Site icon Vistara News

ಪೊಲೀಸ್‌ ವರ್ಗಾವಣೆಯಲ್ಲೂ ಲಂಚ : ಬಿಜೆಪಿ ಶಾಸಕನ ಬಾಯಿಂದಲೇ ಹೊರಬಂದ ಸತ್ಯ !

ಕಾಫಿ ಮಂಡಳಿ

ಚಿಕ್ಕಮಗಳೂರು : ರಾಜ್ಯದಲ್ಲಿ ಈಗಾಗಲೆ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಂಕ ಪರೀಕ್ಷೆಯಲ್ಲಿ ಹಗರಣ, ಸರ್ಕಾರಿ ಗುತ್ತಿಗೆಯಲ್ಲಿ ಹಗರಣ ಸೇರಿ ಅನೇಕ ವಿವಾದಗಳಿವೆ. ಇದೀಗ, ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ವರ್ಗಾವಣೆಯಲ್ಲೂ ಅಪಾರ ಪ್ರಮಾಣದ ಲಂಚ ವ್ಯವಹಾರ ನಡೆಯುತ್ತಿದೆ ಎನ್ನುವುದಕ್ಕೆ ಸ್ವತಃ ಬಿಜೆಪಿ ಶಾಸಕರೇ ಸಾಕ್ಷಿ ನೀಡಿದ್ದಾರೆ. ಅದೂ, ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್‌ ಮಹಾನಿರ್ದೇಶಕರ ವಿರುದ್ಧವೇ ಆರೋಪ ಮಾಡಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಪೊಲೀಸ್‌ ಠಾಣೆಯಲ್ಲಿ ಹೊಸದಾಗಿ ಇನ್ಸ್‌ಪೆಕ್ಟರ್‌ ಆಗಿ ಚಾರ್ಚ್‌ ತೆಗೆದುಕೊಂಡಿದ್ದ ರವೀಶ್‌ ಅವರಿಗೆ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಕರೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಡೆದ ಮಾತು ಧ್ವನಿಮುದ್ರಣವಾಗಿದೆ.

ಈ ಠಾಣೆಗೆ ನೀನು ಏಕೆ ಬಂದಿದ್ದೀಯ? ಎಂದು ರವೀಶ್‌ ಅವರಿಗೆ ಕುಮಾರಸ್ವಾಮಿ ಏಕವಚನದಲ್ಲಿ ಪ್ರಶ್ನಿಸಿದ್ದಾರೆ. ನೀನು ಈ ಠಾಣೆಗೆ ಬರುವುದು ಬೇಡ ಎಂದು ಹೇಳಿದ್ದೆ. ಈಗಲೇ ಹೊರಟುಹೋಗು ಎಂದಿದ್ದಾರೆ. ಇದಕ್ಕೆ ರವೀಶ್‌ ಪ್ರತಿಕ್ರಿಯಿಸಿ, ಐಜಿ ಸಾಹೇಬರು ಹೇಳಿದರು ಅದಕ್ಕೇ ಬಂದೆ ಎಂದಿದ್ದಾರೆ. ಇದಕ್ಕೆ ಕೆಂಡಾಮಂಡಲವಾದ ಕುಮಾರಸ್ವಾಮಿ, ಯಾರೊ ಐಜಿ? ಇಲ್ಲಿಗೆ ನಾನೆ ಐಜಿ. ʼಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯ? ಯಾರಿಗೆ ಎಷ್ಟು ಕೊಟ್ಟು ಇಲ್ಲಿಗೆ ಬಂದಿದ್ದೀಯ ಅಂತ ನನಗೆ ಗೊತ್ತು. ನೀನು ಬಂದ್ರೆ ಒದ್‌ ಓಡಿಸ್ತೀನಿʼ. ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರವೀಶ್‌, ನಾನು ಯಾರಿಗೂ ಕೊಟ್ಟು ಬಂದಿಲ್ಲ ಸರ್‌ ಎಂದಿದ್ದಾರೆ.

ರಾಜ್ಯದಲ್ಲಿ ವರ್ಗಾವಣೆಯಲ್ಲಿ ಲಂಚ ನಡೆಯುತ್ತಿರುವುದು ಹಿಂದಿನಿಂದಲೂ ತಿಳಿದಿದೆ. ಆದರೆ ಪೊಲೀಸ್‌ ಇಲಾಖೆಯಲ್ಲಿ ಅದರಲ್ಲೂ ಸ್ವತಃ ಐಜಿಯವರ ಮೇಲೆ ಶಾಸಕರೊಬ್ಬರು ಆರೋಪ ಮಾಡಿರುವುದು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ : ದಿಲ್ಲಿಯಲ್ಲಿ ಸಂತೋಷ್‌ ಪಾಟೀಲ್‌ ಪತ್ರಿಕಾಗೋಷ್ಠಿ ನಡೆಸಲು ವ್ಯವಸ್ಥೆ ಮಾಡಿದ್ದು ಯಾರು?

ಆಡಿಯೋ ಮಾತುಕತೆಯ ಸಂಪೂರ್ಣ ವಿವರ

ಶಾಸಕ : ಹಲೋ, ಯಾರಪ್ಪ ಇದು ನಂಬರ್?‌ ಇನ್ಸ್‌ಪೆಕ್ಟರ್‌ : ನಾನು ರವೀಶ್‌ ಮಾತಾಡೋದು ಸರ್‌ ಶಾಸಕ : ಈಗ ಎಲ್ಲಿದ್ದೀಯಪ್ಪ ನೀನು? ಇನ್ಸ್‌ಪೆಕ್ಟರ್‌: ಸ್ಟೇಷನ್‌ ಅಲ್ಲಿ ಇದ್ದೀನಿ ಸಾರ್‌ ಶಾಸಕ : ಇಲ್ಲಿಗೆ ಬರಬೇಡ ಅಂದಿದ್ದೆ ನಾನು ಇನ್ಸ್‌ಪೆಕ್ಟರ್‌: ಐಜಿ ಸಾರ್‌ ಚಾರ್ಜ್‌ ತಗೊ ಅಂದ್ರ ಶಾಸಕ : ಏಯ್‌..ಹೋಗೊಲೇ..ವಾಪಸ್ಸು ಹೋಗು, ನಾಳೆನೇ ಸಸ್ಪೆಂಡ್‌ ಮಾಡಿಸ್ತೀನಿ ನೋಡು , ಇನ್ಸ್‌ಪೆಕ್ಟರ್‌: ನಾಳೆ ಬಂದು ನಿಮ್ಮನ್ನ ಕಾಣ್ತೀನಿ ಸರ್‌ ಶಾಸಕ : ಬರಬೇಡ, ನೀನು ಯಾರಿಗೆ ಎಷ್ಟು ಕೊಟ್ಟು ಇಲ್ಲಿಗೇ ಬಂದಿದ್ದೀ ಅಂತ ಗೊತ್ತು. ನೀನು ಬಂದ್ರೆ ಒದ್‌ ಓಡಿಸ್ತೀನಿ. ಇನ್ಸ್‌ಪೆಕ್ಟರ್‌: ಇಲ್ಲ ಯಾರರಿಗೂ ಏನೂ ಕೊಟ್ಟಿಲ್ಲ. ಐಜಿ ಹೇಳಿದ್ರು ಅಷ್ಟೇ ಶಾಸಕ : ಯಾವನೋ ಐಜಿ ? ಮೂಡಿಗೆರೆಗೆ ನಾನೇ ದೊಡ್ಡೋನು. ಮಾರ್ಯಾದೆಯಿಂದ ವಾಪಸ್ಸು ಹೋಗು.

ಎಂಪಿ ಕುಮಾರಸ್ವಾಮಿ ಹಿಗ್ಗಾಮುಗ್ಗಾ ಮಾತನಾಡುವುದು ಇದೇ ಮೊದಲಲ್ಲ. ಈ ಹಿಂದೆ ಸಂಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿಯೂ ಅವರು ಬಾಯಿಗೆ ಬಂದಂತೆ ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿತ್ತು.

ಇದನ್ನೂ ಓದಿ | ಏಳು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ 705 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ

Exit mobile version