Site icon Vistara News

ಜನೋತ್ಸವ ಆಚರಣೆ ಮೇಲೆ ಕಾರ್ಮೋಡ: ಕರಾವಳಿ ಶಾಸಕರು, ಸಚಿವರ ಗೈರು

BJP Workers Murder 1

ಬೆಂಗಳೂರು: ಬಿಜೆಪಿ ಸರ್ಕಾರದ ಮೂರು ವರ್ಷ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತದ ಒಂದು ವರ್ಷದ ಸಂಭ್ರಮಾಚರಣೆಗೆ ಇದೀಗ ಕಾರ್ಮೋಡ ಕವಿದಿದೆ. ಸತತ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಿಜೆಪಿ ಕಾರ್ಯಕರ್ತರ ಆಕ್ರೋಶದ ನಡುವೆ ಜನೋತ್ಸವ ಕಾರ್ಯಕ್ರಮದ ಮೂಲಕ ಸಂಭ್ರಮಾಚರಣೆ ನಡೆಸುವುದು ಎಷ್ಟು ಸರಿ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ.

ಚುನಾವಣೆ ವರ್ಷದಲ್ಲಿ ಸಂಭ್ರಮಾಚರಣೆ ಹಾಗೂ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡುವ ಚಿಂತನೆಯಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈಗ ಇಕ್ಕಟ್ಟಿನಲ್ಲಿ ಸಿಲುಕಿದೆ. ಶಿವಮೊಗ್ಗದಲ್ಲಿ ಫೆಬ್ರವರಿ 21ರಂದು ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಡೆದಿತ್ತು. ಇದರ ನಂತರ ಕಾರ್ಯಕರ್ತರಲ್ಲಿ ಆಕ್ರೋಶ ಹೆಚ್ಚಾಗಿತ್ತು. ಒತ್ತಡಕ್ಕೆ ಮಣಿದ ಸರ್ಕಾರ ಪ್ರಕರಣವನ್ನು ಎನ್‌ಐಎಗೆ ವಹಿಸಿತು. ಆರು ಆರೋಪಿಗಳನ್ನು ಬಂಧಿಸಿರುವ ಎನ್‌ಐಎ ಈಗಾಗಲೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ | Praveen Murder| ಕೇಂದ್ರವೂ ನಮ್ಮದೇ, ರಾಜ್ಯವೂ ನಮ್ಮದೇ ಕೊನೆಗೆ ಸಾವೂ ನಮ್ಮದೇ: ಕಾರ್ಯಕರ್ತರ ಆಕ್ರೋಶ

ಈ ನಡುವೆ ಸುಳ್ಯದ ಬೆಳ್ಳಾರೆಯಲ್ಲಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ನಡೆದಿದೆ. ಹತ್ಯೆ ನಡೆದ ಕೂಡಲೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ʻಸರ್ಕಾರವೂ ನಮ್ಮದೇ, ಸಾವೂ ನಮ್ಮದೇʼ ಎನ್ನುತ್ತ ಅಸಮಾಧಾನ ಹೊರಹಾಕುತ್ತಿದ್ದಾರೆ.

ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಹೇಳಿಕೆಗಳಿಗಷ್ಟೆ ಸರ್ಕಾರದವರ ಕ್ರಮ ಸೀಮಿತವಾಗಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಇದರ ಜತೆಗೆ ಚಿಕ್ಕಮಗಳೂರು, ಬೆಂಗಳೂರು, ಗ್ರಾಮಾಂತರ ಸೇರಿ ಅನೇಕ ಜಿಲ್ಲೆಗಳ ಯುವ ಮೋರ್ಚಾ, ಸಾಮಾಜಿಕ ಜಾಲತಾಣ ಪ್ರಕೋಷ್ಠಗಳ ಯುವ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಒಟ್ಟಾರೆ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಬಂದರೆ ಹಿಂದುಗಳಿಗೆ, ಹಿಂದು ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತದೆ. ಭಯೋತ್ಪಾದಕರನ್ನು ಹಿಡಿದು ಹೊರಗಟ್ಟಲಾಗುತ್ತದೆ ಎಂದು ವಾಗ್ದಾನ ನೀಡಲಾಗಿತ್ತು. ಆದರೆ ಇದೀಗ ಬೆಂಗಳೂರು ಮತ್ತಿತರ ಕಡೆಗಳಲ್ಲಿ ಭಯೋತ್ಪಾದಕ ಆರೋಪದಲ್ಲಿ ಅನೇಕರು ಬಂಧಿತರಾಗುತ್ತಿದ್ದಾರೆ. ರಾಜಧಾನಿ ಬೆಂಗಳೂರು ಭಯೋತ್ಪಾದನೆಯ ಸ್ಲೀಪರ್‌ಸೆಲ್‌ ಆಗಿದೆ ಎಂಬ ಆರೋಪವೂ ಇದೆ. ಇದೆಲ್ಲದರ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ವಿರೋಧಪಕ್ಷಗಳಿಗಿಂತಲೂ ಹೆಚ್ಚಾಗಿ ತಮ್ಮ ಪಕ್ಷದಲ್ಲೆ ಪ್ರತಿರೋಧ ಬರುತ್ತಿದೆ. ಇದೆಲ್ಲದರ ನಡುವೆ ಸರ್ಕಾರ ಒಂದು ವರ್ಷದ ಸಾಧನೆ ಸಮಾವೇಶವನ್ನು ಹೇಗೆ ಮಾಡುತ್ತದೆ ಎನ್ನುವುದು ಪ್ರಶ್ನೆ.

ಸಮಾವೇಶ ಯಾವ ಪುರುಷಾರ್ಥಕ್ಕೆ?

ಕಾರ್ಯಕರ್ತನ ಹತ್ಯೆ ಆಗಿರುವ ಕಾರಣ ದಕ್ಷಿಣ ಕನ್ನಡದ ಯಾವುದೇ ಶಾಸಕರೂ, ಸಚಿವರೂ ಭಾಗವಹಿಸುವುದಿಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ಇದರ ಜತೆಗೆ, ಹಿಂದುತ್ವ ಅಜೆಂಡಾ ಹೊಂದಿರುವ ಸಿ.ಟಿ. ರವಿ ಸೇರಿ ಅನೇಕರು ಭಾಗವಹಿಸುತ್ತಾರೆಯೇ ಎಂಬ ಅನುಮಾನವೂ ಇದೆ.

ಬಿಜೆಪಿ ಕಾರ್ಯಕರ್ತರ ನಡುವೆ ಸಮಾವೇಶದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಕಾರ್ಯಕರ್ತರ ಹತ್ಯೆ ಆದ ಮಾರನೆಯ ದಿನವೇ ಸಾಧನೆ ಸಮಾವೇಶ ನಡೆಸುವ ಅಗತ್ಯವಿದೆಯೇ? ಯಾವ ಪುರುಷಾರ್ಥಕ್ಕೆ ಈ ಕಾರ್ಯಕ್ರಮ ಆಚರಿಸಬೇಕು? ಕಾರ್ಯಕರ್ತನ ಸಾವಿನ ನೆರಳಿನಲ್ಲಿ ಸಂಭ್ರಮ ಆಚರಿಸುವ ಅಗತ್ಯವಿದೆಯೇ? ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಬಿರುಸಿನ ಚರ್ಚೆ ನಡೆದಿದೆ.

ರಾಜ್ಯ ಬಿಜೆಪಿಯಲ್ಲೂ ಈ ಕುರಿತು ಗಂಭೀರ ಚರ್ಚೆ ನಡೆದಿದೆ. ಕಾರ್ಯಕರ್ತರ ಒತ್ತಡ ಹೆಚ್ಚಾಗಿರುವುದರಿಂದ ಕಾರ್ಯಕ್ರಮವನ್ನು ಮುಂದೂಡಬೇಕೆ ಎಂಬ ಸಲಹೆಗಳೂ ಕೇಳಿಬಂದಿವೆ. ಈಗಾಗಲೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆಗಮಿಸುತ್ತಿರುವುದು ಖಚಿತವಾಗಿದೆ. ಹಾಗಾಗಿ ಕಾರ್ಯಕ್ರಮ ರದ್ದು ಮಾಡುವುದು ಬೇಡ ಎಂಬ ವಾದವೂ ಇದೆ. ಇದೆಲ್ಲವನ್ನೂ ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಕಚೇರಿಗೆ ತೆರಳಲಿದ್ದಾರೆ. ಅಲ್ಲಿನ ಚರ್ಚೆ ನಂತರ ಅಂತಿಮ ತೀರ್ಮಾನವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Praveen Nettaru Murder| ಬೆಳಗಿನವರೆಗೂ ಬಾರದ ಬಿಜೆಪಿ ನಾಯಕರು, ಬಂಧುಗಳ ಆಕ್ರೋಶ

Exit mobile version