ಬೆಳಗಾವಿ: ಎಸ್‌ಸಿ-ಎಸ್‌ಟಿ ಮೀಸಲಾತಿ (SC ST Reservation) ಜಾರಿಯಲ್ಲಿ ಒಳ ಮೀಸಲಾತಿ ನಿಗದಿಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಎಸ್‌ಸಿ ಸಮುದಾಯದ ಒಳಮೀಸಲಾತಿಗೆ ಬಂಜಾರ ಸಮುದಾಯದವರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಬೆಳಗಾವಿಯಲ್ಲಿ ಕುಡಚಿ ಶಾಸಕ, ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್‌ಗೆ ಸಮುದಾಯದ ಜನರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜೀವ್, ಪರಿಶಿಷ್ಟ ಜಾತಿ ಎಂದರೆ ಏನು ಎಂದು ಮೊದಲು ತಿಳಿದುಕೊಳ್ಳಿ ಎಂದು ಸಂವಿಧಾನದ ಪಾಠ ಮಾಡಿದ್ದಾರೆ.
ಬೆಳಗಾವಿಯಲ್ಲಿ ನಿರ್ಮಿಸಿರುವ ಬಂಜಾರ ಸಮುದಾಯದ ಭವನ ಉದ್ಘಾಟನೆಗೆ ಬಂದಿದ್ದ ಪಿ. ರಾಜೀವ್ ಅವರ ಬಳಿ ಬಂಜಾರ ಸಮುದಾಯದ ಮುಖಂಡರು ಬಂದು ಒಳ ಮೀಸಲಾತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಾತನಾಡಿದ ರಾಜೀವ್, ಪರಿಶಿಷ್ಟ ಜಾತಿ ಎಂದರೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಕ್ಕೆ ಒಂದು ಗ್ರೂಪ್ ಮಾಡಿದ್ದಾರೆ. 97 ಜಾತಿ ಸೇರಿ ಎಡ, ಬಲ ಮತ್ತು ಅಲೆಮಾರಿ ಗುಂಪು ಮಾಡಿದ್ದಾರೆ. ನಾಲ್ಕೇ ಜಾತಿಗಳಿಗೆ ನಾಲ್ಕೂವರೆ ಪರ್ಸೆಂಟ್ ಮೀಸಲಾತಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Bengaluru Honeytrap Case: ಬೆಂಗಳೂರಲ್ಲಿ ಹುಡುಗಿ ಛೂ ಬಿಟ್ಟು ಹನಿಟ್ರ್ಯಾಪ್; ಸುಲಿಗೆಕೋರರ ಬಂಧನ
ಸದಾಶಿವ ಆಯೋಗದಲ್ಲಿ ಮೂರು ಪರ್ಸೆಂಟ್ ಶಿಪಾರಸು ಮಾಡಲಾಗಿತ್ತು. ನಮ್ಮದು ಬೇಡಿಕೆ ಇದ್ದಿದ್ದು ಕೇವಲ ಎರಡು ಪರ್ಸಂಟ್ ಮಾತ್ರ. ಆದರೆ, ಈ ಬಗ್ಗೆ ಯಾವುದನ್ನೂ ತಿಳಿದುಕೊಳ್ಳದೆ ಪ್ರತಿಭಟನೆ, ವಿರೋಧವನ್ನು ಮಾಡಲಾಗುತ್ತಿದೆ. ನಮ್ಮ ರಾಜ್ಯ ಸರ್ಕಾರ ಎಲ್ಲರ ಪರವಾಗಿದೆ. ಮುಖ್ಯಮಂತ್ರಿಯವರು ಈ ಬಗ್ಗೆ ಎಲ್ಲವನ್ನೂ ಪರಿಶೀಲನೆ ನಡೆಸಿಯೇ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಬಂಜಾರ ಸಮುದಾಯವನ್ನು ಎಸ್‌ಸಿ ಮೀಸಲಾತಿಯಿಂದ ಕೈ ಬಿಡುವ ಸಂಚು ನಡೆದಿದೆ. ಇದಕ್ಕೆ ಲಿಖಿತವಾಗಿ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಅನ್ನೋ ಬೇಡಿಕೆ ಇತ್ತು. ಹಿಂದಿನ ಸರ್ಕಾರ ಇದಕ್ಕೆ ಉತ್ತರ ಕೊಡುವ ಕೆಲಸ ಮಾಡಲಿಲ್ಲ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಫೆ. 16ರಂದು ಪತ್ರ ಬರೆದಿದ್ದರು. ಬಂಜಾರಾ, ಕೊರಚ, ಕೊರಮ, ಬೋವಿ ಜನಾಂಗದವರು ಶಾಶ್ವತವಾಗಿ ಎಸ್‌ಸಿ ಪಟ್ಟಿಯಲ್ಲಿಯೇ ಇರುತ್ತಾರೆ. ಇವರನ್ನು ಈ ಪಟ್ಟಿಯಿಂದ ಕೈಬಿಡುವ ಪ್ರಸ್ತಾವನೆ ಇಲ್ಲ. ಈ ಕೆಲಸವನ್ನು ಯಾರೂ ಮಾಡಿರಲಿಲ್ಲ. ಬೊಮ್ಮಾಯಿ ಅವರು ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: SC ST Reservation : ಬಾಗಲಕೋಟೆ ತಾಂಡಾಗಳಲ್ಲೂ ಆಕ್ರೋಶ; ಬಿಜೆಪಿ ಧ್ವಜ ತೆರವು, ಪ್ರವೇಶ ನಿರಾಕರಿಸಿ ಪೋಸ್ಟರ್
ಸುಮ್ಮನೆ ಯಾರೋ ಗೊಂದಲ ಸೃಷ್ಟಿ ಮಾಡಲು ಹೊರಟಿದ್ದಾರೆ. ಅವರಿವರ ಮನೆ ಮೇಲೆ ಕಲ್ಲು ಒಗೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಯಾರೂ ಕೂಡ ಗೊಂದಲಕ್ಕೆ ಒಳಗಾಗಬಾರದು. ನಮ್ಮ ಬೇಡಿಕೆಯನ್ನು ಬೊಮ್ಮಾಯಿ ಅವರು ಈಡೇರಿಸಿದ್ದಾರೆ ಎಂದು ರಾಜೀವ್ ಮೀಸಲಾತಿ ಗೊಂದಲವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.