ಬೆಂಗಳೂರು: ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ವೈಫಲ್ಯ (Security Breach in Lok Sabha) ಹಾಗೂ ಕಲರ್ ಗ್ಯಾಸ್ ಸಿಡಿತ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಗುಪ್ತಚರ ಇಲಾಖೆ (State Intelligence) ಕೂಡ ವಿವರವಾದ ತನಿಖೆಯೊಂದನ್ನು ನಡೆಸಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗೆ ತನಿಖಾ ವರದಿ ಸಲ್ಲಿಸಲಾಗಿದೆ. ಇನ್ನಷ್ಟು ತನಿಖೆ ನಡೆಯುತ್ತಿದೆ.
ನಿನ್ನೆ ಈ ಕುರಿತ ವರದಿಯನ್ನು ರಾಜ್ಯ ಗುಪ್ತಚರ ಇಲಾಖೆ ಸಲ್ಲಿಕೆ ಮಾಡಿದೆ. ಸದನದೊಳಗೆ ಪ್ರವೇಶಿಸಿ ಕಲರ್ ಗ್ಯಾಸ್ ಸಿಡಿಸಿದ ಮುಖ್ಯ ಆರೋಪಿಗಳಾದ ಮನೋರಂಜನ್ ಹಾಗೂ ಸಾಗರ್ ಶರ್ಮಾರ ಚಲನವಲನಗಳ ಬಗ್ಗೆ ತನಿಖೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಪ್ರಾಥಮಿಕ ವರದಿಯ ಬಳಿಕವೂ ಮತ್ತೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
ಲಖನೌದ ಸಾಗರ್ ಶರ್ಮಾ ಐದು ವರ್ಷಗಳಿಂದ ಬೆಂಗಳೂರು ಒಡನಾಟ ಹೊಂದಿದ್ದಾನೆ. ಸಾಗರ್ ಶರ್ಮಾ ಉತ್ತರ ಪ್ರದೇಶದವನಾದರೂ ಆತನ ತಂದೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಸಾಗರ್ ಶರ್ಮಾನ ತಂದೆ ಶಂಕರ್ ಲಾಲ್ ಶರ್ಮಾ ಅವರೇ ಮಗನಿಗೆ ಸಂಸತ್ ಭೇಟಿಯ ಪಾಸ್ ತೆಗೆಸಿ ಕೊಟ್ಟಿದ್ದರು. ಆರೋಪಿಗಳ ಮೊದಲ ಮೀಟಿಂಗೇ ಮೈಸೂರಿನಲ್ಲಿ ನಡೆದಿತ್ತು. ʼಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ʼ ಎಂಬ ಸೋಶಿಯಲ್ ಮೀಡಿಯಾ ಅಕೌಂಟ್ ಮೂಲಕ ಆರು ಮಂದಿ ಆರೋಪಿಗಳು ಲಿಂಕ್ ಆಗಿದ್ದರು.
ಮೈಸೂರಿನ ಮೂಲದ ಮನೋರಂಜನ್ ಕುಟುಂಬ, ಮನೋರಂಜನ್‌ನ ಶೈಕ್ಷಣಿಕ, ಸಂಘಟನೆ ಮತ್ತಿತರ ವಿವರಗಳನ್ನು ಗುಪ್ತಚರ ಇಲಾಖೆ ಕಲೆಹಾಕಿದೆ. ಮನೋರಂಜನ್ ಮನೆಗೆ ಭೇಟಿ ನೀಡಿದ್ದ ಗುಪ್ತಚರ ಇಲಾಖೆ ಸಿಬ್ಬಂದಿ, ಆತ ಹೊಂದಿದ್ದ ಪುಸ್ತಕ, ಗ್ಯಾಜೆಟ್ ಇತ್ಯಾದಿಗಳನ್ನು ಪರಿಶೀಲಿಸಿತ್ತು. ಚೆಗುವೆರಾ ಸೇರಿದಂತೆ ಹಲವಾರು ಕ್ರಾಂತಿಕಾರಿ ವ್ಯಕ್ತಿಗಳ ವಿಚಾರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಮನೋರಂಜನ್ ಓದುತ್ತಿದ್ದುದು ಪತ್ತೆಯಾಗಿತ್ತು.
ಮನೋರಂಜನ್ ಇತರ ಐದು ಆರೋಪಿಗಳಲ್ಲದೆ ಇನ್ನೂ ಯಾರ್ಯಾರ ಜತೆಗೆ ಸಂಪರ್ಕ ಹೊಂದಿದ್ದ, ತಾವು ನಡೆಸಿದ ದಾಳಿಗೆ ಸ್ಥಳೀಯ ಹೋರಾಟಗಾರರ, ವಿಧ್ವಂಸಕ ಚಿಂತನೆ ಹೊಂದಿದ್ದವರ ಪ್ರಭಾವ ಪಡೆದಿದ್ದನೇ ಎಂಬ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆಗಳ ಪರ ನಡೆದ ಪ್ರತಿಭಟನೆಗಳಲ್ಲಿ ಮನೋರಂಜನ್ ಭಾಗವಹಿಸಿರುವ ಸಾಧ್ಯತೆಯಿದ್ದು, ಇದರಲ್ಲಿ ಆತನೊಂದಿಗೆ ಸಂಪರ್ಕ ಹೊಂದಿದ್ದವರ ಮಾಹಿತಿ ಕಲೆಹಾಕಲಾಗುತ್ತಿದೆ.
ಇದನ್ನೂ ಓದಿ: Security Breach In Lok Sabha: ತೃಣಮೂಲ ಕಾಂಗ್ರೆಸ್ ನಾಯಕನ ಜತೆ ಲೋಕಸಭೆ ದಾಳಿ ಸಂಚಿನ ರೂವಾರಿ, ಫೋಟೋ ವೈರಲ್