ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನಲ್ಲೇ ಅತಿ ದೊಡ್ಡ ಎಂಬ ಪ್ರಖ್ಯಾತಿ ಹೊಂದಿರುವ ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಅವರ ಆತ್ಮಹತ್ಯೆಗೆ ಭಕ್ತ ಜನರು ಕಣ್ಣೀರು ಹಾಕಿದ್ದಾರೆ. ಸೋಮವಾರ ಮುಂಜಾನೆ ಸಿಕ್ಕಿದ ಆವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಮಠದ ಆವರಣದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಯಿತು.
ಕಳೆದ ತಿಂಗಳು ಮಾಗಡಿಯ ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮಿಗಳ ದೇಹವೂ ಸಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ದುರ್ಘಟನೆ ಭಕ್ತರ ಮನಸ್ಸಿನಲ್ಲಿ ಮಾಸುವ ಮುನ್ನವೇ ಇಂದು ಶ್ರೀ ಬಸವಲಿಂಗ ಸ್ವಾಮೀಜಿಯವರ ದೇಹವೂ ಇದೇ ರೀತಿ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಸಾಯುವ ಮುನ್ನ ಸ್ವಾಮೀಜಿ ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಡೆತ್ ನೋಟ್‌ನಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರ ಸಹಾಯವೂ ಇರಲಿಲ್ಲ. ಕೆಲವರಿಂದ ಬೆದರಿಕೆ ಕರೆಗಳು ಸಹ ಬಂದಿವೆ ಎಂದು ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನೇಕ ಉತ್ತಮ ಕಾರ್ಯಕ್ರಮಗಳ ಮೂಲಕ ಮಠವನ್ನು ಮಾದರಿಯಾಗಿ ಬೆಳೆಸಿದ್ದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಸುದ್ದಿ ಕೇಳಿ ಸಾವಿರಾರು ಭಕ್ತಾದಿಗಳು ವಿಚಲಿತರಾಗಿದ್ದಾರೆ. ಶ್ರೀಗಳ ನಿಧನ ಸುದ್ದಿ ಕೇಳಿ ಸುತ್ತೂರು ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಹಾಗೂ ಗಣ್ಯರು ಮಠಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸಾವಿರಾರು ಮಂದಿ ಭಕ್ತರು ಮಠದ ಬಳಿ ಜಮಾಯಿಸಿದ್ದ ಹಿನ್ನಲೆಯಲ್ಲಿ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ಶ್ರೀ ಶಿವರುದ್ರ ಮಹಾಸ್ವಾಮಿ ಗದ್ದುಗೆ ಪಕ್ಕದಲ್ಲೇ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ಜರುಗಿದವು.
ಕುದೂರು ಠಾಣೆಯಲ್ಲಿ ಪ್ರಕರಣ ದಾಖಲು
ಮಠದ ಶಾಲೆಯ ಶಿಕ್ಷಕ ರಮೇಶ್ ನೀಡಿದ ದೂರು ಆಧರಿಸಿ ಬಸಬಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕುದೂರು ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ʻʻಬೆಳಗ್ಗೆ ಸ್ವಾಮೀಜಿ ತಮ್ಮ ಕೋಣೆಯ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ನೇಣು ಹಾಕಿಕೊಂಡಿರುವುದು ಪತ್ತೆಯಾಯಿತು. ಬಾಗಿಲು ಒಡೆದು ಒಳ ಹೋದಾಗ ಡೆತ್ ನೇಟ್ ಕೂಡ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಕಂಬನಿ ಮಿಡಿದ ಸುತ್ತೂರು ಶ್ರೀಗಳು
ʻʻಯಾರೂ ಕೂಡ ಈ ರೀತಿ ಆಗುತ್ತೆ ಎಂದು ಊಹೆ ಕೂಡ ಮಾಡಿಕೊಂಡಿರಲಿಲ್ಲ. ಶ್ರೀಗಳು ಮಠಾಧೀಶರಾದ ನಂತರ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಮಠದ ಭಕ್ತರ ಸಹಕಾರದೊಂದಿಗೆ ಮಠವನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದಾಗಿತ್ತುʼʼ ಎಂದು ಸುತ್ತೂರು ಶ್ರೀಗಳು ಹೇಳಿದರು.
ಇದನ್ನೂ ಓದಿ | Seer suicide| ಬಂಡೇಮಠ ಶ್ರೀ ಆತ್ಮಹತ್ಯೆಗೆ ಖಾಸಗಿ ವಿಡಿಯೊ ಕಾರಣ? ಮಹಿಳೆ, ಗ್ಯಾಂಗ್‌ನಿಂದ ಬ್ಲ್ಯಾಕ್‌ಮೇಲ್