿರುವ ಪೊಲೀಸರು.

ಈ ಹಿನ್ನೆಲೆಯಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆ ತಾರಕಕ್ಕೇರಿದೆ. ಒಂದು ಹಂತದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ, ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದಾರೆ. ಪೊಲೀಸರ ಸೂಚನೆ ಧಿಕ್ಕರಿಸಿ, ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ.

ಪೊಲೀಸರಿಗೆ ಗಾಯ

ಉದ್ರಿಕ್ತಗೊಂಡ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಕಲ್ಲು ತೂರಾಟದಿಂದ ಕೆಲವು ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ- ಗಾಯಗಳಾಗಿವೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಹೆಚ್ಚಿನ ಸಿಬ್ಬಂದಿಯನ್ನು ರವಾನೆ ಮಾಡಿದ್ದಾರೆ.

ಇದನ್ನೂ ಓದಿ: ‌Karnataka Congress: ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ರಾಜೀನಾಮೆ: ಸಿದ್ದರಾಮಯ್ಯ ಜತೆಗೆ ಮಾತುಕತೆ

ಸೀರೆ, ಉಡುಗೊರೆಗಳನ್ನು ಬಿಸಾಡಿ ಆಕ್ರೋಶ; ಲಾಠಿ ಚಾರ್ಜ್‌

ಫೆ. 27ರಂದು ನಡೆದಿದ್ದ ಯಡಿಯೂರಪ್ಪ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸೀರೆ, ಮತ್ತಿತರ ವಸ್ತುಗಳನ್ನು ಉಡುಗೊರೆಯಾಗಿ ಕೊಡಲಾಗಿತ್ತು. ಈ ವಸ್ತುಗಳನ್ನೆಲ್ಲವನ್ನೂ ತಂದಿದ್ದ ಪ್ರತಿಭಟನಾಕಾರರ ಮತ್ತೊಂದು ಗುಂಪು ಅವುಗಳನ್ನು ಬಿಎಸ್‌ವೈ ನಿವಾಸದ ಮೇಲೆ ಎಸೆದು ಆಕ್ರೋಶವನ್ನು ಹೊರಹಾಕಿದೆ. ಈ ವೇಳೆ ಪೊಲೀಸರ ಮೇಲೆಯೂ ಹಲ್ಲೆ ನಡೆಸಲಾಗಿದ್ದು, ಚಪ್ಪಲಿಗಳ ತೂರಲಾಗಿದೆ. ಯಡಿಯೂರಪ್ಪ ಅವರ ಫ್ಲೆಕ್ಸ್‌ಗಳನ್ನು ಹರಿದು ಹಾಕಲಾಗಿದೆ. ಮೂರು ಸರ್ಕಲ್‌ನಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ದ್ವಂಸ ಮಾಡಲಾಗಿದೆ. ಗಲಾಟೆಯಲ್ಲಿ ವೃದ್ಧೆ ಸೇರಿದಂತೆ ಕೆಲವರು ಅಸ್ವಸ್ಥರಾಗಿದ್ದಾರೆ. ಶಿಕಾರಿಪುರದಲ್ಲಿಗ ಉದ್ರಿಕ್ತ ವಾತಾವರಣ ಉಂಟಾಗಿದ್ದು, ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ ಮಾಡಲಾಗಿದೆ. ಅಲ್ಲದೆ, 144 ಸೆಕ್ಷನ್ ಜಾರಿ ಮಾಡಲಾಗಿದೆ.

ಒಬ್ಬ ವಶಕ್ಕೆ; ವಿಚಾರಣೆ ಆರಂಭ

ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಹಿನ್ನೆಲೆಯಲ್ಲಿ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ಸುರೇಶ ನಾಯ್ಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಣೆ ನಡೆಸಲಾಗುತ್ತಿದೆ.

Exit mobile version