ರಾಮನಗರ: ಕಂಚುಗಲ್ ಬಂಡೇ ಮಠದ ಶ್ರೀ ಬಸವ ಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಒಂದು ಕಡೆ ಶ್ರೀಗಳನ್ನು ಟ್ರ್ಯಾಪ್‌ನಲ್ಲಿ ಬೀಳಿಸಿದ ಯುವತಿಯ ಫೋಟೊ ಲೀಕ್ ಆಗಿದ್ದರೆ, ಇನ್ನೊಂದು ಕಡೆ ಈ ಷಡ್ಯಂತ್ರದ ಹಿಂದೆ ಇನ್ನೊಬ್ಬ ಸ್ವಾಮೀಜಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಅವರನ್ನು ಒಂದೆರಡು ದಿನದಲ್ಲಿ ಬಂಧಿಸುವ ಸಾಧ್ಯತೆಗಳಿವೆ.
ಎರಡನೇ ವಿಡಿಯೊ ಲೀಕ್
ಬಂಡೆ ಮಠ ಶ್ರೀಗಳು ತನ್ನನ್ನು ಹನಿ ಟ್ರ್ಯಾಪ್‌ನಲ್ಲಿ ಬೀಳಿಸಲಾಗಿದೆ ಎನ್ನುವ ಅರ್ಥದಲ್ಲಿ ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದರು. ಅದರಲ್ಲಿ ಬೆಂಗಳೂರು ಮೂಲದ ಒಬ್ಬ ಮಹಿಳೆಯ ಉಲ್ಲೇಖವೂ ಇತ್ತು. ಇದಕ್ಕೆ ಪೂರಕವಾಗಿ ಶ್ರೀಗಳು ಯಾರೋ ಒಬ್ಬರ ಜತೆ ಶೃಂಗಾರ ಭರಿತ ಹಾವಭಾವಗಳೊಂದಿಗೆ ಮಾತನಾಡುತ್ತಿರುವ ದೃಶ್ಯಗಳು ಲೀಕ್ ಆಗಿದ್ದವು.
ಎರಡನೇ ವಿಡಿಯೊ ಗುರುವಾರ ಲೀಕ್ ಆಗಿದ್ದು ಅದರಲ್ಲಿ ಮೊಬೈಲ್‌ನಲ್ಲಿ ಕೆಲವು ಶೃಂಗಾರ ವಿಡಿಯೋ ತೋರಿಸಿ ಅದರಂತೆ ಮುದ್ದಾಡೋಣ ಎಂದು ಯುವತಿಗೆ ಹೇಳುವ ದೃಶ್ಯಗಳಿವೆ. ಎರಡು ಮೊಬೈಲ್ ಬಳಕೆ ಮಾಡುತ್ತಿದ್ದ ಬಸವಲಿಂಗ ಸ್ವಾಮೀಜಿ, ವಿಡಿಯೋಗಳನ್ನು ಒಂದು ಮೊಬೈಲ್‌ನಲ್ಲಿ ತೋರಿಸಿ ಮತ್ತೊಂದು ಮೊಬೈಲ್‌ನಲ್ಲಿ ವಿಡಿಯೊ ಕಾಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕಾಲ್ ಮಾಡಿದ ಹುಡುಗಿ ಚಿತ್ರ ಲಭ್ಯ
ಸ್ವಾಮೀಜಿಯ ಜತೆ ವಿಡಿಯೊದಲ್ಲಿ ಸಂಭಾಷಣೆ ಮಾಡುವ ಹುಡುಗಿ ಯಾರು ಎನ್ನುವ ಕುತೂಹಲ ಎಲ್ಲೆಡೆ ಇತ್ತು. ಇದೀಗ ಆಕೆಯ ಫೋಟೊ ಲೀಕ್ ಆಗಿದೆ. ಪೊಲೀಸರು ವಿಡಿಯೊಗಳ ಆಧಾರದಲ್ಲಿ ಆಕೆಯ ಫೋಟೊವನ್ನು ಸಂಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರು ಮಹಿಳೆಯರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದು, ಈ ಹುಡುಗಿ ಅವರ ಪೈಕಿ ಒಬ್ಬಳಾ ಎನ್ನುವುದು ಸ್ಪಷ್ಟವಾಗಿಲ್ಲ. ಅಂತೂ ಯಾರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭಿಸುತ್ತಾ ಹೋಗುತ್ತಿರುವುದು ನಿಜ.
ಹನಿಟ್ರ್ಯಾಪ್ ಟೀಂನಲ್ಲಿ ಮತ್ತೊಬ್ಬ ಸ್ವಾಮೀಜಿ ಭಾಗಿ
ಈ ನಡುವೆ ಇನ್ನಷ್ಟು ಕುತೂಹಲ ಕೆರಳಿಸಿರುವ ಇನ್ನೊಂದು ಅಂಶವೆಂದರೆ, ಈ ಹನಿ ಟ್ರ್ಯಾಪ್ ಷಢ್ಯಂತ್ರದಲ್ಲಿ ಒಬ್ಬ ಸ್ವಾಮೀಜಿ ಕೂಡಾ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಠದ ಸಿಬ್ಬಂದಿ, ಕಾರು, ಆಪ್ತರೇ ಸೇರಿ ಸ್ವಾಮೀಜಿ ಖೆಡ್ಡಾ ತೋಡಿದ್ದಾರೆ ಎಂದೆಲ್ಲ ಹೇಳಲಾಗುತ್ತಿತ್ತು. ಇದಕ್ಕೆ ಈ ಸ್ವಾಮೀಜಿ ಹೆಸರು ಚೆನ್ನಾಗಿ ತಾಳೆಯಾಗುತ್ತಿದೆ ಎನ್ನಲಾಗಿದೆ.
ಮಠದ ಸಿಬ್ಬಂದಿ ಮತ್ತು ಮೂವರು ಮಹಿಳೆಯರನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರ ಅದರ ಜತೆಗಿನ ಮಾತುಕತೆಯ ನಡುವೆ ಈ ಸ್ವಾಮೀಜಿಯ ಹೆಸರು ಕೇಳಿಬಂದಿದೆ. ಅನುಮಾನಿತ ಸ್ವಾಮೀಜಿಯನ್ನು ಮೂರು ದಿನಗಳಿಂದ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇವರೇ ಒಟ್ಟಾರೆ ಪ್ರಕರಣದ ರೂವಾರಿ ಎಂಬ ಮಾತಿದ್ದು, ತನಿಖೆಯಿಂದ ಸ್ಪಷ್ಟವಾಗಬೇಕಾಗಿದೆ.
ಇದನ್ನೂ ಓದಿ |Seer suicide | ಮಠದಲ್ಲಿದ್ದವರಿಂದಲೇ ಶ್ರೀಗಳಿಗೆ ಖೆಡ್ಡಾ? ಕೋಟಿ ರೂ.ಗಾಗಿ ಡಿಮ್ಯಾಂಡ್, ಚಾಲಕ, ಆಪ್ತರ ವಿಚಾರಣೆ