ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮೀಸಲು ಪ್ರಮಾಣವನ್ನು ಶೇ. 15ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಏರಿಸುವ ಮಹತ್ವದ ತೀರ್ಮಾನಕ್ಕೆ ಕಾರಣವಾಗಿದ್ದು ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ. ಸಾಮಾಜಿಕ ಹಂದರಗಳು, ಜಾತಿ, ಒಳಜಾತಿ, ಉಪಜಾತಿಗಳನ್ನೆಲ್ಲ ಆಳವಾಗಿ ಅಧ್ಯಯನ ನಡೆಸಿ ನಾಗಮೋಹನ್ ದಾಸ್ ಅವರು ನೀಡಿದ ವರದಿಯ ಆಧಾರದಲ್ಲೇ ಈಗ ಮೀಸಲು ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವರದಿಗೆ ರಾಜ್ಯ ಸರಕಾರ ಮೋಕ್ಷ ನೀಡಿದ್ದಲ್ಲದೆ, ಅದರ ಆಧಾರದಲ್ಲೇ ಮೀಸಲನ್ನು ಹೆಚ್ಚಿಸಿರುವುದು ನ್ಯಾಯಮೂರ್ತಿ ನಾಗಮೋಹನದಾಸ್ ಅವರಿಗೆ ಭಾರಿ ಸಂತೋಷ ಉಂಟು ಮಾಡಿದೆ. ಈ ನಿರ್ಧಾರದಿಂದ ತನಗೆ ಖುಷಿಯಾಗಿದೆ ಎಂದು ಅವರು ವಿಸ್ತಾರ ನ್ಯೂಸ್ ಜತೆ ಹೇಳಿಕೊಂಡಿದ್ದಾರೆ. ರಾಜ್ಯ ಸರಕಾರ ಈಗ ನಾಗಮೋಹನ್ ದಾಸ್ ವರದಿಯ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು ಅದರ ಅನುಷ್ಠಾನಕ್ಕೆ ಮುಂದಾಗಿದೆ. ಈ ನಡುವೆ, ಮೀಸಲಾತಿ ಹೆಚ್ಚಳದಿಂದ ಆಗಬಹುದಾದ ಇತರ ಪರಿಣಾಮಗಳು, ಮೀಸಲು ಪ್ರಮಾಣ ಶೇಕಡಾ ೫೦ಕ್ಕಿಂತ ಹೆಚ್ಚಾದರೆ ಎದುರಿಸಬೇಕಾಗಿ ಬರಬಹುದಾದ ಕಾನೂನಾತ್ಮಕ ಹೋರಾಟದ ವಿಚಾರವೂ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸ್ಪಷ್ಟತೆ ಕೊಟ್ಟಿದ್ದಾರೆ.
ಎಲ್ಲರಿಗೂ ಅಭಿನಂದನೆ ಹೇಳಿದ ಜ. ನಾಗಮೋಹನ್ ದಾಸ್
ನನ್ನ ವರದಿಯನ್ನು ಜಾರಿಗೆ ತರುವ ಸರ್ಕಾರದ ನಿರ್ಧಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗೆ ನನ್ನ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಿದ ವರದಿಯನ್ನು ಜಾರಿಗೆ ತರಲು ಸರ್ವ ಪಕ್ಷಗಳು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಕ್ಕೆ ವೈಯಕ್ತಿಕವಾಗಿ ಎಲ್ಲಾ ಪಕ್ಷಗಳನ್ನು ಅಭಿನಂದಿಸುತ್ತೇನೆ ಎಂದು ನಿವೃತ್ತ ನ್ಯಾ. ನಾಗಮೋಹನ್ ದಾಸ್ ವಿಸ್ತಾರ ನ್ಯೂಸ್ ಜತೆ ಮಾತನಾಡುತ್ತಾ ಹೇಳಿದರು.
ಜನಸಂಖ್ಯೆ ಹೆಚ್ಚಾಗಿದೆ, ಮೀಸಲಾತಿ ಹೆಚ್ಚಾಗಿಲ್ಲ
ನಾನು 2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಂಖ್ಯೆ ಎಷ್ಟಿತ್ತು ಎನ್ನುವ ಆಧಾರದಲ್ಲಿ ವರದಿಯನ್ನು ಸಿದ್ಧಪಡಿಸಿದ್ದೇನೆ. 1947ರಲ್ಲಿ ಸ್ವಾತಂತ್ರ್ಯ ಬಂದಾಗ ಪರಿಶಿಷ್ಟ ಜಾತಿ ಹಾಗೂ ಪಂಗಡಗಳನ್ನು ಒಟ್ಟಿಗೆ ಸೇರಿಸಿ ಮೀಸಲು ನೀಡಲಾಗಿತ್ತು. ಸಂವಿಧಾನ ಜಾರಿಗೆ ಬಂದ ಬಳಿಕ ಪರಿಶಿಷ್ಟ ಜಾತಿಗೆ ಶೇಕಡಾ 15 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡಾ 3ರಂತೆ ಪ್ರತ್ಯೇಕ ಮೀಸಲಾತಿ ತರಲಾಯಿತು. ಮುಂದೆ ಏಕೀಕರಣವಾದಾಗ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮಂಗಳೂರು, ಕೊಡಗು ಸೇರಿದಂತೆ ಅನೇಕ ಪ್ರಾಂತ್ಯಗಳು ರಾಜ್ಯವನ್ನು ಸೇರಿವೆ. ಹೀಗಾಗಿ ರಾಜ್ಯದಲ್ಲಿ ಜಾತಿಗಳ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಕೆಲವು ಜಾತಿಗಳನ್ನು ಇತರ ಹಿಂದುಳಿದ ವರ್ಗ(ಒಬಿಸಿ)ದಿಂದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗಿದೆ. ಆದರೆ ಮೀಸಲಾತಿ ಪ್ರಮಾಣ ಮಾತ್ರ ಅಷ್ಟೇ ಇದೆ. ಹೀಗಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಡಿ ಬರುವ ಜನರ ಒಟ್ಟಾರೆ ಜನಸಂಖ್ಯೆ ತುಂಬಾ ಹೆಚ್ಚಾಗಿದೆ. ಆದರೆ, ಮೀಸಲಾತಿ ಬದಲಾಗಿರಲಿಲ್ಲ. ಇವೆಲ್ಲ ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದ್ದೇನೆ ಎಂದು ನಾಗಮೋಹನ್ ದಾಸ್ ಅವರು ಹೇಳಿದರು.
ಜಾತಿ ಗಣತಿಯನ್ನೂ ಪರಿಗಣಿಸಲಾಗಿದೆ
ಸ್ವಾತಂತ್ರ್ಯ ಬಂದ ಬಳಿಕ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸುವುದರ ಜತೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜಾತಿ ಗಣತಿಯೂ ನಡೆಯುತ್ತದೆ. ಅದರ ಆಧಾರದ ಮೇಲೆ ರಾಜ್ಯದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ, ಮಾನವ ಸಂಪನ್ಯೂಲ ಹಾಗೂ ವಸತಿ ಕ್ಷೇತ್ರಗಳಲ್ಲಿ ಮಾಹಿತಿ ಕಲೆ ಹಾಕಿ ಮೀಸಲಾತಿ ನೀಡುವ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಿದ್ದೇನೆ. ಮೀಸಲಾತಿ ಹೆಚ್ಚಿಸುವುದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಆಡಳಿತದಲ್ಲಿನ ದಕ್ಷತೆಗೆ ಯಾವುದೇ ಕುಂದು ಉಂಟಾಗುವುದಿಲ್ಲ ಎನ್ನುವುದನ್ನು ವರದಿಯಲ್ಲಿ ಉಲ್ಲೇಖಿಸಿಯೇ ಶಿಫಾರಸು ಮಾಡಲಾಗಿದೆ ಎಂದು ಅವರು ನಾಗಮೋಹನ್ ದಾಸ್ ತಿಳಿಸಿದರು.
೫೦% ಮೀರಬಾರದು ಎಂದಿದೆ, ಆದರೆ, ಅದೇ ಅಂತಿಮವಲ್ಲ
ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಿ ಎಂಬ ಆದೇಶವಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಕೊಡಬೇಕು ಅನ್ನುವುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಮೊದಲನೆ ಬಾರಿಗೆ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಶೇಕಡಾ 50 ಮೀರಬಾರದು ಎಂದು ಹೇಳಿತ್ತು. ಆದರೆ, ವಿಶೇಷ ಸಂದರ್ಭಗಳಲ್ಲಿ ಈ ನಿಮಯಗಳನ್ನು ಸರಳೀಕರಿಸಬಹುದು. ಹಾಗೆ ಮಾಡುವಾಗ ಕೆಲವೊಂದು ಜವಾಬ್ದಾರಿಗಳನ್ನು ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ಇದೆ. ಇದೆಲ್ಲವನ್ನೂ ಪರಿಗಣಿಸಿ ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಮಾಡಬಹುದು ಎಂಬ ತೀರ್ಮಾನಕ್ಕೆ ಬಂದು ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ನ್ಯೂನತೆಗಳಿಲ್ಲದ ವರದಿಯಿಂದ ನ್ಯಾಯ ಸಿಗಲಿದೆ
ದೇಶದ ಒಂಬತ್ತು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇಕಡಾ ೫೦ನ್ನು ಮೀರಿದೆ. ಆ ರಾಜ್ಯಗಳೆಲ್ಲವೂ ಸಂವಿಧಾನದ ಪರಿಚ್ಛೇದ 9ರ ಅಡಿಯಲ್ಲಿ ಕಾನೂನಿನ ರಕ್ಷಣೆ ಪಡೆದುಕೊಂಡಿವೆ. ಅದೇ ಮಾರ್ಗವನ್ನು ರಾಜ್ಯದಲ್ಲಿ ಅನುಸರಿಸಿ ರಾಜ್ಯದ ಜನತೆಗೆ ನ್ಯಾಯ ಕೊಡಿಸುವ ಬಗ್ಗೆ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಕೆಲವೊಂದು ರಾಜ್ಯಗಳಲ್ಲಿ ಈ ಮೀಸಲಾತಿಯನ್ನು ರದ್ದು ಮಾಡಬೇಕಾದ, ಶೇಕಡಾ ೫೦ರೊಳಗೆ ಇಳಿಸಬೇಕಾದ ಪರಿಸ್ಥಿತಿಯೂ ಬಂದಿದೆ. ಆದರೆ, ಇದಕ್ಕೆ ಕಾರಣ ಅಲ್ಲಿನ ಸರ್ಕಾರಗಳು ಸಿದ್ಧಪಡಿಸಿರುವ ವರದಿಗಳಲ್ಲಿನ ನ್ಯೂನತೆಗಳೇ ಕಾರಣವಾಗಿವೆ. ಆ ರೀತಿ ಆಗಬಾರದೆಂದು ನಾವು, ಸಾಕಷ್ಟು ಮಾಹಿತಿ ಕಲೆ ಹಾಕಿ, ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದ್ದೇವೆ ಎಂದು ನಾಗಮೋಹನ್‌ದಾಸ್ ಹೇಳಿದರು.
ಸಾಮಾನ್ಯ ವರ್ಗದ ಮೀಸಲಾತಿಗೆ ಕತ್ತರಿ ಬೀಳುತ್ತಾ?
ರಾಜ್ಯ ಸರ್ಕಾರದ ಉದ್ದೇಶಿತ ಮೀಸಲಾತಿ ಹೆಚ್ಚಳದಿಂದ ಒಟ್ಟಾರೆ ಮೀಸಲಾತಿ ಪ್ರಮಾಣ ಶೇಕಡಾ ೫೬ಕ್ಕೇರಲಿದೆ. ಅಂದರೆ ನಿಗದಿತ ಶೇಕಡಾ ೫೦ಕ್ಕಿಂತ ಹೆಚ್ಚಾಗಲಿದೆ. ಈಗ ಇರುವ ಮೀಸಲಾತಿ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಶೇಕಡಾ ೧೫, ಪರಿಶಿಷ್ಟ ಪಂಗಡಕ್ಕೆ ಶೇಕಡಾ 3, ಇತರ ಹಿಂದುಳಿದ ವರ್ಗಕ್ಕೆ ಶೇಕಡಾ 32 ಮೀಸಲಾತಿ ಇದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಶೇಕಡಾ ೨೪ ಇದೆ. ಇತರ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇಕಡಾ ೫೨. ಉಳಿದ ಶೇಕಡಾ 24 ಮಂದಿ ಸಾಮಾನ್ಯ ವರ್ಗದ ಜನರು. ಅಂದರೆ, ಶೇಕಡಾ ೨೪ರಷ್ಟಿರುವ ಜನರಿಗೆ ಶೇಕಡಾ ೫೦ರಷ್ಟು ಮೀಸಲಾತಿ ದೊರೆಯುತ್ತಿದೆ. ಹೀಗಾಗಿ ಜನರಲ್ ಮೆರಿಟ್‌ನ ಮೀಸಲಾತಿಯಲ್ಲಿ ಶೇಕಡಾ ಆರು ತೆಗೆದು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡಬೇಕೆಂದು ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದನ್ನು ಬೇರೆ ರಾಜ್ಯಗಳಲ್ಲಿ ಜಾರಿಗೆ ತಂದಿರುವಂತೆ ಸಂವಿಧಾನದ ಪರಿಚ್ಛೇದ 9ರ ಅಡಿಯಲ್ಲಿ ಸೇರಿಸಿ ಸರ್ಕಾರ ಅದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎನ್ನುವುದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಲಹೆ.
ಒಳ ಮೀಸಲಾತಿ ಬಗ್ಗೆ ಅಧ್ಯಯನ ಮಾಡಿ ಕ್ರಮಕ್ಕೆ ಶಿಫಾರಸು
ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲೇ ಒಳ ಮೀಸಲಾತಿ ಬಗ್ಗೆಯೂ ಉಲ್ಲೇಖಿಸಲಾಗಿದೆ. ಒಳ ಮೀಸಲಾತಿ ಬೇಕು ಎಂದು ಉಲ್ಲೇಖಿಸಿದ್ದೇನೆ. ಆದರೆ, ಅದನ್ನು ತರಾತುರಿಯಲ್ಲಿ ಮಾಡದೆ ಇನ್ನಷ್ಟು ಅಧ್ಯಯನ ಮಾಡಿ ಆದ್ಯತೆ ಮೇರೆಗೆ ನೀಡಬೇಕೆಂದು ಶಿಫಾರಸಿನಲ್ಲಿ ಸೂಚಿಸಿದ್ದೇವೆ. ನಾವು ಪ್ರಾಮಾಣಿಕವಾಗಿ ಮಾಡಿರುವ ಕೆಲಸಕ್ಕೆ ಸರ್ಕಾರವು ಗೌರವ ಸೂಚಿಸಿದೆ. ಇದೇ ಕ್ರಮವನ್ನು ಆದಷ್ಟು ಶೀಘ್ರ ಮುಗಿಸಿ ಅನ್ಯಾಯವಾಗಿರುವ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡಬೇಕು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ ನಾಗಮೋಹನ್ ದಾಸ್.
ಇದನ್ನೂ ಓದಿ | SCST ಮೀಸಲು | ಬರೀ ವೋಟ್ ಬ್ಯಾಂಕ್ ಆಟನಾ? ಸುಪ್ರೀಂಕೋರ್ಟ್ ಒಪ್ಪುತ್ತಾ? ಬಿ.ವಿ. ಆಚಾರ್ಯ ಹೇಳೋದೇನು?