Site icon Vistara News

Sedition Case: ಪಾಕ್‌ ಪರ ಘೋಷಣೆ; ಕಾಂಗ್ರೆಸ್ಸಿಗರೇ ವಿಧಾನಸೌಧ ಬಿಟ್ಟು ತೊಲಗಿ ಎಂದು ಗುಡುಗಿದ ಬಿ.ವೈ. ವಿಜಯೇಂದ್ರ

Sedition Case Pro Pakistan slogans BY Vijayendra slams congress

ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ನೂತನ ಸದಸ್ಯ ನಾಸಿರ್ ಹುಸೇನ್ (Nasir Hussain) ಬೆಂಬಲಿಗರು ವಿಧಾನಸೌಧದೊಳಗೇ ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಜೈಕಾರ ಕೂಗಿ ಉದ್ಧಟತನ ಮೆರೆದಿರುವುದಕ್ಕೆ ರಾಜ್ಯಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ದೇಶದ್ರೋಹದ (Sedition Case) ಪ್ರಕರಣ ಸಂಬಂಧ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಿ ಎಂಬ ಆಗ್ರಹಗಳು ಕೇಳಿಬಂದಿವೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಸೇರಿದಂತೆ ಬಿಜೆಪಿಯ ಹಲವು ನಾಯಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. “ಕಾಂಗ್ರೆಸ್ಸಿಗರೇ ವಿಧಾನಸೌಧ ಬಿಟ್ಟು ತೊಲಗಿ” ಎಂಬುದೇ ನಮ್ಮ ಮುಂದಿನ ಹೋರಾಟವಾಗಿದೆ ಎಂದು ವಿಜಯೇಂದ್ರ ಗುಡುಗಿದ್ದಾರೆ. ಅಲ್ಲದೆ, ಈ ದೇಶದ್ರೋಹದ ಹೇಳಿಕೆ ವಿರುದ್ಧ ದೂರು ನೀಡಲು ಬಿಜೆಪಿ (BJP Karnataka) ನಿರ್ಧಾರ ಮಾಡಿದೆ. ಸ್ಪೀಕರ್ ಯು.ಟಿ. ಖಾದರ್ (UT Khadar) ಹಾಗೂ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಲು ನಿರ್ಧಾರ ಮಾಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು. ಅಲ್ಲದೆ, ಬಿಜೆಪಿ ಈ ಪ್ರಕರಣವನ್ನು ವ್ಯಾಪಕವಾಗಿ ಖಂಡಿಸಿದೆ. ಈ ಘೋಷಣೆ ಕೂಗಿದ ಆರೋಪಿಗಳ ಹುಟ್ಟಡಗಿಸಬೇಕು. ಅವರ ಮೇಲೆ ಕಠಿಣ ಕ್ರಮವಾಗಬೇಕು. ಈ ಬಗ್ಗೆ ಎಂಥ ಕ್ರಮವನ್ನು ತೆಗೆದುಕೊಳ್ಳಬೇಕೆಂದರೆ ಮತ್ತೆಂದೂ ಇಂಥ ದೇಶದ್ರೋಹಿ ಘೋಷಣೆ ಕೂಗಲು ಯಾರೂ ಮುಂದಾಗಬಾರದು ಎಂದು ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ.

Sedition case who say Pakistan Zindabad will not be spared says Dr G Parameshwara

ಕಾಂಗ್ರೆಸ್‌ ವಿರುದ್ಧ ಗುಡುಗಿದ ವಿಜಯೇಂದ್ರ

ಪಾಕಿಸ್ತಾನ್ ಜಿಂದಾಬಾದ್ ಎಂಬ ರಾಷ್ಟ್ರ ವಿದ್ರೋಹದ ಉಗ್ರ ಘೋಷಣೆ ಭಾರತದ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲೇ ಮೊಳಗಿದೆ ಎಂದರೆ ಕಾಂಗ್ರೆಸ್ ಇನ್ನೆಷ್ಟು ದೇಶ ಸುಡುವ ವಿಷಜಂತುಗಳನ್ನು ತನ್ನ ಮಡಿಲಲ್ಲಿ ಕಟ್ಟಿಕೊಂಡಿರಬಹುದು ಎಂದು ಅಂದಾಜಿಸಲು ಇಂದಿನ ಘಟನೆ ಸಾಕ್ಷಿ ಒದಗಿಸಿದೆ.

ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿರುವ ಸೈಯದ್ ನಾಸಿರ್ ಹುಸೇನ್ ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿತ ಉಗ್ರರೇ ಇರಬೇಕು, ‘ತನ್ನನು ರಕ್ಷಿಸಲು ತಮ್ಮ ಮನಃಸ್ಥಿತಿಯ ಕಾಂಗ್ರೆಸ್ ಸರ್ಕಾರ ಇರುವಾಗ ನಾವ್ಯಾರಿಗೆ ಹೆದರಬೇಕು’ ಎಂಬ ದುಷ್ಟ ಮನಸ್ಸಿನಿಂದ ಘೋಷಣೆ ಕೂಗಿರುವ ದೇಶ ವಿರೋಧಿ ನೀಚರನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು.

ಸಾಕ್ಷಿಗಳೆಲ್ಲವೂ ಕಣ್ಣೆದುರಿಗೇ ಇರುವಾಗ ದೇಶ ವಿರೋಧಿಗಳನ್ನು ರಕ್ಷಿಸಲು ಯತ್ನಿಸುವ ಪ್ರಯತ್ನ ನಡೆದರೆ ಮುಂದಾಗುವ ಪರಿಣಾಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಲಿದೆ. ನಮ್ಮ ಮುಂದಿನ ಹೋರಾಟ, “ರಾಜ್ಯದ ರಕ್ಷಣೆಗಾಗಿ ಕಾಂಗ್ರೆಸ್ಸಿಗರೇ ವಿಧಾನ ಸೌಧ ಬಿಟ್ಟು ತೊಲಗಿ” ಎಂಬುದಾಗಿದೆ ಎಂದು ಬಿ.ವೈ. ವಿಜಯೇಂದ್ರ ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಭೇಟಿ

ಈ ನಡುವೆ ಪ್ರಕರಣದ ಬಗ್ಗೆ ಗೊತ್ತಾಗುತ್ತಿದ್ದಂತೆ ವಿಧಾನ ಸೌಧ ಠಾಣೆಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಆಗಮಿಸಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಘಟನೆ ಬಗ್ಗೆ ಠಾಣಾಧಿಕಾರಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ತನಿಖೆಯನ್ನು ಚುರುಕುಗೊಳಿಸುವಂತೆ ನಿರ್ದೇಶನವನ್ನು ನೀಡಿದ್ದಾರೆ.

ಐದಾರು ಬಾರಿ ಆಡಿಯೊ ಕೇಳಿದ ಎಸಿಪಿ

ಇನ್ನು ಕಬ್ಬನ್ ಪಾರ್ಕ್ ಉಪವಿಭಾಗ ಎಸಿಪಿ ಬಾಲಕೃಷ್ಣ ಅವರು ವಿಡಿಯೊ ಮತ್ತು ಆಡಿಯೊವನ್ನು ಪರಿಶೀಲನೆ ನಡೆಸಿದ್ದಾರೆ. ಖುದ್ದು ಅವರೇ ಪರಿಶೀಲನೆ ಮಾಡುತ್ತಿದ್ದು, ಐದಾರು ಬಾರಿ ಕೇಳಿದ್ದಾರೆ. ನಿಜವಾಗಿಯೂ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಯನ್ನು ಕೂಗಲಾಗಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Rajya sabha Election: ಎಸ್‌.ಟಿ. ಸೋಮಶೇಖರ್‌ ಅಡ್ಡಮತ; ಬಿಜೆಪಿಯಿಂದ ಏನು ಕ್ರಮ? ಶಾಸಕತ್ವ ಉಳಿಯುತ್ತಾ?

ಮುಲಾಜಿಲ್ಲದೆ ಕ್ರಮ: ಡಾ. ಜಿ. ಪರಮೇಶ್ವರ್

ಈ ನಡುವೆ ಜತೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದು, ಇಂಥ ಘೋಷಣೆಯನ್ನು ಯಾರೂ ಸಹ ಕೂಗಬಾರದು. ನಮ್ಮ ನೆಲದಲ್ಲಿ ಹುಟ್ಟಿ ಈ ರೀತಿ ಮಾತನಾಡಬಾರದು. ಇದು ಯಾರೇ ಮಾಡಿದರೂ ತಪ್ಪು. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ನಾನು ಈ ಸಂಬಂಧ ಪೊಲೀಸರಿಗೆ ನಿರ್ದೇಶನವನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.

Exit mobile version