ಬೆಂಗಳೂರು: ಜಾಲಹಳ್ಳಿಯಲ್ಲಿ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ತಾಯಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ನಡೆದಿದೆ. ಜೈಲಿಗೆ ಹೋದ ದಿನವೇ ಶೌಚಾಲಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗಂಗಾದೇವಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಮಂಗಳವಾರ ರಾತ್ರಿ ಇಬ್ಬರು ಮಕ್ಕಳನ್ನು ಸಾಯಿಸಿದ್ದ ಗಂಗಾದೇವಿ, ಬುಧವಾರ ಬೆಳಗ್ಗೆ 112 ಗೆ ಕರೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ತಕ್ಷಣ ಸ್ಥಳಕ್ಕೆ ಹೋಗಿ ಗಂಗಾದೇವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಗಂಗಾದೇವಿಯನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಗುರುವಾರ ರಾತ್ರಿ ಜೈಲಿನಲ್ಲೇ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೆನ್ನೆ ಮರಣೋತ್ತರ ಪರೀಕ್ಷೆ ಮಾಡಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 9ರಂದು ರಾತ್ರಿ ಇಬ್ಬರು ಮಕ್ಕಳನ್ನು ಗಂಗಾದೇವಿ ಕೊಂದಿದ್ದಳು. ಲಕ್ಷ್ಮೀ (9) ಹಾಗೂ ಗೌತಮ್ (7) ಕೊಲೆಯಾದ ಮಕ್ಕಳು. ಕೊಲೆ ಮಾಡಿದ ಬಳಿಕ ತಾಯಿ ಗಂಗಾದೇವಿಯನ್ನು ಜಾಲಹಳ್ಳಿ ಪೊಲೀಸರು ಆರೆಸ್ಟ್ ಮಾಡಿದ್ದರು.
ಆಂಧ್ರ ಪ್ರದೇಶ ಮೂಲದ ಗಂಗಾದೇವಿ ಕುಟುಂಬ, ಬೆಂಗಳೂರಿನ ಜಾಲಹಳ್ಳಿಯಲ್ಲಿ ವಾಸವಾಗಿತ್ತು. ಅಚ್ಚರಿ ಎಂದರೆ ಕೊಲೆ ಆರೋಪಿತೆ ಗಂಗಾದೇವಿ ಪತಿ ಪೋಕ್ಸೋ ಕೇಸ್‌ನಲ್ಲಿ ಬಂಧಿತನಾಗಿ ಈಗಾಗಲೇ ಜೈಲಿನಲ್ಲಿದ್ದಾನೆ. ಪತಿ ಮಗಳ ಜತೆಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸ್ವತಃ ಗಂಗಾದೇವಿಯೇ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿ | Self Harming: 7ನೇ ಮಹಡಿಯಿಂದ ಜಿಗಿದು ಯೂಟ್ಯೂಬರ್ ಜೋಡಿ ಆತ್ಮಹತ್ಯೆ
ಕೊಲೆಗೆ ಕಾರಣವೇನು?
ಮಕ್ಕಳಿಬ್ಬರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಗಂಗಾದೇವಿ ಕಂಟ್ರೊಲ್ ರೂಂಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಗಂಗಾದೇವಿಗೆ ಹತ್ತು ವರ್ಷಗಳ ಹಿಂದೆ ಮದುವೆಯಾಗಿತ್ತು. ಆಕೆಯ ಪತಿ ಪತಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳು ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ʼʼಕೇಸ್ ಸಂಬಂಧ ಕೌನ್ಸಿಲಿಂಗ್ ನಡೆಸಿ ಆತನನ್ನು ಬಂಧಿಸಲಾಗಿತ್ತು. ಹೀಗಾಗಿ ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಗಂಗಾದೇವಿ ಈ ಕೃತ್ಯ ಎಸಗಿದ್ದಾಳೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದರು.