ಮೈಸೂರು: ಕಂಪನಿಯಲ್ಲಿ ಕೆಲಸದಿಂದ ತೆಗೆದು ಕಿರುಕುಳ ನೀಡಿದ್ದಾರೆ ಎಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತಿ.ನರಸೀಪುರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಕಿರಣ್ (28) ಮೃತ ಯುವಕ.
ತಿ.ನರಸೀಪುರದ ಸಾಯಿ ಗಾರ್ಮೆಂಟ್ಸ್‌ನಲ್ಲಿ ಯುವಕ ಕಿರಣ್ ಕೆಲಸ ಮಾಡುತ್ತಿದ್ದ. ಆದರೆ, ಕಂಪನಿಯಲ್ಲಿ ಕೆಲಸದಿಂದ ಬೇಕಂತಲೇ ತೆಗೆದಿದ್ದಾರೆ. ನನ್ನ ಸಾವಿಗೆ ಕಂಪನಿಯ ಕ್ವಾಲಿಟಿ ಎ.ಜಿ.ಎಂ ಲೋಕೇಶ್ ಹಾಗೂ ಎಚ್.ಆರ್. ಎ.ಜಿ.ಎಂ ಅನಿಲ್ ಕಾರಣ ಎಂದು ಡೆತ್ ನೋಟ್‌ನಲ್ಲಿ ಯುವಕ ಉಲ್ಲೇಖಿಸಿದ್ದಾನೆ.
ನನ್ನನ್ನು ಕೆಲಸದಿಂದ ಬೇಕಂತಲೇ ತೆಗೆದಿದ್ದಾರೆ. ನನ್ನ ಬಗ್ಗೆ ಬೇರೆ ಕಡೆ ಕೆಟ್ಟ ಫೀಡ್ ಬ್ಯಾಕ್ ಕೊಟ್ಟು ಎಲ್ಲೂ ಕೆಲಸಕ್ಕೆ ತೆಗೆದುಕೊಳ್ಳದ ಹಾಗೆ ಮಾಡಿದ್ದಾರೆ. ಲೋಕೇಶ್ ಮತ್ತು ಅನಿಲ್ ಅವರಿಂದ ಕೆಲಸ ಸಿಗದ ನಾನು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್‌ನಲ್ಲಿ ಮೃತ ಕಿರಣ್ ಉಲ್ಲೇಖ ಮಾಡಿದ್ದಾನೆ. ಈ ಬಗ್ಗೆ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್ʼಗೆ ಸಿಕ್ಕಿದ್ದು ಹೇಗೆ?
ಹುಬ್ಬಳ್ಳಿ ಏರ್‌ಪೋರ್ಟ್ ನಿರ್ದೇಶಕರಿಗೆ ಜೀವ ಬೆದರಿಕೆ; ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಮೇಲ್ ಐಡಿಯಿಂದ ಸಂದೇಶ
ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕರಿಗೆ ಜೀವ ಬೆದರಿಕೆ (Life threat) ಸಂದೇಶ ಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಎಂಬ ಹೆಸರಿನ ಮೇಲ್ ಐಡಿಯಿಂದ ಬಂದಿರೋ ಬೆದರಿಕೆ ಸಂದೇಶ ಬಂದಿದ್ದು, ಈ ಬಗ್ಗೆ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ ಶ್ರೀಪಾದಗೆ ಬೆದರಿಕೆ ಮೇಲ್ ಬಂದಿದೆ. ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಎಂಬ ಹೆಸರಿನ ಮೇಲ್ ಐಡಿಯಿಂದ ನಿರ್ದೇಶಕರ ಕಚೇರಿಯ ಮೇಲ್ ಐಡಿಗೆ ಸಂದೇಶ ಬಂದಿದ್ದು, ” ನಾವು ನಿಮ್ಮನ್ನು ನಾಶ ಮಾಡುತ್ತೇವೆ, ಬೆಂಕಿಯಲ್ಲಿ ಎಸೆಯುತ್ತೇವೆ, ಉಸಿರುಗಟ್ಟಿ ಸಾಯುತ್ತೀರಿ” ನೀವು ಮಾಡಿದ ಎಲ್ಲ ಕೆಟ್ಟ ಕೆಲಸಗಳಿಗೆ ಉತ್ತರವಿಲ್ಲ ಎಂದು ಭಾವಿಸಿದ್ದೀರಾ ಎಂದು ಬೆದರಿಕೆ ಸಂದೇಶ ಬಂದಿದೆ.
ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್ʼಗೆ ಸಿಕ್ಕಿದ್ದು ಹೇಗೆ?
ಈ ಬಗ್ಗೆ ಟರ್ಮಿನಲ್ ಉಸ್ತುವಾರಿ ಪ್ರತಾಪ ಅವರ ಗಮನಕ್ಕೆ ರೂಪೇಶ್ ಕುಮಾರ್ ತಂದಿದ್ದಾರೆ. ನಂತರ ಸಿಎಎಸ್‌ಒ, ಐಬಿ, ಬಿಡಿಡಿಎಸ್ ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ರವಾನೆ ಮಾಡಲಾಗಿದೆ. ವಾಯುಯಾನ ಭದ್ರತಾ ನಿಯಮದ ಪ್ರಕಾರ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂದೇಶ ಕಳುಹಿಸಿರುವ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರಿಗೆ ಗಾಯ
ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿರುವ ಘಟನೆ ನಗರದ ಕಾಶಿಪುರದಲ್ಲಿ ನಡೆದಿದೆ. ಗಣೇಶ್ ಹಾಗೂ ರಾಜು ಗಾಯಾಳುಗಳು.
ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ಪಕ್ಕದಲ್ಲೇ ಇದ್ದ ವಿದ್ಯುತ್ ತಂತಿಯನ್ನು ರಾಜು ಮುಟ್ಟಿದ್ದಾನೆ. ರಾಜುವನ್ನು ರಕ್ಷಿಸಲು ಹೋಗಿ ಗಣೇಶ್‌ಗೂ ಶಾಕ್ ಹೊಡೆದಿದೆ. ಹೀಗಾಗಿ ಗಾಯಗೊಂಡ ಇಬ್ಬರನ್ನೂ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.