ಬೆಂಗಳೂರು: ಸಿದ್ದರಾಮಯ್ಯ ಅವರ ಕೊಡಗು ಭೇಟಿಯ ವೇಳೆ ಭದ್ರತಾ ಲೋಪವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಮೇಲೆ ಗರಂ ಆಗಿದ್ದರು. ಜತೆಗೆ ಸಿದ್ದರಾಮಯ್ಯ ಅವರಿಗೆ ಬೆದರಿಕೆ ಇರುವ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲು ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರ ಭದ್ರತೆ ವಿಷಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮೊದಲು ಇದ್ದಷ್ಟೇ ಇದೆ. ಈ ಮಧ್ಯೆ, ಮಡಿಕೇರಿಯ ಬಿಜೆಪಿ ಶಾಸಕರಾದ ಕೆ.ಜಿ. ಭೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರ ಬೆಂಗಳೂರಿನ ಶಾಸಕರ ಭವನದ ಕೊಠಡಿಗಳ ಭದ್ರತೆ ಹೆಚ್ಚಿಸಲಾಗಿದೆ.
ಪ್ರತಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರ ಭದ್ರತೆ, ಭದ್ರತಾ ವೈಫಲ್ಯ ಮತ್ತು ಬೆದರಿಕೆಗಳಿಗೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದರು. ಹೆಚ್ಚುವರಿ ಭದ್ರತೆಯ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಆದರೆ, ಭದ್ರತೆ ಹೆಚ್ಚಳ ಮಾಡಿದಂತೆ ಕಾಣುತ್ತಿಲ್ಲ.
ಸಿದ್ದರಾಮಯ್ಯ ಅವರಿಗೆ ಈಗಲೂ ಎಂದಿನಂತೆಯೇ ಒಂದು ಎಸ್ಕಾರ್ಟ್ ಹಾಗೂ ಒಂದು ಪೈಲಟ್ ಟೀಂ ಮಾತ್ರ ಇದೆ. ಒಂದು ೧೦ ಮಂದಿ ಅಂಗ ರಕ್ಷಕರು ಮಾತ್ರ ಎಂದಿನಂತೆ ಹಾಜರಾಗಿದ್ದಾರೆ. ಶುಕ್ರವಾರ ಶೃಂಗೇರಿಯಲ್ಲಿದ್ದಾಗ ಮಾತ್ರ ಅವರಿಗೆ ಹೆಚ್ಚುವರಿ ಭದ್ರತೆ ನೀಡಲಾಗಿತ್ತು. ಸಿದ್ದರಾಮಯ್ಯ ನಿವಾಸಕ್ಕೆ ಇನ್ನೂ ಹೆಚ್ಚಿನ ಭದ್ರತಾ ಸಿಬ್ಬಂದಿ ಒದಗಿಸಿಲ್ಲ.
ಸಿದ್ದರಾಮಯ್ಯಗೆ ಬೆದರಿಕೆ ಇದೆಯಾ?
ಸಿದ್ದರಾಮಯ್ಯ ಅವರಿಗೆ ಬೆದರಿಕೆ ಇದೆ ಎಂದು ಅವರ ಪುತ್ರ, ಶಾಸಕ ಯತೀಂದ್ರ ಅವರು ಹೇಳಿಕೊಂಡಿದ್ದರು. ಸಿದ್ದರಾಮಯ್ಯ ಅವರು ಕೂಡಾ ಶೃಂಗೇರಿಯಲ್ಲಿ ಮಾತನಾಡುತ್ತಾ ʻʻಮಹಾತ್ಮಾ ಗಾಂಧಿಯನ್ನೇ ಕೊಂದವರು ನನ್ನನ್ನು ಬಿಡ್ತಾರಾʼ ಎಂದು ಪ್ರಶ್ನಿಸಿದ್ದರು. ಸಂಘ ಪರಿವಾರದಿಂದ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಇದೆ ಎಂದು ಕೆಲವು ನಾಯಕರು ಹೇಳಿದ್ದರು.
ಇದಲ್ಲದೆ, ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮೂರು ಬಾರಿ ಬೆದರಿಕೆ ಪತ್ರ ಬಂದಿದೆ. ಈ ಹಿಂದೆ ಬಿ.ಟಿ ಲಲಿತಾ ನಾಯಕ್ ಅವರಿಗೆ ಬಂದಿದ್ದ ಬೆದರಿಕೆ ಪತ್ರದಲ್ಲಿ ಸಿದ್ದರಾಮಯ್ಯ ಹೆಸರೂ ಉಲ್ಲೇಖವಾಗಿತ್ತು. ಕೊಡಗು ಘಟನೆ ಮತ್ತು ಅಲ್ಲಲ್ಲಿ ಪ್ರತಿಭಟನೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಳದ ಅಗತ್ಯವಿದೆ ಎಂದು ಪ್ರತಿಪಾದಿಸಲಾಗಿತ್ತು.
ಶಾಸಕರ ಭವನದಲ್ಲಿ ಭದ್ರತೆ ಹೆಚ್ಚಳ
ಈ ನಡುವೆ, ಮೊಟ್ಟೆ ಎಸೆತ ಘಟನೆ ಬೆನ್ನಲ್ಲೇ ಕೊಡಗಿನ ಬಿಜೆಪಿ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರ ಶಾಸಕರ ಭವನದ ಕೊಠಡಿಗಳಿಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಶಾಸಕರ ಭವನದ ಮುಖ್ಯ ದ್ವಾರದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಯಾರಾದರೂ ಮೊಟ್ಟೆ ತೆಗೆದುಕೊಂಡು ಹೋಗಬಹುದು ಎಂಬ ಕಾರಣಕ್ಕೆ ತಪಾಸಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ| ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದದ್ದು ಬಿಜೆಪಿ ಕಾರ್ಯಕರ್ತನಲ್ಲ, ಕಾಂಗ್ರೆಸ್ ಕಾರ್ಯಕರ್ತ! ಹಾಗಿದ್ದರೆ ಎಸೆದಿದ್ಯಾಕೆ?