ಬೆಂಗಳೂರು: ಇಲ್ಲಿನ ವಿಜಯನಗರದಲ್ಲಿ ವ್ಯಕ್ತಿಯೊಬ್ಬನ ಆತ್ಮಹತ್ಯೆ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ. ಗೌತಮ್ ಎಂಬಾತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದರು. ಮೊದಮೊದಲು ಈತ ಬಿಬಿಎಂಪಿ ಗುತ್ತಿಗೆದಾರ (Bbmp Contractor) ಎನ್ನಲಾಗಿತ್ತು. ಆದರೆ ಆತ್ಮಹತ್ಯೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
ಗೌತಮ್ ವಿಜಯನಗರದ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿಯೇ (ಆ.09) ಫ್ಯಾನ್‌ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಅತ್ತಿಗುಪ್ಪೆಯ ಮಾಜಿ ಕಾರ್ಪೋರೇಟರ್ ದೊಡ್ಡಯ್ಯರ ಮಗ ಗೌತಮ್ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿತ್ತು.
ಇದು ಬಿಜೆಪಿ ಪಿತೂರಿ
ಸದ್ಯ ಗೌತಮ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೃತ ಗೌತಮ್ ಅವರ ಮಾವ ಆನಂದ್ ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷದವರು ನಮ್ಮ ವಿರುದ್ಧ ಬಿಜೆಪಿಯವರು ಪಿತೂರಿ ಮಾಡಿದ್ದಾರೆ. ಗೌತಮ್ ಯಾವುದೇ ಗುತ್ತಿಗೆದಾರನಲ್ಲ. ಅವರ ಹೆಸರಲ್ಲಿ ಯಾವುದೇ ಪರವಾನಗಿ ಇಲ್ಲ. ಗೌತಮ್ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌತಮ್‌ಗೆ ಮದುವೆ ಮಾಡಲು ಎರಡು ತಿಂಗಳಿಂದ ಹೆಣ್ಣು ಹುಡುಕುತ್ತಿದ್ದವಿ. ಗುತ್ತಿಗೆದಾರ ಆತ್ಮಹತ್ಯೆಗೆ ಶರಣು ಎಂಬುದೆಲ್ಲ ಸುಳ್ಳು. ಬಿಜೆಪಿಯವರು ಪಿತೂರಿ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನಾಲ್ಕೈದು ತಿಂಗಳಿಂದ ಡಿಫ್ರೆಷನ್
ಇಂದು ಮಧ್ಯಾಹ್ನ ಊಟಕ್ಕೆ ಕರೆಯಲು ಹೋದಾಗ ನಮಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಬಂತು ಎಂದು ಗೌತಮ್ ತಂದೆ ಮಾಜಿ ಕಾರ್ಪೋರೇಟರ್ ದೊಡ್ಡಯ್ಯ ತಿಳಿಸಿದ್ದಾರೆ. ರೂಮ್ ಲಾಕ್ ಆಗಿದ್ದರಿಂದ ಗೌತಮ್ ಫೋನ್‌ಗೆ ಕರೆ ಮಾಡಲಾಗಿತ್ತು. ಆದರೆ ತೆರೆಯದೆ ಇದ್ದಾಗ ಅನುಮಾನ ಬಂತು. ಬಾಗಿಲಿಂದ ವಾಸನೆ ಬರುತ್ತಿತ್ತು. ಬಾಗಿಲು ಹೊಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂತು.
ಆತ ನಾಲ್ಕು ಐದು ತಿಂಗಳಿನಿಂದ ಡಿಫ್ರೆಷನ್‌ನಲ್ಲಿದ್ದ. ಸಮಸ್ಯೆ ಏನು ಎಂದು ಕೇಳಿದರೂ ಅವನು ಏನು ಹೇಳುತ್ತಿರಲಿಲ್ಲ. ಅವನೇ ಮದುವೆ ಮಾಡಿ ಎಂದು ಹೇಳಿದ್ದ. ಹೀಗಾಗಿ ಆರು ತಿಂಗಳಿನಿಂದ ಅವನಿಗೆ ಹುಡುಗಿ ಹುಡುಕುತ್ತಿದ್ದವಿ. ಕೆಲವು ಹುಡುಗಿಯರ ಫೋಟೊವನ್ನು ತೋರಿಸಿದ್ದವಿ. ಅವನು ಯಾವುದೇ ಗುತ್ತಿಗೆದಾರನಲ್ಲ, ಯಾವುದೇ ಲೈಸೆನ್ಸ್ ಇಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಮಗೆ ಪಿತ್ರಾರ್ಜಿತ ಆಸ್ತಿನೇ ಇದೆ. ನಾವು ನೋವಿನಲ್ಲಿದ್ದೇವೆ, ನಮಗೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ತಿಳಿದಿಲ್ಲ. ಆತನ ರೂಮಿನಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ