Site icon Vistara News

Security breach in Loksabha : ಲೋಕಸಭೆಗೆ ನುಗ್ಗಿದವರಲ್ಲಿ ಒಬ್ಬ ಮೈಸೂರಿನವ; ಯಾರಿವನು?

Lokasabha attack Manoranjan father

ನವದೆಹಲಿ/ಮೈಸೂರು: ಲೋಕಸಭೆ ಅಧಿವೇಶನದ ವೇಳೆಯೇ ಭದ್ರತಾ ಕೋಟೆಯನ್ನು ಬೇಧಿಸಿ (Security breach in Loksabha) ಕಲಾಪ ಸ್ಥಳಕ್ಕೆ ನುಗ್ಗಿದ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬ ಮೈಸೂರಿನ ಮನೋರಂಜನ್‌ ಎಂದು ತಿಳಿದುಬಂದಿದೆ. ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಗೆ (Lokasabha gallery) ಇಬ್ಬರು ದುಷ್ಕರ್ಮಿಗಳು ಹೋಗಿದ್ದರು. ಅವರಲ್ಲಿ ಹರಿಯಾಣದ ಸಾಗರ್‌ ಶರ್ಮಾ (Sagar Sharma) ಗ್ಯಾಲರಿಯಿಂದ ಕೆಳಗೆ ಜಿಗಿದು ಒಂದೊಂದೇ ಮೇಜುಗಳ ಮೇಲೆ ಹಾರುತ್ತಾ ಸದನದ ಬಾವಿ ಕಡೆಗೆ ಸಾಗುತ್ತಿದ್ದಾಗ ಆತನನ್ನು ಹಿಡಿಯಲಾಯಿತು. ಈ ನಡುವೆ ಒಬ್ಬ ಗ್ಯಾಲರಿಯಲ್ಲೇ ಇದ್ದು ನೋಡುತ್ತಿದ್ದ ಆತನೇ ಮೈಸೂರಿನ ಮನೋರಂಜನ್‌ (Manoranjan Mysore). ಮನೋರಂಜನ್‌ 35 ವರ್ಷದ ಯುವಕನಾಗಿದ್ದು, ಈಗ ಬಂಧಿತನಾಗಿದ್ದಾನೆ. ಇನ್ನಿಬ್ಬರು ವ್ಯಕ್ತಿಗಳಾದ 42 ವರ್ಷದ ಮಹಿಳೆ ನೀಲಂ ಮತ್ತು 25 ವರ್ಷದ ಅಮೋಲ್‌ ಶಿಂಧೆಯನ್ನು ವಶಕ್ಕೆ ಪಡೆಯಲಾಗಿದೆ.

ಯಾರು ಈ ಮನೋರಂಜನ್‌?: ತಂದೆ ಹೇಳುವುದೇನು?

ಮನೋರಂಜನ್‌ ಮೈಸೂರು ನಿವಾಸಿಯಾಗಿರುವ ಕೃಷಿಕ ದೇವರಾಜೇ ಗೌಡ ಅವರ ಮಗ. ಬೆಂಗಳೂರಿನಲ್ಲಿ ಬಿಇ ಓದಿದ್ದ ಆತ ಇತ್ತೀಚೆಗೆ ಬೆಂಗಳೂರು ಮತ್ತು ದೆಹಲಿ ಅಂತ ಓಡಾಡುತ್ತಿದ್ದ ಎಂದು ದೇವರಾಜೇ ಗೌಡ ಹೇಳುತ್ತಾರೆ.

2014ರಲ್ಲಿ ಬಿಇ ಮುಗಿಸಿದ್ದ ಆತ ಯಾವುದೇ ಜಾಬ್‌ ಗೆ ಸೇರಿರಲಿಲ್ಲ. ಸಮಾಜಕ್ಕೆ ಸಹಾಯ ಮಾಡುವ ಕೆಲಸ ಮಾಡಬೇಕು ಎಂದು ಹೇಳುತ್ತಿದ್ದ, ವಿವೇಕಾನಂದರಿಗೆ ಸಂಬಂಧಿಸಿದ ಪುಸ್ತಕವನ್ನು ಓದುತ್ತಿದ್ದ. ಅದು ಅವನಿಗೆ ತುಂಬ ಇಷ್ಟವಾಗಿತ್ತು ಎನ್ನುವುದು ತಂದೆ ದೇವರಾಜ್‌ ಅವರ ಮಾತು.

ನೀನು ಎಲ್ಲಿಗೂ ಹೋಗುವುದು ಬೇಡ. ನಮ್ಮದೇ ಜಮೀನಿದೆ, ಕೃಷಿ ಮಾಡಿಕೊಂಡಿರು ಎಂದು ಹೇಳಿದ್ದೆ. ನಮಗೆ ಅರಕಲಗೂಡು ಬಳಿ ಜಮೀನಿದೆ. ಅಲ್ಲಿಗೆ ಬಂದಾಗ ಎಲ್ಲ ಆಳುಗಳ ಜತೆ ಕೆಲಸ ಮಾಡುತ್ತಿದ್ದ. ಕೃಷಿ ಕೂಡಾ ಅವನಿಗೆ ಆಸಕ್ತಿಯ ವಿಷಯ.

ಆದರೆ, ಅವನು ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ ಅಂತ ಕೇಳುತ್ತಿರಲಿಲ್ಲ. ಎಂಜಿನಿಯರಿಂಗ್‌ ಓದಿದ ಮಗನಿಗೆ ಇಂಥ ಪ್ರಶ್ನೆಗಳನ್ನು ಕೇಳುವುದು ಕಷ್ಟವಾಗುತ್ತಿತ್ತು ಎಂದು ದೇವರಾಜೇ ಗೌಡ ಹೇಳುತ್ತಾರೆ.

ಮನೋರಂಜನ್‌ ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎಂದು ತಂದೆ ಹೇಳುತ್ತಾರೆ. ಅಂದರೆ ಆತ ನಿಗದಿತವಾಗಿ ಮನೆಗೆ ಬರುತ್ತಿರಲಿಲ್ಲ ಎಂದು ಅಂದಾಜಿಸಲಾಗಿದೆ.

ಆತ ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಅವರ ಮೂಲಕ ಲೋಕಸಭೆ ಗ್ಯಾಲರಿ ಪ್ರವೇಶದ ಪಾಸ್‌ ಪಡೆದುಕೊಂಡಿದ್ದ. ಹಾಗಿದ್ದರೆ ಪ್ರತಾಪ್‌ ಸಿಂಹ ಅವರಿಗೆ ಈತನ ಪರಿಚಯವಿದೆಯೇ ಎನ್ನುವುದು ಸ್ಪಷ್ಟವಿಲ್ಲ.

ಮನೋರಂಜನ್‌ ದಿಲ್ಲಿಯಲ್ಲಿ ಕೆಲವು ವ್ಯಕ್ತಿಗಳ ಜತೆಗೆ ಸಂಪರ್ಕ ಸಾಧಿಸಿ ಅವರೆಲ್ಲರೂ ಸೇರಿಕೊಂಡು ಸಂಸತ್ತಿಗೆ ನುಗ್ಗುವ ಪ್ಲ್ಯಾನ್‌ ಮಾಡಿರುವುದು ಸ್ಪಷ್ಟವಾಗಿದೆ. ಎಲ್ಲರೂ ಒಂದೇ ದಿನಕ್ಕಾಗಿ ಬೇರೆ ಬೇರೆ ಕಡೆಯಿಂದ ಪಾಸ್‌ ಪಡೆದುಕೊಂಡು ಒಳನುಗ್ಗಿದ್ದಾರೆ.

ಇದನ್ನೂ ಓದಿ: Security Breach in Lok Sabha: ಲೋಕಸಭೆ ಭದ್ರತೆ ಲೋಪ; ನಾಲ್ವರ ಸೆರೆ, ಯಾರಿವರು, ಏನು ಉದ್ದೇಶ?

ಬಂಧಿತರಲ್ಲಿ ಒಬ್ಬರು ಸರ್ವಾಧಿಕಾರಿ ಧೋರಣೆಯನ್ನು ಸಹಿಸುವುದಿಲ್ಲ, ಅನ್ಯಾಯವನ್ನು ಒಪ್ಪುವುದಿಲ್ಲ. ರೈತರು, ಯುವಕರ ನಿರ್ಲಕ್ಷ್ಯ ಸಲ್ಲ ಎಂದು ಹೇಳಿದ್ದಾರೆ. ಇದು ಒಟ್ಟಾರೆ ಟೀಮ್‌ನ ಧ್ಯೇಯದಂತೆಯೇ ಕಾಣುತ್ತದೆ. ಹೀಗಾಗಿ ಇವರೆಲ್ಲರೂ ಒಂದು ತಂಡವಾಗಿ ಚರ್ಚಿಸಿ ಸಂಸತ್ತಿಗೆ ನುಗ್ಗಿದೆ ಎನ್ನುವುದು ಸ್ಪಷ್ಟವಾಗಿದೆ.

ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಮನೋರಂಜನ್ ನಿವಾಸಕ್ಕೆ ವಿಜಯನಗರ ಉಪ ವಿಭಾಗದ ಉಪ ಪೊಲೀಸ್ ಆಯುಕ್ತ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಕೂಡ ಜತೆಗೆ ಇದ್ದರು.

ಚಿಗುವೆರಾ ಸೇರಿದಂತೆ ಹಲವು ಲೇಖಕರ ಪುಸ್ತಕಗಳು ಲಭ್ಯ

ಮನೋರಂಜನ್‌ ಮನೆಯಲ್ಲಿ ಕ್ರಾಂತಿಕಾರಿ ಚಿಗುವೆರಾ ಸೇರಿದಂತೆ ಹಲವು ದಾರ್ಶನಿಕರು, ಕ್ರಾಂತಿಕಾರಿಗಳ ಬಗ್ಗೆಗಿನ ಪುಸ್ತಕಗಳು ಸಿಕ್ಕಿವೆ. ಕೆಲವೊಂದು ಭೂಗತ ಜಗತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ವಾತಂತ್ರ್ಯ ಹೋರಾಟದ ಕಥನಗಳು ಇಲ್ಲಿವೆ. ಮನೋರಂಜನ್‌ ಸಾಕಷ್ಟು ಕ್ರಾಂತಿಕಾರಿ ಯೋಜನೆಗಳನ್ನು ಹೊಂದಿದ್ದರು ಎನ್ನುವುದು ಅವರ ಓದಿನಿಂದ ಗೊತ್ತಾಗುತ್ತಿದೆ.

Exit mobile version