ಮೈಸೂರು: ಮೈಸೂರಿನಲ್ಲಿ ಉದ್ಯಮಿ ಎಂದು ಹೇಳಿಕೊಳ್ಳುತ್ತಾ, ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳ ಜತೆ ನೇರ ಸಂಪರ್ಕವಿದೆ ಎಂದು ನಂಬಿಸುತ್ತಿರುವ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಎಂಬಾತನ ಮೇಲೆ ದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆಯ (Sexual harrassement) ಕೇಸು ದಾಖಲಿಸಿದ್ದಾರೆ.
ಕೆಲಸ ಕೊಡಿಸುವ ನೆಪದಲ್ಲಿ ತನಗೆ ವಂಚನೆ ಮಾಡಿ, ಬಲಾತ್ಕಾರ ಮಾಡಿ ಬೆತ್ತಲೆ ಫೋಟೊಗಳನ್ನು ಬಳಸಿಕೊಂಡು ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ. ೨೦೧೯ರಿಂದ ಆರಂಭವಾಗಿರುವ ಈ ಅತ್ಯಾಚಾರ, ವಂಚನೆಯ ಸರಣಿ ಈಗ ೨೦೨೨ದ ಕೊನೆಯವರೆಗೂ ಮುಂದುವರಿದಿದ್ದು, ಈಗ ಮಹಿಳೆ ಪೊಲೀಸರ ಮೊರೆ ಹೊಕ್ಕಿದ್ದಾರೆ. ಈತನ ಹಿನ್ನೆಲೆಯನ್ನು ಅರಿಯಲು ಮುಂದಾದ ಪೊಲೀಸರಿಗೆ ಆತ ರಾಜ್ಯದ ಹಿರಿಯ ರಾಜಕೀಯ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳ ಜತೆ ಸಂಬಂಧ ಹೊಂದಿರುವುದು ತಿಳಿದುಬಂದಿದೆ. ಎಲ್ಲ ರಾಜಕಾರಣಿಗಳಿಗೆ ತಾನು ಆತ್ಮೀಯ, ಅವರ ಜತೆ ಒನ್ ಟು ಒನ್ ಎಂಬಂಧ ಹೊಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಈ ಸ್ಯಾಂಟ್ರೊ ರವಿಯ ಹಿನ್ನೆಲೆಯನ್ನು ಬಗೆಯಲು ಈಗ ಪೊಲೀಸರು ಮುಂದಾಗಿದ್ದಾರೆ.
ಎಲ್ಲಿಂದ ಆರಂಭವೋ!!
೨೦೧೯ರ ಫೆಬ್ರವರಿಯಲ್ಲಿ ಮೈಸೂರಿನ ಪತ್ರಿಕೆಯೊಂದರಲ್ಲಿ ಫೈನಾನ್ಸ್ ಕಂಪನಿಗೆ ಅಸಿಸ್ಟೆಂಟ್ ಬೇಕಾಗಿದೆ ಎಂಬ ಜಾಹೀರಾತು ಬಂದಿದ್ದು ಅದನ್ನು ಆಧರಿಸಿ ಮಾರ್ಚ್ ೨ರಂದು ವಿಜಯ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಕಟ್ಟಡಕ್ಕೆ ತಾನು ಸಂದರ್ಶನಕ್ಕಾಗಿ ಹೋಗಿದ್ದಾಗಿ ಮಹಿಳೆ ವಿವರಿಸಿದ್ದಾರೆ. ಮೈಸೂರಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಬಿಇ ಮುಗಿಸಿದ್ದ ಈ ಯುವತಿ ೧೪ ಸಾವಿರ ರೂ. ವೇತನದ ಫೈನಾನ್ಸ್ ಅಸಿಸ್ಟೆಂಟ್ ಹುದ್ದೆಗೆ ಸಂದರ್ಶನಕ್ಕೆ ಹೋಗಿದ್ದರು.
ಆವತ್ತೇ ಸಂದರ್ಶನ ಅಂತ್ಯಗೊಂಡಿದ್ದು, ಕಚೇರಿಯ ಕೆಲಸಕ್ಕೆಂದು ಒಂದು ಮೊಬೈಲನ್ನು ಮಂಜುನಾಥ್ ಆಕೆಗೆ ಕೊಡಿಸಿದ್ದಾನೆ ಎನ್ನಲಾಗಿದೆ. ಮಾರ್ಚ್ ೭ರಿಂದ ಉದ್ಯೋಗ ಪ್ರಾರಂಭಗೊಂಡಿದ್ದು, ಆವತ್ತೇ ಮಧ್ಯಾಹ್ನ ತನಗೆ ಮತ್ತು ಬರುವ ಪಾನೀಯ ನೀಡಿ ಅತ್ಯಾಚಾರ ಮಾಡಲಾಯಿತು ಎಂದು ಆಕೆ ಆರೋಪಿಸುತ್ತಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದಾಗ, ಮತ್ತಿನ ಸಂದರ್ಭದಲ್ಲಿ ತೆಗೆದ ಬೆತ್ತಲೆ ಚಿತ್ರಗಳನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಲಾಯಿತು ಎಂದು ದೂರಿನಲ್ಲಿ ವಿವರಿಸಲಾಗಿದೆ. ಜತೆಗೆ ಕಚೇರಿಯಿಂದ ೧೦ ಲಕ್ಷ ರೂ. ಕದ್ದಿರುವ ಆರೋಪ ಮಾಡಿ ಒಳಗೆ ಹಾಕಿಸುವ ಧಮಕಿ ನೀಡಲಾಗಿದೆ ಎನ್ನಲಾಗಿದೆ.
ಇಷ್ಟೆಲ್ಲ ಆದ ಬಳಿಕವೂ ೨೦೧೯ರ ಏಪ್ರಿಲ್‌ನಲ್ಲಿ ಅದೇ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಜತೆ ಅದೇ ಮಹಿಳೆಯರ ಮದುವೆ ಕೇವಲ ೪೦ ಜನರ ಉಪಸ್ಥಿತಿಯಲ್ಲಿ ನಡೆಯುತ್ತದೆ. ಹಿರಿಯ ವಕೀಲರೊಬ್ಬರನ್ನು ಮಂಜುನಾಥ್ ತನ್ನ ಅಣ್ಣನೆಂದು ಪರಿಚಯಿಸಿ ಅವರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದಾನೆ ಎನ್ನುತ್ತಾರೆ ಈ ಮಹಿಳೆ. ಮುಂದೆ ಒಂದು ದಿನ ಮನೆಗೆ ತಾನು ಬಾರದೆ ಇದ್ದಾಗ ಇಲ್ಲದ ಸಂಬಂಧಗಳನ್ನು ಕಟ್ಟಿ, ಜಾತಿ ನಿಂದನೆ ಮಾಡಿದ್ದಾನೆ ಎನ್ನುವುದು ಆರೋಪ. ಈ ನಡುವೆ, ಮಹಿಳೆಗೆ ಲೈಂಗಿಕ ರೋಗವೊಂದು ಕಾಣಿಸಿಕೊಳ್ಳುತ್ತದೆ. ಅದು ತನಗೆ ಮಂಜುನಾಥನಿಂದಲೇ ಬಂದಿದೆ. ಅವನು ತನಗೆ ಲೈಂಗಿಕ ರೋಗವಿರುವುದು ಗೊತ್ತಿದ್ದರೂ ತನ್ನೊಂದಿಗೆ ಸಂಬಂಧ ಬೆಳೆಸಿದ್ದಾನೆ ಎನ್ನುವುದು ಆಕೆಯ ಆರೋಪ.
ಇಷ್ಟೆಲ್ಲ ಘಟನಾವಳಿಗಳ ಆಚೆಗೂ ಮಂಜುನಾಥ ಆಕೆಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗುವುದು, ರೂಮ್ ಬುಕ್ ಮಾಡುವುದು, ಮನೆಯಲ್ಲೂ ಜತೆಯಾಗಿರುವುದೆಲ್ಲ ನಡೆಯುತ್ತದೆ. ಇದರ ನಡುವೆ, ಮಂಜುನಾಥ ತನ್ನ ಕುಟುಂಬದಿಂದ ೧೦ ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ ಎಂಬ ಆರೋಪವನ್ನೂ ಆಕೆ ಮಾಡುತ್ತಾಳೆ. ೨ನೇ ಬಾರಿ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿದ್ದಾನೆ, ಬೇರೆಯವರ ಜತೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿ ಬ್ಲ್ಯಾಕ್ ಮೇಲ್ ಮಾಡುತ್ತಾನೆ ಎಂದೆಲ್ಲ ಆರೋಪಗಳನ್ನು ಮಾಡಲಾಗಿದ್ದು, ನ್ಯಾಯ ನೀಡುವಂತೆ ಮಹಿಳೆ ಕೋರಿದ್ದಾರೆ.
ಯಾರ ಜತೆಗೆಲ್ಲ ಸಂಪರ್ಕ?
ಈ ನಡುವೆ ಆರೋಪಿಯ ಹಿನ್ನೆಲೆಯನ್ನು ಕೆದಕುತ್ತಾ ಹೋದ ಪೊಲೀಸರಿಗೆ ಆತನನ್ನು ಕುರಿತಾದ ಹಲವು ಆಡಿಯೊ, ಚಿತ್ರಗಳು ಸಿಕ್ಕಿವೆ. ಆರೋಪಿ ಮಂಜುನಾಥ್ ತಾನು ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ರಾಜಕಾರಣಿಗಳಿಗೆ ಆಪ್ತನೆಂಬಂತೆ ಫೋಸು ಕೊಡುತ್ತಿರುವುದು ಬೆಳಕಿಗೆ ಬಂದಿದೆ. ಜತೆಗೆ ಆತ ಅವರೊಂದಿಗೆ ಇರುವ ಭಾವಚಿತ್ರಗಳನ್ನೂ ಇಟ್ಟುಕೊಂಡಿದ್ದು, ಅವೆಲ್ಲ ಈಗ ವೈರಲ್ ಆಗಿವೆ.
ಸಿಎಂ ಬಸವರಾಜ ಬೊಮ್ಮಾಯಿ, ಪುತ್ರ ಭರತ್ ಬೊಮ್ಮಾಯಿ, ಸಚಿವರಾದ ಅಶೋಕ, ಆರಗ ಜ್ಞಾನೇಂದ್ರ ಜತೆ ಇರುವ ಫೋಟೊಗಳು ವೈರಲ್ ಆಗುತ್ತಿವೆ. ಕೆಲವರು ಆತನ ಜತೆ ಗಳಸ್ಯ ಕಂಠಸ್ಯ ಎಂಬಂತೆಯೂ ಇದ್ದಾರೆ.
ಸ್ಯಾಟ್ರೋ ರವಿ ಕಾಲ್ ಲಿಸ್ಟ್ ನಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್, ಸುಧಾಕರ್, ಆರಗ ಜ್ಞಾನೇಂದ್ರ, ಶಾಸಕ ಸಾ.ರಾ.ಮಹೇಶ್, ಐಪಿಎಸ್ ಅಧಿಕಾರಿ ಜಿನೇಂದ್ರ ಕಾಂಗಾವಿ ಜತೆಗೆ ಸಂಪರ್ಕ ಇರುವುದು ಗೊತ್ತಾಗಿದೆ. ಆರೋಪಿ ಪೊಲೀಸ್ ವರ್ಗಾವಣೆ ವಿಚಾರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಬಳಸಿರುವ ಆಡಿಯೋ ವೈರಲ್ ಆಗಿದ್ದು, ಬೇಕಾದ ಸ್ಟೇಷನ್‌ಗೆ ಮಾಡಿಸಿಕೊಡುವ ಭರವಸೆ ನೀಡುತ್ತಾನೆ. ಆರೋಪಿ ಕಂತೆ ಕಂತೆ ನೋಟ್ ಇಟ್ಟುಕೊಂಡಿರುವ ಪೋಟೊ ಕೂಡ ವೈರಲ್ ಆಗಿದೆ. ಮೈಸೂರು ಪೊಲೀಸರು ಈಗ ಆತನ ನಿಜ ಬಣ್ಣ ಬಯಲು ಮಾಡಲು ಮುಂದಾಗಿದ್ದಾರೆ.