ಬೆಂಗಳೂರು: ಇವನೊಬ್ಬ ನಕಲಿ ಸ್ವಾಮಿ, ಈತ ಎಷ್ಟು ಅಪಾಯಕಾರಿ ಎಂದರೆ ತಾನು ಶ್ರೀಕೃಷ್ಣ ಎಂದು ಪತ್ನಿಯನ್ನೂ ನಂಬಿಸಿದ್ದಾನೆ. ಆಕೆ ಎದುರು ಯುವತಿಯೊಬ್ಬಳನ್ನು ಕರೆತಂದು ನೀನು ರುಕ್ಮುಣಿ, ಇವಳು ರಾಧೆ ಎಂದಿದ್ದಾನೆ. ಈ ಮೂಲಕ ಪತ್ನಿಯ ಸಾಥ್ ಪಡೆದು ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ದೌರ್ಜನ್ಯ ಎಸಗಿದ್ದಾನೆ.
ಇಲ್ಲಿನ ಅವಲಹಳ್ಳಿ ಸಮೀಪದ ಮನೆಯೊಂದರಲ್ಲಿ ಆನಂದಮೂರ್ತಿ ಎಂಬ ನಕಲಿ ಸ್ವಾಮಿಯೊಬ್ಬ, ಕಳೆದ 7 ವರ್ಷದಿಂದ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ (Sexual assault) ಎಸಗಿರುವುದು ಬೆಳಕಿಗೆ ಬಂದಿದೆ. ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸಂತ್ರಸ್ತ ಯುವತಿಯು ಈತನಿಗೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿದ್ದಳು. ಆಗ ಈತ ತಾನು ಸ್ವಾಮೀಜಿ ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದಾನೆ. ನಿನಗೆ ಮತ್ತು ನಿನ್ನ ಕುಟುಂಬಕ್ಕೆ ದೋಷವಿದೆ. ಪರಿಹಾರಕ್ಕಾಗಿ ತನ್ನ ಆಶ್ರಮಕ್ಕೆ ಬರುವಂತೆ ಯುವತಿಯನ್ನು ಕರೆಸಿಕೊಂಡಿದ್ದ. ಬಳಿಕ ಪೂಜೆ ಮಾಡುವ ನೆಪದಲ್ಲಿ ಮತ್ತುಬರುವ ಔಷಧ ನೀಡಿ ಅತ್ಯಾಚಾರಗೈದಿರುವ ಆರೋಪ ಕೇಳಿಬಂದಿದೆ. ಈ ಕೃತ್ಯಕ್ಕೆ ಆತನ ಪತ್ನಿಯನ್ನೂ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಖಾಸಗಿ ವಿಡಿಯೊ ಚಿತ್ರಿಸಿ ಬ್ಲ್ಯಾಕ್ ಮೇಲ್
ನಿನ್ನ ಜಾತಕದ ಪ್ರಕಾರ ನೀನು ನನ್ನೊಂದಿಗೆ ಇರಬೇಕು ಎಂದು ಯುವತಿಯನ್ನು ಆನಂದಸ್ವಾಮಿ ಪುಸಲಾಯಿಸಿದ್ದ. ನಾನು ಕಾಳಿ ಆರಾಧಕನಾಗಿದ್ದೇನೆ. ನನ್ನನ್ನು ನಂಬು ನಿನ್ನ ಎಲ್ಲ ಕಷ್ಟಗಳನ್ನು ಪರಿಹಾರ ಮಾಡುತ್ತೇನೆ. ನನ್ನ ಆಶ್ರಮಕ್ಕೆ ಬಾ ನಿನಗೆ ದೀಕ್ಷೆ ಕೊಡುತ್ತೇನೆ ಎಂದು ಹೇಳಿ ಕರೆಸಿಕೊಂಡು ದೌರ್ಜನ್ಯ ಎಸಗಿದ್ದಾನೆ. ಕಳೆದ 7 ವರ್ಷಗಳಿಂದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪವಿದೆ. ಆನಂದಮೂರ್ತಿ ಹಾಗೂ ಸಂತ್ರಸ್ತೆ ಜತೆ ಇದ್ದ ಖಾಸಗಿ ಕ್ಷಣಗಳನ್ನು ಆತನ ಪತ್ನಿ ಮೂಲಕ ವಿಡಿಯೊ ಮಾಡಿಸಿಕೊಳ್ಳಲಾಗಿದೆ. ಬಳಿಕ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮುರಿದು ಬಿತ್ತು ಯುವತಿಯ ನಿಶ್ಚಿತಾರ್ಥ
ಇತ್ತೀಚೆಗೆ ಈತ ಯುವತಿಗೆ ಮದುವೆ ಆಗುವಂತೆ ಹೇಳಿದ್ದಾನೆ. ಇದನ್ನು ನಂಬಿ ವಿವಾಹವನ್ನು ನಿಶ್ಚಯಿಸಿಕೊಳ್ಳಲಾಗಿದೆ. ಆದರೆ, ಬಳಿಕ ಆನಂದಮೂರ್ತಿ ನಿಶ್ಚಯವಾಗಿದ್ದ ಹುಡುಗನಿಗೆ ಯುವತಿಯ ಖಾಸಗಿ ಫೋಟೊವನ್ನು ಕಳುಹಿಸಿದ್ದಾನೆ. ಆನಂದಮೂರ್ತಿಯ ಕೃತ್ಯದಿಂದ ಯುವತಿಯ ನಿಶ್ಚಿತಾರ್ಥ ಮುರಿದುಬಿದ್ದಿದೆ. ಯುವತಿಯ ಪೋಷಕರು ಕಂಗಾಲಾಗಿದ್ದು, ಕೆಆರ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂತ್ರಸ್ತೆಯ ಮಾದರಿಯಲ್ಲಿ ಇನ್ನೂ ಇಬ್ಬರಿಗೆ ಅತ್ಯಾಚಾರ ಮಾಡಿರುವ ಆರೋಪ ಇದ್ದು, ಸಂತ್ರಸ್ತೆಯರಿಂದ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ಕುಟುಂಬವನ್ನೇ ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | ಯುವತಿಯರ `ಜಾಲಾ’ಡಿ ವಿಡಿಯೊ ಬಳಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕ ಸೆರೆ